ನುಡಿಯಿಂದ ಜನರನ್ನು ಸೆಳೆಯುವ ಜನಕ್ಕೆ ಈ ಲೋಕದಲ್ಲಿ ಕೊರತೆ ಇಲ್ಲ. ಆದರೆ ಅದರ ಪರಿಣಾಮ ಕೇಳುಗನ ಆಳಕ್ಕಿಳಿಯುವುದಿಲ್ಲ. ಉತ್ತಮ ಮಾರ್ಗದಲ್ಲಿ ನಡೆದು, ಅದನ್ನೇ ಹೃದಯದಲ್ಲಿ ತುಂಬಿಕೊಂಡ ನಂತರ, ತಮ್ಮ ಹೃದಯದಲ್ಲಿ ಮೂಡಿದ ಸದ್ಭಾವದ ಪಾಕವನ್ನೇ ಮಾತಿನಾನುಭೂತಿಯಲ್ಲಿ ಅಭಿವ್ಯಕ್ತಿಸುವ ನಡೆಯೇ ಮಹಾತ್ಮರ ಹಾದಿ. ಇಂದಿನ ಯುಗದ ಅಂತಹ ಅಪರೂಪದ ಮಹಾತ್ಮರಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮುಖ್ಯರು.
ಶ್ರೀಗಳ ಯೌವ್ವನಾವಸ್ಥೆಯಲ್ಲಿನ ಭಾವಚಿತ್ರ |
ಸಾಮಾಜಿಕ ಪರಿವರ್ತನೆಗಾಗಿ ದುಡಿಯುತ್ತಿರುವ ಸಂಸ್ಥೆಗಳ ಸಾಲಿಗೆ ವಿಜಯಪುರದ ಜ್ಞಾನ ಯೋಗಾಶ್ರಮವು ಸೇರುತ್ತದೆ. ಐತಿಹಾಸಿಕ ಗುಮ್ಮಟನಗರಿ ವಿಜಯಪುರವು ಧಾರ್ಮಿಕ ಪುಣ್ಯ ಕ್ಷೇತ್ರವೂ ಹೌದು. ಇಲ್ಲಿನ ಜ್ಞಾನ ಯೋಗಾಶ್ರಮವು ನಾಡಿನ ಪ್ರಸಿದ್ಧ ಆಧ್ಯಾಾತ್ಮಿಕ, ಸಾಮಾಜಿಕ, ಶೈಕ್ಷಣಿಕ, ತಾಣಗಳಲ್ಲಿ ಒಂದಾಗಿದೆ. ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಈ ಜ್ಞಾನ ಯೋಗಾಶ್ರಮವನ್ನು ಅದರ ಅಧ್ಯಕ್ಷರಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ನಿಸ್ವಾರ್ಥ ಸೇವೆ, ಸರಳ ಜೀವನ, ಅಕ್ಷರ ದಾಸೋಹ, ಶ್ರೀಗಳ ಮೂಲ ಉದ್ದೇಶವಾಗಿದೆ. ಆಸೆಯೇ ದುಃಖಕ್ಕೆೆ ಮೂಲ ಕಾರಣ ಎಂದು ಅರಿತಿರುವ ಸಿದ್ದೇಶ್ವರ ಸ್ವಾಮೀಜಿ ಅವರು ಸೀದಾ, ಸಾದಾ, ಸರಳ, ಸುಂದರ ಅಧ್ಯಾತ್ಮದ ಜೀವನ ನಡೆಸುತಿದ್ದಾರೆ. ಹಣ ಮತ್ತು ವಸ್ತುಗಳ ಮೇಲೆ ಆಸೆ ಹುಟ್ಟಬಾರದು ಎಂದು ತಾವು ಧರಿಸುವ ಉಡುಪುಗಳಿಗೆ ಅವರು ಜೇಬು ಕೂಡಾ ಇಟ್ಟಿಲ್ಲವಂತೆ. ಅವರಿಗೆ ಆಧ್ಯಾತ್ಮವೆಂಬುದು ಬೋಧನೆಯ ವಸ್ತುವಲ್ಲ. ಸರಳ ಸಹಜ ಬದುಕಿನ ದೈನಂದಿನ ನಡೆ.
