ಮುಧೋಳ: ಇಂದು ಕರ್ನಾಟಕದಾದ್ಯಂತ ಉಧ್ಘಾಟನೆಗೊಂಡಿರುವ 113 ನಮ್ಮ ಕ್ಲಿನಿಕ್‌ಗಳೊಂದಿಗೆ ಮುಧೋಳದ ಹಳೆ ಸರ್ಕಾರಿ ಆಸ್ಪತ್ರೆಯಲ್ಲೇ ಹೊಸದಾಗಿ ನೆಲೆಯೆತ್ತಿರುವ ನಮ್ಮ ಕ್ಲಿನಿಕ್ ಕೂಡಾ ಉಧ್ಘಾಟನೆಗೊಂಡಿದೆ. ಈ ಚಿಕಿತ್ಸಾಲಯ ದುರ್ಬಲ ವರ್ಗಗಳಿಗೆ, ವಿಶೇಷವಾಗಿ ನಗರದ ಬಡವರು, ಹಿರಿಯ ನಾಗರಿಕರು ಮತ್ತು ದೈನಂದಿನ ಕೂಲಿ ಕಾರ್ಮಿಕರಿಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಕೇಂದ್ರದಲ್ಲಿ ಹನ್ನೆರಡು ವಿಧದ ಆರೋಗ್ಯ ಸೇವೆಗಳು ಲಭ್ಯವಿರುತ್ತವೆ ಮತ್ತು ಪ್ರತಿ ಕ್ಲಿನಿಕ್ ವೈದ್ಯಕೀಯ ಅಧಿಕಾರಿ, ನರ್ಸ್, ಲ್ಯಾಬ್ ಟೆಕ್ನಿಷಿಯನ್ ಮತ್ತು ಗ್ರೂಪ್ ಡಿ ಉದ್ಯೋಗಿಯನ್ನು ಒಳಗೊಂಡಿರುತ್ತದೆ. ಒಟ್ಟು 150 ಕೋಟಿ ರೂ.ವೆಚ್ಚದ ಯೋಜನೆ ಇದಾಗಿದ್ದು, ಬಹುತೇಕ ಕ್ಲಿನಿಕ್ ಗಳು ಸರಕಾರಿ ಕಟ್ಟಡಗಳಲ್ಲಿ ಕೆಲಸ ಆರಂಭಿಸಲಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ಕ್ಲಿನಿಕ್‌ಗಳನ್ನು ಈಗಾಗಲೇ ಉಧ್ಘಾಟನೆಗೊಳಿಸಿದ್ದು, ಈ ಹಿಂದೆ ಘೋಷಿಸಿದಂತೆ ರಾಜ್ಯಾದ್ಯಂತ ಎಲ್ಲಾ 438 ನಮ್ಮ ಕ್ಲಿನಿಕ್‌ಗಳನ್ನು ಶೀಘ್ರದಲ್ಲೇ ಕಾರ್ಯಗತಗೊಳಿಸಲು ಸರ್ಕಾರವು ಕಾರ್ಯನಿರ್ವಹಿಸುತ್ತಿದೆ ಮತ್ತು ಉಳಿದ ಎಲ್ಲಾ ಕ್ಲಿನಿಕ್‌ಗಳು ಜನವರಿ 2023 ರ ವೇಳೆಗೆ ಕಾರ್ಯನಿರ್ವಹಿಸಲಿವೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಪ್ರತಿ ನಮ್ಮ ಕ್ಲಿನಿಕ್ 10,000 ರಿಂದ 20,000 ಜನಸಂಖ್ಯೆಯ ಅಗತ್ಯತೆಯನ್ನು ಪೂರೈಸುವ ನಿರೀಕ್ಷೆಯಿದೆ. ಗರ್ಭಧಾರಣೆ, ಪ್ರಸವಪೂರ್ವ, ನವಜಾತ ಆರೈಕೆ, ಬಾಲ್ಯ ಮತ್ತು ಹದಿಹರೆಯದ ಆರೈಕೆ, ಸಾರ್ವತ್ರಿಕ ರೋಗನಿರೋಧಕ ಸೇವೆಗಳು, ಕುಟುಂಬ ಕಲ್ಯಾಣ, ಗರ್ಭನಿರೋಧಕ, ಸಾಂಕ್ರಾಮಿಕ ರೋಗ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಕಾಯಿಲೆಗಳ ಆರೈಕೆ, ಮಧುಮೇಹ, ರಕ್ತದೊತ್ತಡ ನಿರ್ವಹಣೆ, ದೀರ್ಘಕಾಲದ ಕಾಯಿಲೆಗಳು, ಬಾಯಿಯ ಕಾಯಿಲೆಗಳು ಇತ್ಯಾದಿ. 12 ವಿಧದ ಸೇವೆಗಳು ಜನತೆಗೆ ಲಭ್ಯವಾಗಲಿವೆ.