ಜಡಗಪ್ಪ ಜಡಗನ್ನವರ
ಹಲಗಲಿಯ ಬಂಡಾಯಕ್ಕೆ ಹಲಗಲಿಯ ಬೇಡರು ಆಂಗ್ಲರ ಶಸ್ತ್ರಾಸ್ತ್ರ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಲು ಹೊಳವು ಹಾಕಿದವನೇ ಈ ಜಡಗಪ್ಪ, ಬೆಳಗಾವಿ ಜಿಲ್ಲೆಯ ಸತ್ತಿಗೇರಿ ಗ್ರಾಮದಿಂದ ಹಲಗಲಿಗೆ ಈತನ ಪೂರ್ವಜರು ವಲಸೆ ಬಂದಿದ್ದರೆಂದು ಹೇಳಲಾಗುತ್ತಿದೆ. ದೈವಾಂಶ ಸಂಭೂತನಾಗಿದ್ದರಿಂದಲೇ ಸರಕಾರದ ವಿರುದ್ಧ ಬಂಡೇಳುವಂತಹ ಸಾಮರ್ಥ್ಯ ಇವನಿಗೆ ಲಭಿಸಿತ್ತೆಂದು ಹಲಗಲಿಯ ಮುಗ್ಧ ಜನರ ನಂಬಿಕೆ. ವಲಸೆ ಬಂದ ಮನೆತನದಲ್ಲಿ ಹುಟ್ಟಿ ಬೆಳೆದ ಜಡಗಪ್ಪ ಹಲಗಲಿಯ ದಟ್ಟ ಅರಣ್ಯ ಪ್ರದೇಶದಲ್ಲಿರುವ ಕಣಿ ಬಸವಣ್ಣನ ದೇವಸ್ಥಾನದ ಪಕ್ಕದಲ್ಲಿ ಒಂದಿಷ್ಟು ಕಾಡನ್ನು ಕಡಿದು, ಕೃಷಿ ಜಮೀನಾಗಿ ಪರಿವರ್ತಿಸಿ, ಉಳುಮೆ ಮಾಡಿಕೊಂಡಿದ್ದನೆಂದೂ, ಬ್ರಿಟಿಷರ ಕಾಟಕ್ಕೆ ಬೇಸತ್ತ ಆತ ಹೊಲದಲ್ಲಿಯೋ, ತೆಗ್ಗಿ ಗ್ರಾಮದ ಸರಹದ್ದಿನಲ್ಲಿರುವ ಗವಿಗಳಲ್ಲಿಯೋ, ವಾಸವಾಗಿರುತ್ತಿದ್ದ. ಬ್ರಿಟಿಷರ ವಿರುದ್ಧ ಹೋರಾಟ ನಡೆಸಲು ಅವಕಾಶಕ್ಕಾಗಿ ಕಾಯುತ್ತಿದ್ದ ಈತ ಶಸ್ತ್ರಾಸ್ತ್ರ ನಿಷೇಧ ಕಾಯ್ದೆಯನ್ನೇ ಒಂದು ಪ್ರಬಲ ಅಸ್ತ್ರವನ್ನಾಗಿರಿಸಿಕೊಂಡು ಇಡೀ ಬೇಡ ಜನಾಂಗವನ್ನು ಸಂಘಟಿಸಿ, ಆಂಗ್ಲರ ವಿರುದ್ಧ ಬಂಡೇಳುವಂತೆ ಪ್ರಚೋದಿಸಿ, ಮೊದಲ ಹಂತದಲ್ಲಿ ಯಶಸ್ವಿಯಾದವ. ಎರಡನೇ ಹಂತದಲ್ಲಿ ಆಂಗ್ಲರಿಗೆ ಸೆರೆಸಿಕ್ಕಿ ನೇಣಿಗೆ ಕೊರಳೊಡ್ಡಿದವ, ಹಲಗಲಿಯಲ್ಲಿ ಜಡಗಣ್ಣವರ ಎಂಬ ಮನೆತನ ಇಂದಿಗೂ ಇದೆ. ಆ ಕುಟುಂಬದಲ್ಲಿ ಜಡಗಪ್ಪ, ಜಡಗಣ್ಣ ಎಂದು ತಮ್ಮ ಮಕ್ಕಳಿಗೆ ಅತ್ಯಂತ ಪ್ರೀತಿ ಗೌರವದಿಂದ ಹೆಸರಿಡುವದು ಇಂದಿಗೂ ಕಂಡುಬರುತ್ತದೆ.