ಸಿದ್ದೇಶ್ವರ ಸ್ವಾಮೀಜಿ ಅವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ಕೃಷಿ ಕುಟುಂಬದಲ್ಲಿ 1941ರ ಅಕ್ಟೋಬರ್ 24ರಂದು ಜನಿಸಿದರು. ಸಿದ್ದಗೊಂಡಪ್ಪ ಇವರ ಬಾಲ್ಯದ ಹೆಸರು.ತಮ್ಮ ಗ್ರಾಮದ ಶಾಲೆಯಲ್ಲಿಯೇ ನಾಲ್ಕನೇ ತರಗತಿವರೆಗೆ ಓದಿದ ನಂತರ ಸಿದ್ದಗೊಂಡಪ್ಪ ಜ್ಞಾನ ಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮಿಗಳ ಬಳಿಗೆ ಬಂದರು. ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದರು. ಸ್ವಾಮಿಗಳು ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ತಿಂಗಳುಗಟ್ಟಲೆ ಪ್ರವಚನ ನೀಡುತ್ತಿದ್ದರು. ಇವರ ಗಾಢ ಪ್ರಭಾವ ಸುತ್ತಮುತ್ತಲ ಜನರ ಮೇಲೆ ಉಂಟಾಗಿ ಕ್ರಮೇಣ ಶ್ರೀಗಳು ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯೆಗಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿ ಅವರಿಗಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಅವರಿಗೆ ಊಟ, ವಸತಿಗಳಿಗೆ ವ್ಯವಸ್ಥೆ ಮಾಡಿದರು. ಇದರಿಂದಾಗಿ ಸಾವಿರಾರು ಮಕ್ಕಳು ವಿದ್ಯಾವಂತರಾದರು. ಹಾಗೆ ವಿದ್ಯೆ ಕಲಿಯಲು ಬಂದ ಸಾವಿರಾರು ಮಕ್ಕಳಲ್ಲಿ ಶ್ರೀ ಸಿದ್ದಗೊಂಡಪ್ಪನೂ ಒಬ್ಬ.
ಮಲ್ಲಿಕಾರ್ಜುನ ಶ್ರೀಗಳು, ತಾವು ಮಾಡುವ ಪುರಾಣ, ಪ್ರವಚನ, ಆಧ್ಯಾತ್ಮಿಕ ಹಾಗೂ ಧಾರ್ಮಿಕ ಸಭೆ ಸಮಾರಂಭಗಳಿಗೆ ಚುರುಕಾಗಿದ್ದು, ಆಸಕ್ತನಾಗಿದ್ದ ಸಿದ್ದಗೊಂಡಪ್ಪನನ್ನು ಕರೆದುಕೊಂಡು ಹೋಗುತ್ತಿದ್ದರು. ಇದರಿಂದ ಪ್ರಭಾವಿತರಾದ ಸಿದ್ದೇಶ್ವರರು ಧರ್ಮಗಳ ಗ್ರಂಥ ಅಧ್ಯಯನ ಮಾಡಿ ಅಧ್ಯಾತ್ಮದ ಬಗ್ಗೆೆ ಸಮಗ್ರವಾಗಿ ಓದಿ ತಿಳಿದುಕೊಂಡರು. ಅಲ್ಲದೇ ವಿದ್ಯಾಭ್ಯಾಸದಲ್ಲಿಯೂ ಪ್ರತಿಭಾನ್ವಿತರಾದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಮುಗಿಸಿ, ಕೊಲ್ಲಾಪುರದ ವಿಶ್ವವಿದ್ಯಾಲಯಲ್ಲಿ ತತ್ವಶಾಸ್ತ್ರದ ವಿಷಯದಲ್ಲಿ ಎಂ.ಎ. ಪದವಿಯನ್ನು ಪಡೆದರು.
