ಮುಧೋಳ : ರಾಜಕೀಯ ರಂಗದ ಅನರ್ಘ್ಯ ರತ್ನ ಅಟಲ್ ಬಿಹಾರಿ ವಾಜಪೇಯಿ ನಮ್ಮ ಮುಧೋಳ ಭೇಟಿಯ ಒಂದು ನೆನಪು.
ಬ್ರಿಟಿಷರ ಕಪಿ ಮುಷ್ಠಿಯಿಂದ ದೇಶ ಸ್ವಾತಂತ್ರ್ಯಗೂಂಡು ಅನೇಕ ದಶಕಗಳವರೆಗೆ ಕಾಂಗ್ರೆಸ್ ಪಕ್ಷ ದೇಶದಲ್ಲಿ ತನ್ನ ಆಧಿಪತ್ಯವನ್ನು ಪ್ರಸ್ಥಾಪಿಸಿತ್ತು ಆದರೆ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದ ಪರಿಣಾಮ ಅನೇಕ ರಾಜಕೀಯ ದಿಗ್ಗಜರು ಜೈಲು ಪಾಲಾಗುವ ಪರಿಸ್ಥಿತಿ ಬಂದುದರ ಪರಿಣಾಮ ಕಾಂಗ್ರೆಸ್ ಪಕ್ಷಕ್ಕೆ ಮೂಗುದಾಣ ಹಾಕುವ ನಿಟ್ಟಿನಲ್ಲಿ ಜನತಾ ಪಕ್ಷ ಎಂಬ ರಾಜಕೀಯ ಪಕ್ಷದ ಉದಯವಾಗುವುದರ ಜೊತೆಗೆ ನಂತರದ ಲೋಕಸಭೆ ಚುನಾವಣೆಯಲ್ಲಿ ಮುರಾರ್ಜಿ ದೇಸಾಯಿ ಅವರನ್ನು ಪ್ರಧಾನಿಯನ್ನಾಗಿಸಿ ಕಾಂಗ್ರೆಸ್ ಪಕ್ಷವನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದು ಈಗ ಇತಿಹಾಸ.
ಮುರಾರ್ಜಿ ದೇಸಾಯಿ ಅವರ ಸಾರಥ್ಯದಲ್ಲಿ ಜನತಾ ಪಕ್ಷದ ಸರಕಾರದಲ್ಲಿ ಭಾರತೀಯ ಜನಸಂಘದ ವತಿಯಿಂದ ಕೇಂದ್ರದಲ್ಲಿ ಸಚಿವರಾದವರು ಲಾಲಕೃಷ್ಣ ಅಡ್ವಾಣಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಇಬ್ಬರೇ. ನಂತರದ ದಿನಗಳಲ್ಲಿ ಜನತಾ ಪಕ್ಷ ಒಡೆದು ವಿವಿಧ ಪಕ್ಷಗಳಾದಾಗ ಭಾರತೀಯ ಜನತಾ ಪಕ್ಷವನ್ನು ಬಲಿಷ್ಠವಾಗಿಸಲು ಹಗಲಿರುಳು ಶ್ರಮಿಸಿದ ಮಹಾನ್ ನಾಯಕರಲ್ಲಿ ಅಟಲ್ ಬಿಹಾರಿ ವಾಜಪೇಯಿ ಒಬ್ಬರು.
1983ರ ಜನವರಿ ತಿಂಗಳು ಆಗ ಕರ್ನಾಟಕದಲ್ಲಿ ಗುಂಡುರಾವ ಅವರ ಸಾರಥ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಆವಾಗ ನರಗುಂದದಲ್ಲಿ ನಡೆದ ರೈತರ ಉಗ್ರ ಹೋರಾಟ ಹಲವು ರೈತರನ್ನು ಬಲಿ ತೆಗೆದುಕೂಂಡು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು.
ಮುಧೋಳ ನಗರದಲ್ಲಿ ವಾಜಪೇಯಿ ಅವರೊಂದಿಗೆ ವಸಂತರಾವ್ ಟಂಕಸಾಲಿ |
ಗುಳೆದಗುಡ್ಡ ಕಾರ್ಯಕ್ರಮದ ನಂತರ ಮುಧೋಳಕ್ಕೆ ಭೇಟಿ ನೀಡಿದ ಅಟಲಬಿಹಾರಿ ವಾಜಪೇಯಿ ಅವರು ನಗರದ ಇಂದಿನ ಗಾಂಧಿ ಚೌಕದ ನೂತನ ಬಾಲಿಕೆಯರ ಶಾಲೆಯ ಆವರಣದಲ್ಲಿ ಕಿಕ್ಕಿರಿದು ತುಂಬಿದ್ದ ಮಹಾಜನತೆಯನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ದೇಶದ ಅಂದಿನ ಸ್ಥಿತಿಗಳನ್ನು ವಿವರಿಸಿ - ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ವಿವರಿಸಿ - ಮುಧೋಳದ ಮಹಾಜನತೆ ಕುರಿಯ ಹಿಂಡಿನಂತೆ ಕಾಂಗ್ರೆಸ್ ಪಕ್ಷದ ಹಿಂದೆ ಹೋಗದೆ, ದೇಶ ಭಕ್ತಿ ಹಾಗೂ ರಾಷ್ಟ್ರದ ಸಮಗ್ರ ಅಭಿವೃದ್ಧಿಯನ್ನೆ ಮೂಲ ಮಂತ್ರವನ್ನಾಗಿಸಿಕೂಂಡ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕೆಂದು ಹೇಳಿ ಸಭೆಯಲ್ಲಿ ಸಂಚಲನ ಮೂಡಿಸಿದ ಆ ಕ್ಷಣ ಅವಿಸ್ಮರಣೀಯವಾಗಿತ್ತು.