ಬಾಲಪ್ಪ ಕೊಳ್ಳಣ್ಣವರ
ಹಲಗಲಿ ಬಂಡಾಯವೆಂದೊಡನೆ ಅಲ್ಲಿ ಕೋಲ್ಕಿಂಚಿನಂತೆ ಕಣ್ಣು ಕೋರೈಸುವ ಮುಖ್ಯವಾದ ಎರಡು ಹೆಸರುಗಳೆಂದರೆ “ಜಡಗಪ್ಪ ಹಾಗೂ ಬಾಲಪ್ಪ” ಈ ಬಾಲಪ್ಪ ಕೊಳ್ಳಣ್ಣವರ ಎಂಬಾತ ಜಡಗಪ್ಪನ ಸೋದರಳಿಯ. ಜಡಗಪ್ಪನ ಸೋದರಿ ರಾಮವ್ವ ಎಂಬಾಕೆಯನ್ನು ಹಲಗಲಿಯ ಪಕ್ಕದ ಗ್ರಾಮ ಅರಕೇರಿಗೆ (ಸದ್ಯಕ್ಕೆ ಬೀಳಗಿ ತಾಲೂಕು) ಮದುವೆ ಮಾಡಿಕೊಡಲಾಗಿತ್ತು. ಆಕೆಯ ಮಗನೇ ಬಾಲಪ್ಪ. ಅರಕೇರಿ ಗ್ರಾಮದಲ್ಲಿ ಹಣುಮಂತ ದೇವರ ಪೂಜಾರಿಕೆ ಮಾಡಿಕೊಂಡಿದ್ದ ಮನೆತನ ಇವರದು. ಸೋದರ ಮಾವ ಹಲಗಲಿಯ ಜಡಗಪ್ಪನ ಮನೆಯಲ್ಲಿಯೇ ಬೆಳೆದುಕೊಂಡಿದ್ದ ಈತ ಸಹಜವಾಗಿಯೇ ಸೋದರ ಮಾವನಂತೆಯೇ ಅಂಗ್ರೇಜಿಯವರ ವಿರುದ್ಧ ಮನದಲ್ಲಿಯೇ ಕ್ರೋಧ ತುಂಬಿಕೊಂಡು ಕಿಡಿ ಕಾರುತ್ತಿದ್ದ. ಮಾವ ಬಂಡಾಯದ ಬಾವುಟ ಹಾರಿಸುತ್ತಿದ್ದಂತೆಯೇ ಆತನಿಗೆ ಹೆಗಲುಕೊಟ್ಟು ನೆರವಾಗಿ ನಿಂತ. ಒಂದರ್ಥದಲ್ಲಿ ಮಾವ, ಅಲ್ಲಿಯ ಲವಕುಶರಂತೆ ಇದ್ದರಂತೆ. ಹೋರಾಟದಲ್ಲಿ ಜೊತೆಜೊತೆಯಾಗಿ ನಿಂತೇ ಶತ್ರು ಪಡೆಯ ವಿರುದ್ಧ ಸೆಣಸಿದ ಈ ಜೋಡಿ ನೇಣಿಗೆ ಕೊರಳೊಡ್ಡಿದ್ದು ಕೂಡಾ ಜೊತೆಜೊತೆಯಾಗಿಯೇ ಎಂಬುದು ಸ್ವಾತಂತ್ರ್ಯವನ್ನು ಪ್ರೀತಿಸುವವರ ಹೃದಯಾಂತರಾಳದಲ್ಲಿ ನಿರಂತರ ನೆನಪು. ಅರಕೇರಿ ಹಾಗೂ ಹಲಗಲಿ ಗ್ರಾಮಗಳಲ್ಲಿ ಕೊಳ್ಳಣ್ಣವರ ಎಂಬ ಹಲವಾರು ಕುಟುಂಬಗಳು ಇಂದಿಗೂ ಇವೆ. ಸ್ವಾತಂತ್ರ್ಯಕ್ಕಾಗಿ ಜೀವತೆತ್ತ ತಮ್ಮ ಹಿರಿಯ ಬಂಧುವನ್ನು ನೆನಪಿಸಿಕೊಳ್ಳುವದೇ ನಮ್ಮ ಸೌಭಾಗ್ಯವೆನ್ನುತ್ತವೆ, ಆ ಕುಟುಂಬಗಳು
ಹಣಮಪ್ಪ ಪೂಜೇರ
