ವೃತ್ತಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿ; ಪ್ರವೃತ್ತಿಯಲ್ಲಿ ಜಾನಪದ ಹಾಡುಗಳ ರಚನೆಗಾರ್ತಿ

ಮುಧೋಳ(ಜ.15): ಕೆಲವೊಬ್ಬರ ಜೀವನದಲ್ಲಿ ವೃತ್ತಿ ಪ್ರವೃತ್ತಿ ಎರಡೂ ಒಂದೇ ಆಗಿರುತ್ತೆ. ಆದರೆ ಇಲ್ಲೊಬ್ಬರು ವೃತ್ತಿಯಲ್ಲಿ ಇಂಗ್ಲಿಷ್ ಪ್ಯಾಧ್ಯಾಪಕಿ ಆಗಿದ್ದಾರೆ. ಪ್ರವೃತ್ತಿಯಲ್ಲಿ ಜಾನಪದ ಹಾಡು ರಚನೆ ಹವ್ಯಾಸವಿದೆ. ಇಂಗ್ಲಿಷ್ ಪ್ರಾಧ್ಯಾಪಕಿ ಆಗಿಯೂ ಕನ್ನಡದಲ್ಲಿ ಬರೋಬ್ಬರಿ 50ಕ್ಕೂ ಹೆಚ್ಚು ಜಾನಪದ ಹಾಡುಗಳನ್ನು ರಚನೆ ಮಾಡಿದ್ದಾರೆ ಅಂದರೆ ಅಚ್ಚರಿ.

ಹೌದು, ಬಾಗಲಕೋಟೆ ಜಿಲ್ಲೆ ಮುಧೋಳ ನಗರದ ಆರ್ ಎಂ ಜಿ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಅನಿತಾ ರಾಮನಗೌಡ ಪಾಟೀಲ್ ಓದಿರೋದು ಎಂಎ. ಎಂಇಡಿ(ಇಂಗ್ಲಿಷ್). ಆದರೆ ಕನ್ನಡದಲ್ಲಿ ಸೊಗಸಾಗಿ ಸುಗ್ಗಿ ಹಾಡುಗಳನ್ನು ಬರೆದು ಸೈ ಎನಿಸಿಕೊಂಡಿದ್ದಾರೆ. ಇವರ ಪ್ರತಿಭೆ ನೋಡಿದರೆ ಎತ್ತಣ ಮಾಮರ ಎತ್ತಣ ಕೋಗಿಲೆ ಎನ್ನುವಂತಾಗಿದೆ.

ಯಾಕೆಂದರೆ ಇಂಗ್ಲಿಷ್ ಉಪನ್ಯಾಸಕರು ಕನ್ನಡದ ಜಾನಪದ ಸಾಹಿತ್ಯದಲ್ಲಿ ಹಾಡು ರಚನೆ ಮಾಡುವುದು ಅಷ್ಟು ಸುಲಭವಲ್ಲ. ಇವರು ಮೊದಲಿನಿಂದಲೂ ಹಾಡು ರಚನೆ ಜೊತೆಗೆ ಹಾಡುವುದು ಹವ್ಯಾಸವಂತೆ. ಹೀಗಾಗಿ ಓದಿರುವುದು ಇಂಗ್ಲಿಷ್ ಮಾಧ್ಯಮವಾದರೂ ತಾಯಿ ಭಾಷೆ ಕನ್ನಡ. ಹಾಗಾಗಿ ಸುಗ್ಗಿ ಹಾಡುಗಳ ಮೂಲಕ ಗ್ರಾಮೀಣ ಸೊಗಡಿನ ಗಮ್ಮತ್ತು ಅನಾವರಣ ಮಾಡಿದ್ದಾರೆ.


ಇನ್ನು ಅನಿಷ್ಟ ಪದ್ಧತಿ, ಸಾಮಾಜಿಕ ಕಳಕಳಿ, ಮಹಿಳಾ ಸಬಲೀಕರಣ, ಪ್ರವಾಹ ಸಂಕಷ್ಟ, ಸಂತ್ರಸ್ತರ ಬದುಕು ಬವಣೆ, ವಿದ್ಯಾರ್ಥಿ ಜೀವನಕ್ಕಾಧರಿಸಿ ಜಾನಪದ ಶೈಲಿಯಲ್ಲಿ ಹಾಡುಗಳನ್ನು ರಚಿಸಿದ್ದು ಗಮನಾರ್ಹ.

ಸುರಿಯೋ ಮಳೆಯಲಿ ಮರೆಯಾಗಿದೆ ಕಣ್ಣಹನಿ.
ಹರಿಯೋ ನದಿಯಲ್ಲಿ ಮರೆಯಾಗಿದೆ ಬದುಕು..... ಈ ಹಾಡು ನೆರೆ ಸಂತ್ರಸ್ತ ಕಣ್ಣೀರು ತೆರೆದಿಟ್ಟಿದೆ.
ಇನ್ನು ಬಂಗಾರ ಬಳೆ ತೊಟ್ಟ ಸಿಂಗಾರದ ಸರ ತೊಟ್ಟ
ಮಲ್ಲಿಗೆ ಹೂವಿನ ಮುಡಿಯ ತೊಟ್ಟ
ಬಾಗಿಲ ಬಳಿಯ ಬಲಗಾಲ ಹೊರಗ.
ನಿಂತಿನಿ ಅಣ್ಣ ಬರತಾನ
ಜಾನಪದ ಜೋಕಾಲಿ ಹಾಡು ಓದುಗರ ಮನಸೂರೆಗೊಳ್ಳುತ್ತದೆ.

