ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಎದುರಾದಲ್ಲಿ 112 ಸಂಖ್ಯೆಗೆ ಕರೆ ಮಾಡಿದರೆ 15 ಸೆಕೆಂಡುಗಳಲ್ಲಿ ಪೊಲೀಸರು ಕರೆ ಸ್ವೀಕರಿಸಲಿದ್ದು, ಕೆಲವೇ ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೂ ದೌಡಾಯಿಸಲಿದ್ದಾರೆ. ಇಂತಹುದೊಂದು ವ್ಯವಸ್ಥೆಯನ್ನು ಇದೀಗ ಜಿಲ್ಲಾ ಪೊಲೀಸ್ ಜಾರಿಗೆ ತಂದಿದೆ. ರಾಜ್ಯದ ಬಾಗಲಕೋಟೆ, ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 24 ಗಂಟೆಗಳ ಕಾಲ ಸೇವೆ ಒದಗಿಸುವ ದೃಷ್ಟಿಯಿಂದ ಎಮರ್ಜೆನ್ಸಿ ಕಾಲ್ 112 ಡಯಲ್ ರೆಡಿ ಮಾಡಲಾಗಿದೆ.
112 ಡಯಲ್ ಮಾಡಿದರೆ ಬೆಂಗಳೂರು ಪೊಲೀಸ್ ಕಚೇರಿಗೆ ಕರೆ ಹೋಗುತ್ತದೆ.
ಇನ್ನು ಕರೆಗೆ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲೆಗೆ 15 ನೂತನ ಪೊಲೀಸ್ ವಾಹನಗಳನ್ನು ಸರ್ಕಾರ ನೀಡಿದೆ. 120 ಸಿಬ್ಬಂದಿಯನ್ನು ಕೂಡಾ ಈ ಯೋಜನೆಗೆ ನೇಮಕ ಮಾಡಲಾಗಿದೆ. ಇದು ಮೊದಲ ಹಂತದ ಯೋಜನೆಯಾಗಿದ್ದು ಎರಡನೇ ಹಂತದಲ್ಲಿ ಯಾವ ಜಿಲ್ಲೆಯಿಂದ ಕರೆ ಮಾಡಿರುತ್ತಾರೆ ಅದೇ ಜಿಲ್ಲಾ ಪೊಲೀಸರಿಗೆ ಕರೆ ಹೋಗುವಂತೆ ಮಾಡಲಾಗುತ್ತದೆ.