ಕರ್ನಾಟಕದ ಮುಧೋಳ ಶ್ವಾನಕ್ಕೆ ರಾಷ್ಟ್ರೀಯ ಭದ್ರತಾ ಪಡೆ ಫಿದಾ;


ಮುಧೋಳ: ದೇಶದ ಅತ್ಯುನ್ನತ ಭದ್ರತಾ ಪಡೆ, ಗಣ್ಯಾತಿಗಣ್ಯರಿಗೆ ಭದ್ರತೆ ಒದಗಿಸುವ ನ್ಯಾಷನಲ್‌ ಸೆಕ್ಯೂರಿಟಿ ಗಾರ್ಡ್‌ಗೆ (ರಾಷ್ಟ್ರೀಯ ಭದ್ರತಾ ಪಡೆ) ಮುಧೋಳ ನಾಯಿ ಆಯ್ಕೆಯಾಗಿದೆ.

ಈಗಾಗಲೇ ಭಾರತೀಯ ಸೇನೆ, ರಾಜಸ್ತಾನದ ಎಸ್‌ಎಸ್‌ಬಿ ಹಾಗೂ ರಾಜ್ಯದ ಸಿಆರ್‌ಪಿಎಫ್‌ಗೆ ಆಯ್ಕೆಯಾಗಿರುವ ಮುಧೋಳ ಶ್ವಾನಕ್ಕೆ ಎನ್‌ ಎಸ್‌ಜಿ ಕಮಾಂಡೋ ಪಡೆ ನಾಲ್ಕು ಮರಿಗಳಿಗೆ ಬೇಡಿಕೆ ಸಲ್ಲಿಸಿದೆ. ಇನ್ನೆರಡು ವಾರದಲ್ಲಿ ದೆಹಲಿಯ ಎನ್‌ಎಸ್‌ಜಿ ಪಡೆಯ ಹಿರಿಯ ಅಧಿಕಾರಿಗಳು ತಿಮ್ಮಾಪುರದಲ್ಲಿರುವ ಮುಧೋಳ ಶ್ವಾನ ಸಂಶೋಧನೆ ಮತ್ತು ಸಂರಕ್ಷಣೆ ಕೇಂದ್ರಕ್ಕೆ ಆಗಮಿಸಿ, ಮರಿಗಳನ್ನು ತೆಗೆದುಕೊಂಡು ಹೋಗಲಿದ್ದಾರೆ. ಈ ಕೇಂದ್ರದಲ್ಲಿ ಸದ್ಯ 45 ಮುಧೋಳ ಶ್ವಾನ ಮರಿಗಳಿದ್ದು, ಅದರಲ್ಲಿ ಎನ್‌ ಎಸ್‌ಜಿ ಅಧಿಕಾರಿಗಳೇ ಮರಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಈಗಾಗಲೇ ದೇಶದ ಮಿಲಿಟರಿ ಸೇವೆಗೆ ಮುಧೋಳ ಶ್ವಾನ ಸೇರ್ಪಡೆಯಾಗಿದೆ. 2016ರಲ್ಲಿ 50 ದಿನಗಳ 9 ಮರಿಗಳನ್ನು ಮಿಲಿಟರಿ ಅಧಿಕಾರಿಗಳು ಪಡೆದಿದ್ದರು. ಉತ್ತರ ಪ್ರದೇಶದ ಮೀರತ್‌ನಲ್ಲಿ 9 ತಿಂಗಳ ಕಾಲ ಅವುಗಳಿಗೆ ತರಬೇತಿ ನೀಡಲಾಗಿತ್ತು. ತರಬೇತಿ ವೇಳೆ ಜರ್ಮನ್‌ ಶಫರ್ಡ್‌ ಮತ್ತು ಲ್ಯಾಬ್ರಡಾರ್‌ ತಳಿಯ ಶ್ವಾನಗಳಿಗೂ ತರಬೇತಿ ನೀಡಲಾಗುತ್ತಿತ್ತು. ಈ ವಿದೇಶಿ ತಳಿಗಳಿಂತಲೂ ಅತಿ ವೇಗವಾಗಿ ಮುಧೋಳ ಶ್ವಾನ ತರಬೇತಿ ಪಡೆದಿತ್ತು. ಇದೀಗ ಸೇನೆಯಲ್ಲಿ ಮುಧೋಳ ಶ್ವಾನ 2018ರಿಂದ ಗಡಿ ಕಾಯುವ ಕಾಯಕದಲ್ಲಿದೆ. 9 ಶ್ವಾನಗಳಿಗೂ ತಲಾ ಒಬ್ಬ ಮಿಲಿಟರಿ ಅಧಿಕಾರಿಗಳಿದ್ದಾರೆ.