ಇನ್ನು ಸಂಕ್ರಾಂತಿ ಹಬ್ಬದ ಹೊನಲು ಜಾನಪದ ಹಾಡು ಈ ರೀತಿ ಕಟ್ಟಿಕೊಟ್ಟಿದ್ದಾರೆ ಇಂಗ್ಲಿಷ್ ಲೆಕ್ಚರರ್​​

ಸಂಕ್ರಾಂತಿ ಹಬ್ಬ ಸಂಭ್ರಮ ಹಬ್ಬ
ಹಸಿರು ಹಸಿರಿಗೆ ಉಸಿರು ನೀಡುವ ವರ್ಷದ ಮೊದಲ ಹಬ್ಬ
ರೈತರಬೆವರಿನ ಹನಿಯ ಶ್ರಮಕ್ಕೆ
ಬೆರಗು ನೀಡುವ ಬೆಳ್ಳಿ ಹಬ್ಬ
ಸಂಭ್ರಮ ಸಡಗರ ತರುವ ಹಬ್ಬ
ಇದುವೆ ಮಕರ ಸಂಕ್ರಾಂತಿ ಹಬ್ಬ
ಸುಗ್ಗಿಯ ಹುಗ್ಗಿಯ ಕಾಲಕೆ
ಮೊದಲ ಬಾಗೀನ ಹಬ್ಬ
ರೇಷ್ಮೆ ಸೀರೆಯ ಅಂಚಿದೆ
ಮಿಂಚು ನೀಡುವ ಹಬ್ಬ
ಎಳ್ಳು ಬೆಲ್ಲದ ಸವಿಯ
ಸವಿಯುವ ಹಬ್ಬ
ಗಂಗೆ ತುಂಗೆಯಲಿ ಮಿಂದೇಳುವ ಹಬ್ಬ
ಹಸಿರು ತಳಿರು ತೋರಣ ಬಾಗಿಲು
ಮನೆಮಾಡಿದೆ ಹರುಷದ ಹೊನಲು
ದುಷ್ಟ ಶಕ್ತಿ ಸಂಹಾರದ ಕಾಲ
ರೈತರ ಸಂಭ್ರಮಕ್ಕಿದೆ ಸುಗ್ಗಿಯ ಕಾಲ
ಹೂರಣದಡುಗೆ ದೇವರಿಗೆ ಮಾಡಿ
ಮಂಗಳೆಯರಿಗೆ ಬಾಗೀನ ನೀಡಿ
ಎಲ್ಲಾ ಸ್ನೇಹಿತರು ಒಂದೆಡೆ ಸೇರಿ
ಮಾಡುವವರು ಸಂಕ್ರಾಂತಿ ಮೋಡಿ
ಉತ್ತರಾಯಣ ಕಡೆಗೆ ಸೂರ್ಯನ ಪಯಣ
ಆನಂದಕ್ಕೆ ಕರಗಿದೆ ರೈತನ ನಯನ
ಸಾರ್ಥಕ ಜೀವನಕ್ಕೆ ಹಬ್ಬದ ಉಡುಗೆ
ಇದುವೇ ಮಾನವ ಕುಲದ ಕೊಡುಗೆ

ಹೀಗೆ ಜಾನಪದ ಸೊಗಡಿನಲ್ಲಿ ಗೀತೆಗಳನ್ನು ರಚನೆ ಮಾಡುವ ಗೀಳನ್ನು ಇಂಗ್ಲಿಷ್ ಲೆಕ್ಚರರ್​​​​​  ಹವ್ಯಾಸವಾಗಿಸಿಕೊಂಡಿದ್ದಾರೆ. ಮನಸ್ಸಿಗೆ ಮುದ ನೀಡುವ ನಮ್ಮ ಸಂಸ್ಕೃತಿ ಪ್ರತೀಕವಾಗಿರುವ ಜಾನಪದ ಹಾಡು ಗ್ರಾಮೀಣ ಸೊಗಡಿಗೆ ಸಾಕ್ಷಿ.ಇಂಗ್ಲೀಷ್ ಉಪನ್ಯಾಸಕಿಯಾಗಿದ್ದರೂ ಕನ್ನಡದಲ್ಲಿ ಗೀತೆ ರಚನೆ ಮಾಡುತ್ತಿದ್ದೇನೆ. ಎಲ್ಲ ಜಾನಪದ ಹಾಡುಗಳನ್ನು ಸೇರಿಸಿ ಕವನ ಸಂಕಲನ ಪುಸ್ತಕ ಹೊರ ತರುವ ಯೋಚನೆಯಿದೆ ಅಂತಾರೆ ಅನಿತಾ ಪಾಟೀಲ್.
ನವೀನ ಹಳೆಯದು