ಅಟಲ್ ಬಿಹಾರಿ ವಾಜಪೇಯಿಯವರ ಮುಧೋಳದ ಐತಿಹಾಸಿಕ ಸಭೆಯನ್ನು ಆಯೋಜಿಸುವಲ್ಲಿ ಅಂದಿನ ತಾಲೂಕಾ ಬಿಜೆಪಿ ಅಧ್ಯಕ್ಷ ಶ್ಯಾಮರಾವ ಟಂಕಸಾಲಿ ಹಾಗೂ ಧುರೀಣರಾದ ಡಾ ಆಯ್ ಬಿ ಗಂಗಣ್ಣವರ, ವಸಂತರಾವ ಟಂಕಸಾಲಿ, ಡಾ ಬಿ ಆರ್ ಪಾಗನೀಸ್, ಪಂಡಿತರಾವ ದೇಸಾಯಿ, ಮಹಾದೇವ ಸದಲಗಿ ಮುಂತಾದವರು ಶ್ರಮಿಸಿದ್ದರು. ಅಂದು ಮುಧೋಳದಲ್ಲಿ ವಸಂತ ಶಹಾ ಅವರ ಎಕಮೇವ ಆಟೋರಿಕ್ಷಾ ಇತ್ತು ಅದರ ಮೂಲಕ ಇಂದಿನ ಬಿಜೆಪಿ ಧುರೀಣ ಹಾಗೂಅಂದಿನ ಯುವ ಕಾರ್ಯಕರ್ತ ರಾಜೇಂದ್ರ ಟಂಕಸಾಲಿ ವಾಜಪೇಯಿ ಅವರ ಸಭೆಯ ಪ್ರಚಾರ ಮಾಡಿದ್ದನ್ನು ಸ್ಮರಿಸಬಹುದು.
ಅಟಲ್ ಬಿಹಾರಿ ವಾಜಪೇಯಿ ಅವರ ಈ ಐತಿಹಾಸಿಕ ರಾಜ್ಯದ ಪ್ರವಾಸ ರಾಜ್ಯದ ರಾಜಕೀಯದಲ್ಲಿ ಇತಿಹಾಸವನ್ನೆ ನಿರ್ಮಾಣ ಮಾಡಿತು. ನಂತರ ನಡೆದ ರಾಜ್ಯದ ವಿಧಾನ ಸಭಾ ಚುನಾವಣೆಯಲ್ಲಿ ಮೂಟ್ಟ ಮೂದಲ ಬಾರಿಗೆ 18 ಸ್ಥಾನಗಳನ್ನು ಪಡೆದು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ ಬಾಹ್ಯ ಬೆಂಬಲ ನೀಡುವದರ ಜೋತೆಗೆ ರಾಜ್ಯದಲ್ಲಿ ಬಿಜೆಪಿ ಪ್ರವೇಶಕ್ಕೆ ನಾಂದಿ ಹಾಡುವದರ ಜೊತೆಗೆ ಅವಿಭಜೀತ ವಿಜಾಪೂರ ಜಿಲ್ಲೆಯ ವಿಜಾಪೂರ ಶಹರ ವಿಧಾನಸಭಾ ಕ್ಷೇತ್ರದಿಂದ ಆನಂದ ಗಚ್ಟಿನಮಠ ಹಾಗೂ ಗುಳೆದಗುಡ್ಡ ಮತಕ್ಷೇತ್ರದಿಂದ ಮಲ್ಲಿಕಾರ್ಜುನ ಬನ್ನಿ ಬಿಜೆಪಿಯ ಶಾಸಕರಾಗಿ ಆಯ್ಕೆಯಾಗಿ ವಿಧಾನ ಸಭೆ ಪ್ರವೇಶಿಸಿದ್ದನ್ನು ಸ್ಮರಿಸಬಹುದು.
ಇಂದು ದೇಶದಲ್ಲಿ ಎಲ್ಲೆಡೆ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹಾಗೂ ಅವರ ಕಾರ್ಯ ವೈಖರಿಯಿಂದ ದೇಶದಲ್ಲಿ ಬಹುತೇಕ ಎಲ್ಲೆಡೆ ಕಮಲ ಅರಳುತ್ತಿದೆ ಇದಕ್ಕೆ ಎರಡು ಮಾತಿಲ್ಲ ಆದರೆ ದೇಶದಲ್ಲಿ ಕಮಲ ಅರಳುವ ನಿಟ್ಟಿನಲ್ಲಿ ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಅಡವಾಣಿ, ಕರ್ನಾಟಕದ ಅನಂತಕುಮಾರ ಅವರಂತಹ ಅನೇಕ ಘಟಾನುಗಟಿಗಳ ಅವಿರತ ಪರಿಶ್ರಮವೇ ಕಾರಣ ಎಂಬುದನ್ನು ಮರೆಯಲಾಗದು.
ಡಿಸೆಂಬರ್ 25 ಮಹಾನ್ ನಾಯಕ, ಅಜಾತ ಶತ್ರು, ಕವಿಹೃದಯಿ ಅಟಲ ಬಿಹಾರಿ ವಾಜಪೇಯಿ ಅವರ 98ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಪುನರ್ಜನ್ಮ ಒಂದಿದ್ದರೆ ಮತ್ತೆ ಭಾರತ ಮಾತೆಯ ಮಡಿಲ ಮಗುವಾಗಿ ಹುಟ್ಟಿ ಬನ್ನಿ.
✒️ ಶ್ರೀ ಗುರುರಾಜ್ ಪೋತನಿಸ್