ಗೋಕಾಕ ತಾಲೂಕಿನ ಕಲ್ಲೊಳ್ಳಿ ಗ್ರಾಮ ಹಣಮಪ್ಪ ಪೂಜೇರನ ಹುಟ್ಟೂರು. ಅಲ್ಲಿ ಈತನದು ಹಣಮಂತ ದೇವರ ಪೂಜಾರಿಕೆ. ಗ್ರಾಮದ ಗೌಡರೊಂದಿಗೆ ಮನಸ್ತಾಪವಾಗಿ ಈತನೂ ಕೂಡ ಹಲಗಲಿಗೆ ವಲಸೆ ಬಂದವನೇ, ಅವನ ಪೂರ್ವಾಪರ ಇತಿಹಾಸವನ್ನು ಕೇಳಿಕೊಂಡ ಗ್ರಾಮದ ಪ್ರಮುಖರು ಇಲ್ಲಿಯೂ ಆತನಿಗೆ ಹಣಮಂತ ದೇವರ ಪೂಜಾರಿಕೆಯನ್ನು ಕೊಡಿಸಿದ್ದಲ್ಲದೇ, ಉಪಜೀವನಕ್ಕಾಗಿ ಒಂದಿಷ್ಟು ಜಮೀನನ್ನು ಕೊಟ್ಟಿದ್ದರು. ಜಡಗಣ್ಣವರ ಮನೆತನದ ಹೆಣ್ಣುಮಗಳೊಬ್ಬಳನ್ನು ಆತನಿಗೆ ಮದುವೆ ಮಾಡಿಕೊಟ್ಟದ್ದರಿಂದ, ಪೂಜಾರಿಕೆಯು ಲಭಿಸಿದ್ದರಿಂದ ಆತ ಇಲ್ಲಿಯೇ ನೆಲೆನಿಂತನಲ್ಲದೇ ಬೀಗರಾದ ಜಡಗಣ್ಣವರ ಬಂಧುಗಳು ಹಾರಿಸಿದ ಬಂಡಾಯದ ಬಾವುಟಕ್ಕೆ ಸೂತ್ರಧಾರನಾಗಿ ತಾನೂ ಕೈ ಜೋಡಿಸಿದ. ಬಂಡಾಯದ ನಂತರ ನಾಲ್ಕನೇ ತಲೆಮಾರಿನ ಪೂಜಾರಿ ಕುಟುಂಬಗಳು ಈಗಲೂ ಹಲಗಲಿಯಲ್ಲಿ ಹಣಮಂತ ದೇವರ ಪೂಜಾರಿಕೆ ವೃತ್ತಿಯನ್ನು ಮುಂದುವರೆಸಿಕೊಂಡು ಹೊರಟಿವೆ. ಅಂದು ಪೂಜಾರಿ ಹಣಮಪ್ಪ ಬಳಸುತ್ತಿದ್ದ ಅಯುಧಗಳು ಇದುವರೆಗೂ ಇವರ ಮನೆತನದಲ್ಲಿದ್ದವು. ಇತ್ತೀಚೆಗೆ ಅವುಗಳನ್ನು ಮುರಿಸಿ ಕೃಷಿ ಉಪಕರಣಗಳನ್ನು ಮಾಡಿಸಿದ್ದಾಗಿಯೂ, ಒಂದನ್ನು ಮಾತ್ರ ಜಗುಲಿಯ ಮೇಲಿಟ್ಟು ಪೂಜಿಸುತ್ತಿರುವುದಾಗಿಯೂ ಈ ಕುಟುಂಬದವರು ಹೇಳುತ್ತಾರೆ. ಈ ದೇಶದ ಸ್ವಾತಂತ್ರ್ಯವೇ ಅವರಿವರ ಕೈಗೆ ಸಿಕ್ಕು, ಹರಿದು, ಮುರಿದು, ಮುಕ್ಕಾಗಿ ಹೋಗುತ್ತಿರುವ ಇಂದಿನ ದಿನಮಾನಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಕೈಗೆತ್ತಿಕೊಂಡ ಆಯುಧಗಳದೇನು ಲೆಕ್ಕಬಿಡಿ ಎಂದು ಹೇಳುವುದಿಲ್ಲಿ ಅನಿವಾರ್ಯ.
