ಮುಧೋಳ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮುಧೋಳ ಶಾಖೆಗೆ ಜಿಲ್ಲಾ ಗಾಹಕರ ಆಯೋಗ ದಂಡ ವಿಧಿಸಿದೆ. ಮುಧೋಳ ತಾಲೂಕಿನ ಉತ್ತೂರ ಗ್ರಾಮದ ರೈತ ಲಕ್ಷಮಪ್ಪ ತಿಮ್ಮಪ್ಪ ಮಳಲಿ ಎಂಬುವರು ಮುಧೋಳ ಡಿಸಿಸಿ ಬ್ಯಾಂಕ್ ಶಾಖೆ ಗೆ ಆಧಾರ ಕಾರ್ಡ್ ಪಾನ ಕಾರ್ಡ್ ಪ್ರತಿ ಇತ್ಯಾದಿ ದಾಖಲೆಗಳನ್ನು ನೀಡಿ ಉಳಿತಾಯ ಖಾತೆ ನಂ 10020/12273 ತೆರೆದಿರುತ್ತಾರೆ. ಸರ್ಕಾರದಿಂದ ಬರಬೇಕಾದ ಬೆಳೆಹಾನಿ ಪರಿಹಾರ ರೂ.46998/- ತಮ್ಮ ಖಾತೆಗೆ ಜಮೆ ಆಗಿಲ್ಲದ್ದನ್ನು ಗಮನಿಸಿದ ರೈತ ಬ್ಯಾಂಕ್ ಗೆ ಹೋಗಿ ವಿಚಾರಿಸಿದಾಗ ಸರಿಯಾಗಿ ಸ್ಪಂದಿಸದೆ ಮುಂದೂಡುತ್ತ ಬಂದಿದ್ದಾರೆ. ಆಗ ರೈತ ನವನಗರ ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ವಿಚಾರಿಸಿದಾಗ ಟ್ರೇಜರಿ ಮತ್ತು ಕಂದಾಯ ಇಲಾಖೆ ಯಲ್ಲಿ ವಿಚಾರಿಸಲು ತಿಳಿಸಿದ್ದಾರೆ.
ಟ್ರೇಜರಿಯ ನಿವೃತ್ತ ಅಧಿಕಾರಿಯೊಬ್ಬರ ಸಲಹೆ ಮೇರೆಗೆ ಆನ್ಲೈನ್ ಸ್ಟೇಟಸ್ ನಲ್ಲಿ ಆಧಾರ ಕಾರ್ಡ್ ನಂಬರ್ ಹಾಕಿ ನೋಡಿದಾಗ ಸದರಿ ಆಧಾರ ಕಾರ್ಡ್ ಲಕ್ಮೀಬಾಯಿ ತಿಮ್ಮಪ್ಪ ಮಳಲಿ ಎಂಬುವರ ಉಳಿತಾಯ ಖಾತೆಗೆ ಲಿಂಕ್ ಆಗಿ ರೈತನ ಹಣ ಅವರ ಖಾತೆಗೆ ದಿ.22/11/2019 ರಂದು ಜಮೆ ಆಗಿದ್ದು ಗೊತ್ತಾಗಿದೆ.
ಬ್ಯಾಂಕ್ ನವರು ಸರಿಯಾಗಿ ಸ್ಪಂದಿಸದ ಕಾರಣ ರೈತ ಮುಧೋಳ ಡಿಸಿಸಿ ಬ್ಯಾಂಕ ಶಾಖೆ, ನವನಗರ ಡಿಸಿಸಿ ಬ್ಯಾಂಕ ಪ್ರಧಾನ ಕಛೇರಿಗೆ 04/12/2020 ರಂದು ಕಾನೂನಾತ್ಮಕವಾಗಿ ನೋಟೀಸು ಕಳಿಸಿದ್ದಾರೆ. ನೋಟೀಸಿಗೂ ಸ್ಪಂಧಿಸದ ಕಾರಣ ಮುಧೋಳ ಡಿಸಿಸಿ ಬ್ಯಾಂಕ ಶಾಖೆ, ಡಿಸಿಸಿ ಬ್ಯಾಂಕ ಪ್ರಧಾನ ಕಛೇರಿ ಹಾಗೂ ಲಕ್ಷ್ಮೀ ಬಾಯಿ ತಿಮ್ಮಪ್ಪ ಮಳಲಿಯವರ ಮೇಲೆ ದಿ.15/01/2021 ರಂದು ದೂರು ದಾಖಲಿಸುತ್ತಾರೆ.
ಎಲ್ಲ ದಾಖಲೆ ಹಾಗೂ ಸಾಕ್ಷಿ ಗಳನ್ನು ಪರಿಸೀಲಿಸಿದ ಆಯೋಗ, ವಿವಾದಿತ ಹಣ ರೂ.46998/- ಗಳನ್ನು ಮುಧೋಳ ಡಿಸಿಸಿ ಬ್ಯಾಂಕ ಶಾಖೆ ದೂರುದಾರರ ಉಳಿತಾಯ ಖಾತೆಗೆ ದಿ.02/01/2021 ರಂದು ಜಮೆ ಮಾಡಿದ್ದನ್ನು ಗಮನಿಸಿದೆ. ಮುಧೋಳ ಡಿಸಿಸಿ ಬ್ಯಾಂಕ ಶಾಖೆಯ ನಿರ್ಲಕ್ಷ್ಯತೆ ಹಾಗೂ ಸೇವಾ ನೂನ್ಯತೆಯನ್ನು ಗಂಭೀರವಾಗಿ ಪರಿಗಣಿಸಿ ರೂ.46998/- ಗಳಿಗೆ ದಿ. 22/11/2019 ರಿಂದ ದಿ.02/01/2021 ರ ವರೆಗಿನ ಬಡ್ಡಿ ಹಾನಿಯನ್ನು ಶೇಕಡಾ ರೂ. 6/- ರಂತೆ, ಸೇವಾ ನೂನ್ಯತೆ ಗಾಗಿ ರೂ. 2000/- ಹಾಗೂ ಮಾನಸಿಕ ವ್ಯಥೆ ಮತ್ತು ದಾವಾ ವೆಚ್ಚ ರೂ. 2000/- ಗಳನ್ನು 45 ದಿನಗಳೊಳಗಾಗಿ ದೂರುದಾರರಿಗೆ ಕೊಡಬೇಕು, ತಪ್ಪಿದಲ್ಲಿ ಶೇಕಡಾ ರೂ. 9/- ರಂತೆ ಬಡ್ಡಿ ಸಮೇತ ಕೊಡಬೇಕು ಎಂದು ಅಧ್ಯಕ್ಷರು ವಿಜಯಕುಮಾರ ಪಾವಲೆ, ಸದಸ್ಯರು ಗಳಾದ ರಂಗನಗೌಡ ದಂಡಣ್ಣವರ ಹಾಗೂ ಶ್ರೀಮತಿ ಸಮಿವುನ್ನೀಸಾ ಅಬ್ರಾರ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.