ರೈತರು, ಕಾರ್ಮಿಕರ ಆಸ್ತಿ ಮೇಲೆ ರನ್ನ ಸಕ್ಕರೆ ಕಾರ್ಖಾನೆ ಸಾಲ; ಆತಂಕದಲ್ಲಿ ಕಬ್ಬು ಬೆಳೆಗಾರರು



ಬಾಗಲಕೋಟೆ: ಆರ್ಥಿಕ ಸಂಕಷ್ಟದಲ್ಲಿರುವ ಬಾಗಲಕೋಟೆ ಜಿಲ್ಲೆಯ ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದ ಮುಧೋಳದಲ್ಲಿರುವ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಅಧ್ಯಕ್ಷ ರಾಮಣ್ಣ ತಳೇವಾಡ ಸೇರಿ ನಿರ್ದೇಶಕರು ರಾಜೀನಾಮೆ ನೀಡಿದ್ದಾರೆ. ರೈತರ ಹೆಸರಲ್ಲಿ ಬೆಳೆಸಾಲ, ಸಾರಿಗೆ ಕಟಾವು ಸಾಲ ಪಡೆದು, ಮರುಪಾವತಿಸದೇ ಭಾರಿ ಮೋಸ ಮಾಡಿದ್ದಾರೆ ಎಂದು ರೈತರ ವಲಯದಲ್ಲಿ ಕೇಳಿಬರುತ್ತಿರುವ ಆರೋಪಗಳಿಗೆ ಇಂಬು ಸಿಕ್ಕಂತಾಗಿದೆ.

ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ರೈತರ ಜಮೀನುಗಳ ಮೇಲೆ ಅಂದಾಜು 37 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದು, ಅದನ್ನು ಮರು ಪಾವತಿಸದೆ ರಾಜೀನಾಮೆ ನೀಡಿದ್ದಾರೆ ಇದರಿಂದ ರೈತರಿಗೆ ತುಂಬಾ ಅನ್ಯಾಯವಾಗಿದೆ ಎಂದು ರೈತರಿಂದ  ಆರೋಪ ಕೇಳಿಬಂದಿದೆ. ಕಾರ್ಖಾನೆಗೆ ಕಬ್ಬು ಪೂರೈಸುತ್ತಿದ್ದ 611 ರೈತರು ಹಾಗೂ ಕಾರ್ಮಿಕರ ಜಮೀನಿನ ಮೇಲೆ ಮುಧೋಳ ಮತ್ತು ಬೆಳಗಾವಿಯ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಲ್ಲಿ ಬೆಳೆಸಾಲ 25 ಕೋಟಿ ರೂ  ಹಾಗೂ ಸಾರಿಗೆ ಮತ್ತು  ಕಟಾವ್​ಗೆಂದು 12 ಕೋಟಿ ರೂಪಾಯಿ ಸೇರಿ ಒಟ್ಟು 37 ಕೋಟಿ ರೂಪಾಯಿ ಸಾಲವನ್ನು ಸಕ್ಕರೆ ಕಾರ್ಖಾನೆ ಪಡೆದುಕೊಂಡಿದೆ.

ರೈತರು ಮತ್ತು ಕಾರ್ಮಿಕರ ಆಸ್ತಿ ಮೇಲೆ ಬ್ಯಾಂಕಿನಲ್ಲಿ ಸಾಲ ಪಡೆದ ಸಕ್ಕರೆ ಕಾರ್ಖಾನೆ, ಆ ಸಾಲವನ್ನು ಮರುಪಾವತಿಸಿರುವುದಿಲ್ಲ. ರೈತರು ಹಾಗೂ ಕಾರ್ಮಿಕರು ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳಲು ಹೋದರೆ ಬ್ಯಾಂಕಿನವರು ಸಾಲ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಇದರಿಂದ  ರೈತರು ಮತ್ತು ಕಾರ್ಮಿಕರಿಗೆ ತೊಂದರೆಯಾಗುತ್ತಿದ್ದು ಕೂಡಲೇ ಬ್ಯಾಂಕ್ ಸಾಲ ಮರುಪಾವತಿ ಮಾಡಬೇಕೆಂದು ರೈತರು ಸಕ್ಕರೆ ಕಾರ್ಖಾನೆಗೆ ಆಗ್ರ‌ಹಿಸಿದ್ದಾರೆ.

ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯು  ಕಬ್ಬು ಪೂರೈಸಿದ ರೈತರಿಗೆ 30ಕೋಟಿ ಕಬ್ಬು ಬಾಕಿ ಉಳಿಸಿಕೊಂಡಿದೆ. ಈಗಾಗಲೇ ಜಿಲ್ಲಾಡಳಿತ ಕಾರ್ಖಾನೆಯಲ್ಲಿನ ಸಕ್ಕರೆ ಹರಾಜು ಮಾಡಿದ್ದು, ಅದರಿಂದ ಬಂದಿರುವ ಹಣದಿಂದ ರೈತರಿಗೆ ಬಾಕಿ ಬಿಲ್ ಪಾವತಿಸಲು ಮುಂದಾಗಿದೆ. ಇದರ ಮಧ್ಯೆ ಕಾರ್ಖಾನೆಗೆ ಸಾಲ ಪಡೆದ ಬ್ಯಾಂಕ್​ನವರು ಕೋರ್ಟ್ ಮೊರೆ ಹೋಗಿದ್ದಾರೆ. ಇದರ ಮಧ್ಯೆ ರೈತರ ಹೆಸರಲ್ಲಿ ಬೆಳೆಸಾಲ,ಹಾಗೂ ಸಾರಿಗೆ,ಕಟಾವು ವೆಚ್ಚಕ್ಕೆಂದು 37ಕೋಟಿ ಸಾಲವಿದ್ದು, ರೈತರು ಬ್ಯಾಂಕ್ ನಲ್ಲಿ ಸಾಲ ಪಡೆಯುವುದಕ್ಕೆ ತೊಂದರೆಯಾಗಿದೆ‌.

ಕಾರ್ಖಾನೆಯವರು ಮಾಡಿರುವ ಸಾಲಕ್ಕೆ ರೈತರು ಅತಂತ್ರರಾಗಿದ್ದು, ಬ್ಯಾಂಕ್ ಖಾತೆ ತೆರೆದು ನೋಡಿದ ರೈತರಿಗೆ ಶಾಕ್ ಆಗಿದೆ‌. ಕಾರ್ಖಾನೆಯವರು ಯಾವುದೇ ಮಾಹಿತಿ ನೀಡದೇ ರೈತರ ಹೆಸರಿನಲ್ಲಿ ಸಾಲ ಪಡೆದಿದ್ದು, ನಮ್ಮ ಖಾತೆಗೆ 2.60 ಲಕ್ಷ ಸಾಲವಿದೆ. ಜಿಲ್ಲಾಡಳಿತ ರೈತರ ಬಾಕಿ ಹಣಕ್ಕಾಗಿ ಸಕ್ಕರೆ ಹರಾಜು ಮಾಡಿದೆ. ಅದರೊಂದಿಗೆ ಬೆಳೆ ಸಾಲ,ಹಾಗೂ ಸಾರಿಗೆ, ಕಟಾವು ಸಾಲಕ್ಕೂ ಸಕ್ಕರೆ ಹರಾಜು ಮಾಡಿ, ಬ್ಯಾಂಕ್ ಗೆ ಭರಿಸಿ, ರೈತರನ್ನು ಸಾಲ ಮುಕ್ತರನ್ನಾಗಿ ಮಾಡೇಕಂತಾರೆ ರೈತ ವಿಠ್ಠಲ್.

ಕಾರ್ಖಾನೆಯು ಬೆಳೆಸಾಲ, ಸಾರಿಗೆ ಕಟಾವು ವೆಚ್ಚಕ್ಕೆ ಬ್ಯಾಂಕ್​ನಲ್ಲಿ ಸಾಲ ಪಡೆಯಲಾಗಿದೆ. ಅದಕ್ಕೆ ಭದ್ರತೆಯಿದ್ದು, ಇದರಿಂದ ರೈತರಿಗೆ ತೊಂದರೆಯಾಗುವುದಿಲ್ಲ. ಬೆಳೆ ಸಾಲ, ಸಾರಿಗೆ ಕಟಾವು ಸಾಲ ಮರುಪಾವತಿಗೆ ಕ್ರಮವಹಿಸಲಾಗುವುದು ಎಂದು ನ್ಯೂಸ್ 18ಗೆ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಮೊರಬ ತಿಳಿಸಿದ್ದಾರೆ.


ನವೀನ ಹಳೆಯದು