ನವದೆಹಲಿ: ‘ನನಗೆ ಕೇಂದ್ರ ಸರ್ಕಾರದ ಸಹಕಾರ ಬೇಕು, ಪ್ರಧಾನಿ ಮೋದಿಯವರ ಆಶೀರ್ವಾದ ಬೇಕು‘ – ಇದು ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ದೆಹಲಿ ಮುಖ್ಯಮಂತ್ರಿಯೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿರುವ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯಿಸಿದ ಪರಿ ಇದು.
"ಪಾಲಿಕೆ ಚುನಾವಣೆ ಗೆಲುವಿನ ಬಳಿಕ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಗೆಲುವು ತಂದುಕೊಟ್ಟಿದ್ದಕ್ಕೆ ಹಾಗೂ ಬದಲಾವಣೆ ತಂದಿದ್ದಕ್ಕೆ ನಾನು ದೆಹಲಿಯ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ದೆಹಲಿಗಾಗಿ ಕೆಲಸ ಮಾಡಲು ನನಗೆ ಈಗ ಕಾಂಗ್ರೆಸ್ ಹಾಗೂ ಬಿಜೆಪಿಯ ಸಹಾಯ ಬೇಕಾಗಿದೆ‘ ಎಂದು ಅವರು ಹೇಳಿದ್ದಾರೆ.
‘ನನಗೆ ಕೇಂದ್ರ ಸರ್ಕಾರದ ಸಹಕಾರ ಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಆಶಿರ್ವಾದ ಬೇಕು. ಎಂಸಿಡಿಯನ್ನು ನಾವು ಭ್ರಷ್ಟಾಚಾರ ಮುಕ್ತ ಮಾಡಬೇಕಿದೆ. ಒಂದು ಇಡೀ ದೇಶಕ್ಕೆ ದೆಹಲಿಯ ಜನ ಸಂದೇಶ ಕೊಟ್ಟಿದ್ದಾರೆ‘ ಎಂದು ಅವರು ಹೇಳಿದ್ದಾರೆ.
2015ರಿಂದ ದೆಹಲಿ ವಿಧಾನಸಭೆಯಲ್ಲಿ ಅಧಿಕಾರದಲ್ಲಿ ಇರುವ ಆಮ್ ಆದ್ಮಿ ಪಕ್ಷವು ಇದೇ ಮೊದಲ ಬಾರಿಗೆ ದೆಹಲಿ ಪಾಲಿಕೆಯಲ್ಲಿ ಅಧಿಕಾರ ಪಡೆದಿದೆ.
ಚುನಾವಣೆಯಲ್ಲಿ ಎಎಪಿ 134 ಸ್ಥಾನಗಳನ್ನು ಗೆದ್ದಿದೆ, ಬಿಜೆಪಿ 104 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 9 ಸ್ಥಾನಗಳನ್ನು ಗಳಿಸಿದರೆ, ಸ್ವತಂತ್ರ ಅಭ್ಯರ್ಥಿಗಳು 3ರಲ್ಲಿ ಗೆಲುವು ಸಾಧಿಸಿದ್ದಾರೆ."