ಮುಧೋಳ ಸಂಸ್ಥಾನದ ಮಹಾರಾಜರಾಗಿದ್ದ ರಾಜಾ ಮಾಲೋಜಿರಾವ್ ಘೋರ್ಪಡೆಯವರ ಪುತ್ಥಳಿ ನಿರ್ಮಾಣಕ್ಕೆ ಮುಧೋಳ ನಗರಸಭೆ ಒಪ್ಪಿಗೆ ಸೂಚಿಸಿದೆ.
ಮುಧೋಳ ನಗರಸಭೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರದ ಮಹಾರಾಣಿ ಕೆರೆಯ ಬಳಿ ರಾಜಾ ಮಾಲೋಜಿರಾವ್ ಘೋರ್ಪಡೆಯವರ ಪುತ್ಥಳಿಯನ್ನು ನಿರ್ಮಿಸಲು ಸರ್ವಾನುಮತದಿಂದ ತೀರ್ಮಾಣ ಕೈಗೊಳ್ಳಲಾಗಿದೆ.
"ಬಾಗಲಕೋಟೆ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಹನಮಂತ ಶಿಂಧೆ, ಮುದ್ದೇಶ ಗಾಯಕವಾಡ ಅವರು ಮುಧೋಣದಲ್ಲಿ ಮಹಾರಾಜರ ಪುತ್ಥಳಿ ನಿರ್ಮಾಣ ಮಾಡಬೇಕೆಂದು ಮುಧೋಳ ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ಪರಿಗಣಿಸಿದ್ದ ನಗರಸಭೆ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.
ನಗರಸಭಾ ಸದಸ್ಯ, ಮಾಜಿ ಅಧ್ಯಕ್ಷ ಗುರಪಾದ ಕುಳಲಿ ಮಾತನಾಡಿ, "ಮುಧೋಳ ಸಂಸ್ಥಾನದ ರಾಜರಾಗಿದ್ದ ಘೋರ್ಪಡೆ ಮಹಾರಾಜರು ಮುಧೋಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಅವರ ಹೆಸರು ಅಜರಾಮರವಾಗುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ನಗರದಲ್ಲಿ ಅವರ ಪುತ್ಥಳಿ ನಿರ್ಮಾಣಕ್ಕೆ ಸಭೆಯಲ್ಲಿದ್ದ ಎಲ್ಲ ಸದಸ್ಯರು ಸಮ್ಮತಿ ನೀಡಿದ್ದಾರೆ" ಎಂದರು.
ಘೋರ್ಪಡೆ ಮಹಾರಾಜರು ತಮ್ಮ ಆಡಳಿತಾವಧಿಯಲ್ಲಿ ಸರ್ಕಾರಿ ಆಸ್ಪತ್ರೆ, ಜನ-ಜಾನುವಾರುಗಳಿಗಾಗಿ ಜೀವಸಂಕುಲಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ನಾಲ್ಕು ದಿಕ್ಕಿನಲ್ಲಿ ಕೆರೆಗಳನ್ನು ನಿರ್ಮಿಸಿದ್ದರು. ಕುಸ್ತಿ ಪ್ರೇಮಿಗಳಾಗಿದ್ದ ಅವರು ಕುಸ್ತಿಪಟುಗಳಿಗಾಗಿ ಗರಡಿ ಮನೆಗಳನ್ನು ಕಟ್ಟಿಸಿದ್ದರು. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಶಾಲಾ–ಕಾಲೇಜುಗಳಿಗೆ ಕಟ್ಟಡ ನಿರ್ಮಿಸಿ, ಅವುಗಳನ್ನು ಬಸವೇಶ್ವರ ಸಂಘಕ್ಕೆ ಉಚಿತವಾಗಿ ನೀಡಿದ್ದರು. ವಿಶ್ವವ್ಯಾಪಿ ಮುಧೋಳ ಬೇಟೆನಾಯಿಗಳ ತಳಿ ಅಭಿವೃದ್ಧಿ ಪಡಿಸುವಲ್ಲಿ ಅವರ ಪಾತ್ರ ಮಹತ್ತರವಾಗಿದೆ" ಎಂದು ತಿಳಿಸಿದರು.
ನಗರಸಭೆಯ ಅಧ್ಯಕ್ಷ ಮಾನೆಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪೌರಾಯುಕ್ತ ಶಿವಪ್ಪ ಅಂಬಿಗೇರ, ಅಧಿಕಾರಿಗಳಾದ ಭಾರತಿ ಜೋಶಿ, ರಾಜು ಚವ್ಹಾಣ, ವಸಂತ ಪವಾರ, ಹೊಸೂರ, ನಗರಸಭೆ ಉಪಾಧ್ಯಕ್ಷೆ ಸುನೀತಾ ಭೋವಿ, ಸದಸ್ಯರಾದ ಶಿವಾನಂದ ಡಂಗಿ, ರಾಜು ಬೇಪಾರಿ, ಸುನೀಲ ನಿಂಬಾಳಕರ, ಸಂತೋಷ ಪಾಲೋಜಿ, ಸುರೇಶ ಕಾಂಬಳೆ, ಆನಂದ ಕುಲಕರ್ಣಿ, ಸದಾಶಿವ ಜೋಶಿ, ಲೀಲಾಬಾಯಿ ರಜಪೂತ, ಕುಮಾರ ಪಮ್ಮಾರ, ಯಲ್ಲವ್ವ ಅಂಬಿ, ಲಕ್ಷ್ಮೀ ಮಾನೆ, ಲಕ್ಷ್ಮೀ ದಾಸರ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.