ವಾರದಲ್ಲಿ ಹಸ್ತಾಂತರ: ಪ್ರಧಾನಮಂತ್ರಿ, ರಾಷ್ಟ್ರಪತಿ, ಕೇಂದ್ರದ ಗೃಹ ಸಚಿವರು ಸೇರಿದಂತೆ ಗಣ್ಯಾತಿಗಣ್ಯರಿಗೆ ಭದ್ರತೆ ಒದಗಿಸುವ ಎನ್‌ಎಸ್‌ಜಿ ಕಮಾಂಡೋ ಪಡೆ ಕೂಡ ಮುಧೋಳ ಶ್ವಾನ ಆಯ್ಕೆ ಮಾಡಿಕೊಂಡಿದ್ದು ನಾಲ್ಕು ಮರಿ ಕೇಳಿದ್ದಾರೆ. ಇನ್ನೊಂದು ವಾರ ಇಲ್ಲವೇ ಜನವರಿ ವೇಳೆಗೆ ದೇಶದ ಎನ್‌ಎಸ್‌ಜಿ ಪಡೆಗೂ ಮುಧೋಳ ಶ್ವಾನ ಸೇರ್ಪಡೆಯಾಗಲಿದೆ. ಆ ಮೂಲಕ ದೇಶೀಯತಳಿ ಮುಧೋಳ ಶ್ವಾನಕ್ಕೆ ಮತ್ತೂಂದು ಗರಿ ದೊರೆಯಲಿದೆ.

ವಿಶೇಷತೆ ಏನು?
ಮುಧೋಳ ಶ್ವಾನ ವಿಶ್ವದ 332 ಶ್ವಾನ ತಳಿಗಳಲ್ಲೇ ಅತಿ ವಿಶೇಷವಾಗಿದೆ. ಭಾರತದಲ್ಲಿ 20 ದೇಶೀಯ ತಳಿಗಳಿದ್ದು, ಅದರಲ್ಲಿ 7 ತಳಿಗಳು ಮಾತ್ರ ಪ್ರಚಲಿತದಲ್ಲಿವೆ. ರಾಜಪಾಳೆ, ಕನ್ನಿ, ಕುಂಷಿ, ಸೋಲಕಿ, ಪಶ್ಮಿ, ಗ್ರೆಯ್‌ ಹೌಂಡ್‌, ಅಪಾನ್‌ ಹೌಂಡ್‌ ಹಾಗೂ ಮುಧೋಳ ತಳಿ ಈಗ ಹೆಚ್ಚು ಪ್ರಚಲಿತದಲ್ಲಿದೆ. ಈ ಏಳು ತಳಿಗಳಲ್ಲೇ ಮುಧೋಳ ತಳಿ ಅತ್ಯಂತ ಕಡಿಮೆ ದೇಹ ಭಾರ ಹೊಂದಿರುವ ಮತ್ತು ಅತ್ಯಂತ ಬಲಿಷ್ಠವಾದ ಶ್ವಾನ. ಅಲ್ಲದೇ ಕೈ-ಕಾಲು ಅತ್ಯಂತ ಉದ್ದ-ಎತ್ತರವಿದ್ದು, ಗಂಟೆಗೆ 50 ಕಿಮೀ ವೇಗ ಓಡಬಲ್ಲ ಸಾಮರ್ಥ್ಯ ಹೊಂದಿವೆ. ಉಳಿದ ಶ್ವಾನಗಳ ದೇಹ ಭಾರವಾಗಿದ್ದು, ಗಂಟೆಗೆ 25ರಿಂದ 30 ಕಿಮೀ ಮಾತ್ರ ಓಡಬಲ್ಲವು. ಮುಧೋಳ ನಾಯಿಯ ಇನ್ನೊಂದು ವಿಶೇಷವೆಂದರೆ ಮೂರು ಕಿಮೀ ದೂರದಿಂದಲೇ ವಾಸನೆ ಕಂಡು ಹಿಡಿಯಬಲ್ಲ ಸಾಮರ್ಥ್ಯ ಹೊಂದಿವೆ. ಉಳಿದ ನಾಯಿಗಳಿಗೆ 1 ಕಿಮೀ ವ್ಯಾಪ್ತಿಯ ವಾಸನೆ ಅರಿಯುವ ಸಾಮರ್ಥ್ಯವಿದೆ. ಹೀಗಾಗಿ ಭದ್ರತಾ ಪಡೆ ಮಿಲಿಟರಿ ಸೇವೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

ನವೀನ ಹಳೆಯದು