ಬಾಗಲಕೋಟೆ | ಹೃದಯಾಘಾತದಿಂದ ರೈಲ್ವೆ ಟಿಕೆಟ್ ಕಲೆಕ್ಟರ್ ಸಾವು: ಕೋವಿಡ್-19 ದೃಢ


ಬಾಗಲಕೋಟೆ: ಹುಬ್ಬಳ್ಳಿಯ ನೈಋತ್ಯ ರೈಲ್ವೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದ 57 ವರ್ಷದ ವ್ಯಕ್ತಿ ಸೋಮವಾರ ತಾಲ್ಲೂಕಿನ ಮ್ಯಾಗೇರಿ ಗ್ರಾಮದಲ್ಲಿ ದಿಢೀರ್ ಕುಸಿದುಬಿದ್ದು ಸಾವಿಗೀಡಾಗಿದ್ದಾರೆ. ಅವರ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ಕೋವಿಡ್-19 ಪಾಸಿಟಿವ್ ಬಂದಿದೆ.
ಮಹಾರಾಷ್ಟ್ರದ ಮಿರಜ್‌ಗೆ ಕರ್ತವ್ಯದ ಮೇಲೆ ತೆರಳಿದ್ದ ಅವರು ಹುಬ್ಬಳ್ಳಿಗೆ ವಾಪಸ್ ಬಂದು ಅಲ್ಲಿಂದ ಶುಕ್ರವಾರ ಸ್ವ-ಗ್ರಾಮ ಮ್ಯಾಗೇರಿಗೆ ಬಂದಿದ್ದರು. ಶನಿವಾರ ಸ್ವಲ್ಪ ಮೈಕೈ ನೋವು ಕಾಣಿಸಿಕೊಂಡಿದ್ದು, ಭಾನುವಾರ ಜ್ವರ ಬಂದಿದೆ. ಮರುದಿನ ಆಸ್ಪತ್ರೆಗೆ ತೆರಳಲು ಸಿದ್ಧತೆ ನಡೆಸಿದ್ದರು. ಆ ವೇಳೆ ಎದೆ ನೋವು ಬಂದಿದೆ. ಆಗ  ಏಕಾಏಕಿ ಕುಸಿದುಬಿದ್ದು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. 

ಈ ಬಗ್ಗೆ ಗ್ರಾಮಸ್ಥರು ತಹಶೀಲ್ದಾರ್‌ಗೆ ಮಾಹಿತಿ ನೀಡಿದ್ದು, ಆರೋಗ್ಯ ಇಲಾಖೆಯವರು ಗ್ರಾಮಕ್ಕೆ ತೆರಳಿ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.

'ಸ್ಥಳೀಯವಾಗಿ ನಡೆಸಿದ್ದ ಪರೀಕ್ಷೆಯಲ್ಲಿ  ಅವರಿಗೆ ಕೋವಿಡ್-19 ಇರುವುದು ಮಂಗಳವಾರ ಗೊತ್ತಾಗಿದೆ.   ಇನ್ನೊಮ್ಮೆ ಪರೀಕ್ಷೆ ನಡೆಸಲು ಗಂಟಲು ದ್ರವ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಿದ್ದೇವೆ. ಅವರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ'' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ 'ಪ್ರಜಾವಾಣಿ'ಗೆ ತಿಳಿಸಿದರು.

ಕೋವಿಡ್-19 ನಿಯಮಾವಳಿ ಅನ್ವಯ ಮೃತರ  ಅಂತ್ಯಕ್ರಿಯೆ ನೆರವೇರಿಸಿದ್ದು, ಕುಟುಂಬದವರನ್ನು ಕ್ವಾರೆಂಟೈನ್ ಗೆ ಒಳಪಡಿಸಲಾಗುತ್ತಿದೆ. ಮ್ಯಾಗೇರಿ ಗ್ರಾಮದಲ್ಲಿ ಸೋಂಕಿತ ವ್ಯಕ್ತಿಯ ಮನೆ ಇರುವ ಸ್ಥಳವನ್ನು ಸೀಲ್‌ಡೌನ್ ಮಾಡಲು ತಹಶೀಲ್ದಾರ್ ಹಾಗೂ ಡಿವೈಎಸ್‌ಪಿ ಅಲ್ಲಿಗೆ ತೆರಳಿದ್ದಾರೆ ಎಂದು ಡಿಎಚ್‌ಒ ಹೇಳಿದರು.
ನವೀನ ಹಳೆಯದು