ಆಗಸದಲ್ಲಿಂದು ನೀಲಿ ಚಂದಮಾಮ



ಮುಧೋಳ: ನೀಲಿಯಾಕಾಶದಲ್ಲಿ ಇಂದು ಅಪರೂಪದಲ್ಲಿ ಅಪರೂಪವಾದ ಬ್ಲೂ ಮೂನ್ ಕಾಣಿಸಲಿದೆ. ಬ್ಲೂಮೂನ್‍ನ ಕಣ್ತುಂಬಿಕೊಳ್ಳುವ ತವಕ ಜನರಲ್ಲಿ ಮನೆ ಮಾಡಿದೆ. ಅಷ್ಟಕ್ಕೂ ಏನಿದು ಬ್ಲೂಮೂನ್? ಯಾವಾಗ ನೀಲಿಚಂದ್ರ ಗೋಚರಿಸ್ತಾನೆ? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.

ಏನಿದು ಬ್ಲೂ ಮೂನ್?
ಇಂದು ರಾತ್ರಿ ಆಗಸದಲ್ಲಿ ಖಗೋಳ ವಿಸ್ಮಯ ನಡೆಯಲಿದ್ದು, ರಾತ್ರಿ 8.19ಕ್ಕೆ ಸರಿಯಾಗಿ ಬ್ಲೂ ಮೂನ್ ಗೋಚರವಾಗಲಿದೆ. ಸಾಮಾನ್ಯವಾಗಿ ತಿಂಗಳಿಗೆ ಒಂದು ಹುಣ್ಣಿಮೆ ಬರುತ್ತದೆ. ಆದರೆ ಈ ಬಾರಿ ಒಂದೇ ತಿಂಗಳಿನಲ್ಲಿ ಎರಡು ಹುಣ್ಣಿಮೆ ಬಂದಿದೆ. ತಿಂಗಳ ಎರಡನೇ ಹುಣ್ಣಿಮೆಯಂದು ಕಾಣುವ ಚಂದ್ರನನ್ನು ಬ್ಲೂ ಮೂನ್ ಎಂದು ಕರೆಯುತ್ತಾರೆ. ಬ್ಲೂ ಮೂನ್ ಎಂದಾಕ್ಷಣ ಚಂದ್ರ ನೀಲಿ ಬಣ್ಣದಲ್ಲಿ ಕಾಣುತ್ತಾನೆ ಎಂದರ್ಥವಲ್ಲ. ಅ.1 ರಂದು ಮೊದಲ ಹುಣ್ಣಿಮೆ ಬಂದಿದ್ದರೆ ಅ.31ರಂದು ಇಂದು ಎರಡನೇ ಹುಣ್ಣಿಮೆ ಬಂದಿದೆ.

ಎಷ್ಟು ಅವಧಿ ಬೇಕು?
ಗ್ರಗೋರಿಯನ್ ಕ್ಯಾಲೆಂಡರ್ ಪ್ರಕಾರ ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆ ನಡುವಿನ ಅವಧಿ 29 ದಿನ, 44 ನಿಮಿಷ 38 ಸೆಕೆಂಡ್ ಆಗಿರುತ್ತದೆ. 30 ದಿನ ತುಂಬಲು ಬಾಕಿ ಉಳಿದ ಸಮವೆಲ್ಲ ಸೇರಿ ಕೊನೆಗೆ ಒಂದು ತಿಂಗಳಿನಲ್ಲಿ 2 ಹುಣ್ಣಿಮೆ ಬರುತ್ತದೆ. ಸಾಮಾನ್ಯವಾಗಿ ಎರಡು-ಮೂರು ವರ್ಷಕ್ಕೊಮ್ಮೆ ಈ ವಿದ್ಯಮಾನ ಘಟಿಸುತ್ತದೆ. ಈ ಹಿಂದೆ 2018ರಲ್ಲಿ ಬ್ಲೂ ಮೂನ್ ಗೋಚರಿಸಿತ್ತು. 31 ದಿನಗಳು ಇರುವ ತಿಂಗಳಿನಲ್ಲಿ ಬ್ಲೂ ಮೂನ್ ಸಾಮಾನ್ಯವಾಗಿ ಗೋಚರಿಸುತ್ತದೆ. ಆದರೆ 30 ದಿನಗಳಲ್ಲಿ ಬ್ಲೂ ಮೂನ್ ಗೋಚರಿಸುವುದು ಅಪರೂಪ.

ಖಗೋಳ ತಜ್ಞರು ಏನು ಹೇಳುತ್ತಾರೆ?
ಇದು ಖಗೋಳದಲ್ಲಿ ಸಹಜ ಪ್ರಕ್ರಿಯೆಯಾಗಿದ್ದು ಸ್ವಾಭಾವಿಕ ಹುಣ್ಣಿಮೆ. ಆದರೆ ಅಪರೂಪ ಅಷ್ಟೇ. ಎಲ್ಲಾ ಹುಣ್ಣಿಮೆಯ ರೀತಿಯೇ ಈ ಹುಣ್ಣಿಮೆ ಕೂಡ. ಬ್ಲೂಮೂನ್ ಎಂದಾಕ್ಷಣ ಇಂದು ಚಂದಿರನ ಬಣ್ಣ ನೀಲಿ ಇರುವುದಿಲ್ಲ. ಬ್ಲೂಮೂನ್‍ಗೂ ಬಣ್ಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಬ್ಲಿಕ್ ಟಿವಿಗೆ ಪ್ಲಾನಿಟೋರಿಯಂ ಹಿರಿಯ ವಿಜ್ಞಾನಿ ಡಾ.ಆನಂದ್ ಹೇಳಿದ್ದಾರೆ.
ನವೀನ ಹಳೆಯದು