ಬೇಹುಗಾರ ಭೀಮಪ್ಪ ಚಿಕ್ಕಣ್ಣವರ
ಜಡಗಪ್ಪ, ಬಾಲಪ್ಪ ಹಣಮಪ್ಪ ಇವರ ಜೊತೆಗೇನೆ ಬರುವ ಇನ್ನೊಂದು ಹೆಸರು ಭೀಮಪ್ಪ ಚಿಕ್ಕಣ್ಣವರ ಎಂಬಾತನದು. ಈತ ಊರು ಒಳಹೊರಗೆ ಸುಳಿದಾಡುತ್ತ ಶತ್ರು ಪಕ್ಷದವರ ಚಲನವಲನದ ಮೇಲೆ ನಿಗಾ ಇಟ್ಟು ಹದ್ದಿನ ಕಣ್ಣಿನಿಂದ ಬೇಹುಗಾರಿಕೆ ನಡೆಸುತ್ತಿದ್ದನಂತೆ. ಕೋಟೆಯ ಮೇಲೆ ನಿಂತೇ ಆಂಗ್ಲ ಅಧಿಕಾರಿಯ ಆಗಮನವನ್ನು ಊಹಿಸಿ ಕವಣೆಗಲ್ಲು ಬೀಸಿ ಕುದುರೆಯ ಕಾಲು ಮುರಿದ, ಕುದುರೆ ಮುಗ್ಗರಿಸಿದೊಡನೆ ಕೆಳಗೆ ಬಿದ್ದ ಅಧಿಕಾರಿಯನ್ನು ಭೀಮಪ್ಪ ಬಂಧಿಸಿದ. ಅಷ್ಟೊತ್ತಿಗಾಗಲೇ ಬೇಡರ ಪಡೆಯವರು ಹಲವಾರು ಆಂಗ್ರೇಜಿಯವರ ರುಂಡಗಳನ್ನುರುಳಿಸಿದ್ದರು. ತನ್ನವರಿಗಾದ ಗತಿಯನ್ನು ಕಂಡು ಅಂಗ್ಲ ಅಧಿಕಾರಿ ಬಾಯಲ್ಲಿ ಹುಲ್ಲುಕಡ್ಡಿ ಕಚ್ಚಿದ. ಹುಲ್ಲುಕಡ್ಡಿ ಕಚ್ಚಿದನೆಂದರೆ ಶರಣಾಗತನಾಗಿದ್ದಾನೆ ಎಂದರ್ಥ. ಶರಣಾಗತರಾದವರನ್ನು ಕೊಲ್ಲುವಂತಿಲ್ಲ. ಅವರನ್ನು ಕ್ಷಮಿಸಬೇಕೆಂಬುದು ರಣನೀತಿ, ಭೀಮಪ್ಪ ತನ್ನ ರಣನೀತಿ ಪಾಲಿಸಿ ಅವರನ್ನು ಕ್ಷಮಿಸಿದ. ಅಧಿಕಾರಿ ಭೀಮಪ್ಪನನ್ನು ಕೇಳಿದನಂತೆ “ಈ ಊರಿನಲ್ಲಿ ನೀನೇ ಶೂರನೋ? ನಿನಗಿಂತ ಶೂರರಿದ್ದಾರೆಯೋ?” ಎಂಬ ಪ್ರಶ್ನೆಗೆ ಭೀಮಪ್ಪ “ಅಯ್ಯೋ! ನಾನು ಬಾಗ್ಲಾ ಕಾಯುವ ಅಳು, ನಮ್ಮಪ್ಪನಂತಹ ಶೂರರು ಊರೊಳಗಿದ್ದಾರೆ” ಎಂದನಂತೆ. ಪರಿಸ್ಥಿತಿಯ ಗಂಭೀರತೆಯನ್ನು ಅಭ್ಯಸಿಸಿದ ಅಧಿಕಾರಿ ಜಿಲ್ಲಾ ಕೇಂದ್ರಕ್ಕೆ ವಾಪಸಾದ. ರಣನೀತಿ ಪಾಲಿಸಿ ಭೀಮಪ್ಪ ಶತ್ರುವಿನ ಜೀವ ಉಳಿಸಿದ. ಹೆಚ್ಚಿನ ಸೈನ್ಯದೊಡನೆ ವಾಪಸ್ಸಾದ ಶತ್ರು ಮೋಸದಿಂದ ರಾತ್ರಿಯೇ ಊರಿಗೆ ನುಗ್ಗಿ ಬೆಂಕಿ ಇಟ್ಟು ಹಲವರ ಪ್ರಾಣ ತೆಗೆದು ರಣನೀತಿ ಮುರಿದ. ಆಂಗ್ಲರ ಮೋಸದ ಕೃತ್ಯಕ್ಕೆ ಇದೂ ಒಂದು ಸೇರ್ಪಡೆಯಷ್ಟೇ. ಭೀಮಪ್ಪ ಹಾಗೂ ಆತನ ಅನುಚರರ ಕೈಯಲ್ಲಿ ಹತರಾದ ಆಂಗ್ಲ ಸೈನಿಕರ ಶವಗಳನ್ನು ಜಿಲ್ಲಾ ಕೇಂದ್ರ ಸ್ಥಾನವಾದ ಕಲಾದಗಿಗೆ ಸಾಗಿಸಿ ಅಲ್ಲಿ ಶವ ಸಂಸ್ಕಾರ ಮಾಡಲಾಯಿತು. ಇಂದಿಗೂ ಕಲಾದಗಿಯಲ್ಲಿ ಮಡಿದ ಆಂಗ್ಲ ಸೈನಿಕರ ಸಮಾಧಿಗಳು ಹೆಸರಿನೊಂದಿಗೆ ನೋಡಲು ಸಿಕ್ಕುತ್ತವೆ.
ರಾಮವ್ವ
ಜಡಗಪ್ಪನ ಸಹೋದರಿ ರಾಮವ್ವ, ಈಕೆಯನ್ನು ಅರಕೇರಿ ಗ್ರಾಮಕ್ಕೆ ಮದುವೆ ಮಾಡಿ ಕೊಟ್ಟಿದ್ದಾಗಿಯೂ, ಬಂಡಾಯದ ಸಂದರ್ಭದಲ್ಲಿ ವೈರಿಗಳೇ ಮೆಚ್ಚಿ ಅಹುದಹುದೆನ್ನುವಂತೆ ಅಣ್ಣ ಜಡಗಪ್ಪನಿಗೂ, ಮಗ ಬಾಲಪ್ಪನಿಗೂ ಹೆಗಲೆಣೆಯಾಗಿ ನಿಂತು ವೈರಿ ಪಡೆಯನ್ನು ಸದೆ ಬಡೆಯುವಲ್ಲಿ ಅಪ್ರತಿಮ ಸಾಹಸ ಮೆರೆದವಳೆಂದು ಹೇಳಲಾಗುತ್ತಿದೆ. ರಾಮವ್ವನ ಜೊತೆಗೆ ಹಣಮವ್ವ, ಲಗಮವ್ವ ಎಂಬ ಮಹಿಳೆಯರು ಕೂಡಾ ಹೋರಾಟದಲ್ಲಿ ಪಾಲ್ಗೊಂಡಿದ್ದಾಗಿ ತಿಳಿದು ಬರುತ್ತದೆ.
ಬಾಲಾಜಿ ನಿಂಬಾಳಕರ್
ಮೂಲತಃ ಹಲಗಲಿಯವನೂ, ಮುಧೋಳ ಸಂಸ್ಥಾನಿಕರ ಕುಲಬಾಂಧವನೂ ಆಗಿದ್ದ ಬಾಲಾಜಿ ನಿಂಬಾಳಕರ್ ಎಂಬಾತ ಮುಧೋಳ ಸಂಸ್ಥಾನದ ದಕ್ಷಿಣ ಭಾಗದ ಕೊನೆಯ ಹಳ್ಳಿ 'ಹೊಸಕೋಟೆ' ಗ್ರಾಮದ ಕಿಲ್ಲೇದಾರನಾಗಿದ್ದ. ರಕ್ಷಣೆಗಾಗಿ ಮುಧೋಳ ಸಂಸ್ಥಾನಿಕರು