ಮುಧೋಳ [ಡಿ.04]: ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಯಾದವಾಡ ಗ್ರಾಮದ ಅನ್ಮೋಲ್ ಎಸ್.ಇಟ್ನಾಳ ಅವರು ಭಾರತೀಯ ನೌಕಾಪಡೆ ಮಹಿಳಾ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
ಈ ಹಿನ್ನೆಲೆ ಅನ್ಮೋಲ್ ಅವರಿಗೆ ಪ್ರತಿಜ್ಞಾ ವಿಧಿ ಸಮಾರಂಭ ಇತೀಚೆಗೆ ಕೇರಳದ ನೌಕಾದಳದ ಕೇಂದ್ರ ಕಚೇರಿ ವಿಜಿಮಲಾದಲ್ಲಿ ನೆರವೇರಿತು. ಅನ್ಮೋಲ್ ಅವರ ತಂದೆ ಸುಧೀಂದ್ರ ಹನಮಂತರಾವ ಇಟ್ನಾಳ ಭಾರತೀಯ ಸೈನಿಕ ದಳದಲ್ಲಿ ಹಿರಿಯ ಬ್ರಿಗೇಡಿಯರ್ ಆಗಿ ಹೊಸದಿಲ್ಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅನ್ಮೋಲ್ ಅವರ ಅಣ್ಣ ಶ್ರೇಯಸ್ ಅವರು ಭಾರತೀಯ ಸೈನಿಕ ದಳದಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಇವರ ತಂದೆ ಹಾಗೂ ಸಹೋದರನ ಸೇವೆಯಿಂದ ಪ್ರಭಾವಿತಳಾಗಿ ಐಟಿ ಉದ್ಯೋಗ ಬಿಟ್ಟು ದೇಶಸೇವೆಗಾಗಿ ಅವರು ನೌಕಾದಳ ಸೇರಿರುವುದು ವಿಶೇಷ. ಬಿ.ಇ ಕಂಪ್ಯೂಟರ್ ಪದವೀಧರರಾದ ಅವರು ವಿದ್ಯಾರ್ಥಿಯಾಗಿದ್ದಾಗಲೇ ಸೇನೆಗೆ ಸೇರುವ ಆಸಕ್ತಿ ಹೊಂದಿದ್ದರು.