2027 ಕ್ಕೆ ಬಾಗಲಕೋಟೆ ಕುಡಚಿ ರೈಲು ಯೋಜನೆ ಪೂರ್ಣ; ರಾಜ್ಯ ಸರ್ಕಾರ.

ಬೆಳಗಾವಿ : ಡಿಸೆಂಬರ್ ನ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ ಕೇಳಿದ್ದ "ಕುಡಚಿ-ಬಾಗಲಕೋಟೆ ರೈಲ್ವೆ ಕಾಮಗಾರಿ ಯಾವ ಹಂತದಲ್ಲಿದೆ ಮತ್ತು ಇಲ್ಲಿಯವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನವೇಷ್ಟು ಸದರಿ ಯೋಜನೆಯನ್ನು ಯಾವಾಗ ಮುಕ್ತಾಯಗೊಳಿಸಲಾಗುವುದು? "ಪ್ರಶ್ನೆಗೆ ವಸತಿ ಸಚಿವ ವಿ ಸೋಮಣ್ಣರ ಉತ್ತರಿಸಿದಂತೆ ಈ ಯೋಜನೆ 2027 ರಲ್ಲಿ ಪೂರ್ಣಗೊಳ್ಳುತ್ತದೆ.

ಪ್ರಶ್ನೆ 1. ಕುಡಚಿ-ಬಾಗಲಕೋಟೆ ರೈಲ್ವೆ ಕಾಮಗಾರಿ ಯಾವ ಹಂತದಲ್ಲಿದೆ?

ಉತ್ತರ : 142 ಕಿ.ಮೀ ಉದ್ದದ ಕುಡಚಿ, ಬಾಗಲಕೋಟೆ: ರೈಲ್ವೇ ಮಾರ್ಗ ಯೋಜನೆಯ ಕಾಮಗಾರಿಯ ವೆಚ್ಚದ ಶೇ.50 ರಷ್ಟು ಹಾಗೂ ಭೂಸ್ವಾಧೀನ ವೆಚ್ಚದ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವು ಭರಿಸಲು ಒಪ್ಪಿಗೆ ನೀಡಿ ಈ ಯೋಜನೆಗೆ ರಾಜ್ಯ ಸರ್ಕಾರದಿಂದ 2011ರಲ್ಲಿ ಅನುಮೋದನೆ ನೀಡಲಾಗಿದೆ.


ಈ ಯೋಜನೆಯ ಪ್ರಗತಿ ಈ ಕೆಳಕಂಡಂತಿದೆ.

1. ಬಾಗಲಕೋಟೆ ಖಜ್ಜಿಡೋಣಿ (30 ಕಿಮೀ) ಕಾಮಗಾರಿಯು 2017ರಲ್ಲಿ ಪೂರ್ಣಗೊಂಡಿದ್ದು, ರೈಲು ಸಂಚಾರ ಪೂರ್ಣಗೊಂಡಿದೆ.

2. ಖಜ್ಜಿಡೋಣಿ -ಲೋಕಾಪುರ (9 ಕಿ.ಮೀ) ಸೆಕ್ಷನ್ ಕಾಮಗಾರಿಯು ಪ್ರಗತಿಯಲ್ಲಿದ್ದು, 2023ರ ಅಂತ್ಯದ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. 

3. ಲೋಕಾಪುರ - ಯಾದವಾಡ (21 ಕಿ.ಮೀ) ಸೆಕ್ಷನ್ ಕಾಮಗಾರಿಗಾಗಿ ಟೆಂಡರ್ ನ್ನು ಕರೆಯಲಾಗಿದೆ.

4. ಯಾದವಾಡ - ಕುಡಚಿ (82 ಕಿ.ಮೀ), ಸೆಕ್ಷನ್ ನ ಭೂಸ್ವಾಧೀನ ಪ್ರಕ್ರಿಯ ಪ್ರಗತಿಯಲ್ಲಿದ್ದು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಟೆಂಡರ್ ಕರೆಯಲು ನೈರುತ್ಯ ರೈಲ್ವೆಯು ನಿರ್ಧರಿಸಿದೆ.

5. ಈ ಯೋಜನೆಗೆ ಒಟ್ಟು 2485.57 ಎಕರೆ ಜಮೀನು ಅಗತ್ಯವಿದ್ದು ಇದುವರೆಗೂ 1796.29 ಎಕರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಬಾಕಿ 674.28 ಎಕರೆ ಜಮೀನಿನ ಸ್ವಾಧೀನ ಪ್ರಕ್ರಿಯೆಯು ಪ್ರಗತಿಯಲ್ಲಿದೆ.

ಪ್ರಶ್ನೆ 2. ಇಲ್ಲಿಯವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನವೇಷ್ಟು ಸದರಿ ಯೋಜನೆಯನ್ನು ಯಾವಾಗ ಮುಕ್ತಾಯಗೊಳಿಸಲಾಗುವುದು?

ಉತ್ತರ : ರಾಜ್ಯ ಸರ್ಕಾರದಿಂದ ಈ ಯೋಜನೆಯ ಭೂಸ್ವಾಧೀನಕ್ಕಾಗಿ 356.38 ಕೋಟಿಗಳನ್ನು ಜಿಲ್ಲಾಧಿಕಾರಿ, ಬಾಗಲಕೋಟೆ ಹಾಗೂ ರೂ.160.61 ಕೋಟಿಗಳನ್ನು ಜಿಲ್ಲಾಧಿಕಾರಿ, ಬೆಳಗಾವಿ, ಇವರಿಗೆ ಬಿಡುಗಡೆ ಮಾಡಲಾಗಿದ್ದು, ಸದರಿ ಯೋಜನೆಯ ನಿರ್ಮಾಣ ಕಾಮಗಾರಿಗಾಗಿ ರೂ.195.22 ಕೋಟಿಗಳನ್ನು ನೈರುತ್ಯ ರೈಲ್ವೆಗೆ ಬಿಡುಗಡೆ ಮಾಡಲಾಗಿದೆ. ರೈಲ್ವೆ ಇಲಾಖೆಯಿಂದ ಪಡೆದ ಮಾಹಿತಿ ಅನುಸಾರ ನಿರ್ಮಾಣ ಕಾಮಗಾರಿಗಾಗಿ ರೂ.130.99 ಕೋಟಿಗಳನ್ನು ಬಿಡುಗಡೆ ಮಾಡಲಾಗಿರುತ್ತದೆ. ಈ ಯೋಜನೆಯನ್ನು 2027ರೊಳಗೆ ಪೂರ್ಣಗೊಳಿಸಲು ಗುರಿಯನ್ನು ಹೊಂದಲಾಗಿದೆ.

ನವೀನ ಹಳೆಯದು