ಎಂ.ಎ. ಪದವಿಯ ಅಭ್ಯಾಸದ ಸಮಯದಲ್ಲಿ ಶ್ರೀ ಸಿದ್ದೇಶ್ವರರರು ಕೊಲ್ಹಾಪುರದಲ್ಲಿ ಶ್ರೀ ವಿಜಯ ಪಾಟೀಲರ ಮನೆಯಲ್ಲಿ ವಾಸವಿದ್ದರು. ಆ ಅವಧಿಯಲ್ಲಿ ತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದ ಪ್ರವಚನಗಳನ್ನು ಒಂದುಗೂಡಿಸಿ "ಸಿದ್ದಾಂತ ಶಿಖಾಮಣಿ " ಎಂಬ ಪುಸ್ತಕ ಬರೆದು ಗುರುಗಳ ಹೆಸರಿನಲ್ಲಿ ಪ್ರಕಟಿಸಿದರು. ಆಗ ಅವರಿಗೆ ಕೇವಲ 19 ವರ್ಷ ಮಾತ್ರ ಆಗಿತ್ತು. ಸ್ನಾತಕೋತ್ತರ ಪದವಿ ಪಡೆದು ವಿಜಯಪುರಕ್ಕೆ ಹಿಂದಿರುಗಿದ ಸಿದ್ದೇಶ್ವರರಿಗೆ ಭಗವದ್ಗೀತೆಯ ಬಗ್ಗೆ, ಉಪನಿಷತ್ತುಗಳ ಬಗ್ಗೆ ಮಲ್ಲಿಕಾರ್ಜುನ ಸ್ವಾಮಿಗಳು ವ್ಯಾಖ್ಯಾನವನ್ನು ನೀಡಿ ಅವರ ಜ್ಞಾನದಿಗಂತವನ್ನು ವಿಸ್ತರಿಸಿದರು.
ಸಿದ್ದೇಶ್ವರರು ಉಪನಿಷತ್ತುಗಳು, ಭಗವದ್ಗೀತೆ, ಯೋಗಸೂತ್ರ, ವಚನಶಾಸ್ತ್ರ ಮುಂತಾದ ವಿಷಯಗಳ ಬಗೆಗೆ ತಾವು ಗುರು ಮುಖೇನ ಕಲಿತ ಜ್ಞಾನವನ್ನು ಬಳಸಿಕೊಂಡು ಬೋಧಪ್ರದ ಪ್ರವಚನಗಳನ್ನು ನೀಡುತ್ತಿದ್ದಾರೆ. ಗಹನವಾದ ವೇದಾಂತ ತತ್ವಗಳನ್ನು ಅತ್ಯಂತ ಸರಳವಾಗಿ ಜನಮಾನಸದಲ್ಲಿ ಉಳಿಯುವಂತೆ ವಿವರಿಸುವುದು ಅವರ ವೈಶಿಷ್ಟ್ಯವಾಗಿದೆ.
ಸಿದ್ದೇಶ್ವರರ ಉಪನ್ಯಾಸ ಸರಣಿಯ "ಬದುಕುವದು ಹೇಗೆ" ನಾವು ಹೇಗೆ ಬದುಕಬೇಕು, ಬದುಕಿಗೆ ದಾರಿ ಮಾಡಿಕೊಳ್ಳಬೇಕು ಎಂಬುದು ಲಕ್ಷಾಂತರ ಭಾರತೀಯರನ್ನು ಸೆಳೆದಿದೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಅಲ್ಲಮ ಪ್ರಭುಗಳ ವಚನಗಳ ಮೇಲೆ ಮಹತ್ವದ ಬೆಳಕು ಚೆಲ್ಲುತ್ತಾ ಬಂದಿದ್ದಾರೆ. ಪ್ರಪಂಚದಾದ್ಯಂತ ಆಧ್ಯಾತ್ಮಿಕ ಪ್ರವಚನಗಳನ್ನು ನೀಡಿದ್ದಾರೆ. ಭಾರತದ ಸಂತರ ಕುರಿತಾಗಿ ಅಮೂಲ್ಯ ಗ್ರಂಥಗಳನ್ನು ರಚಿಸಿದ್ದಾರೆ. ವೇದಾಂತ, ಗೀತೆ, ಯೋಗಸೂತ್ರ, ವಚನಗಳ ಕುರಿತಾದ ಶ್ರೀ ಸ್ವಾಮಿಜಿಯವರ ಉಪನ್ಯಾಸಗಳು ಅವುಗಳಲ್ಲಿನ ನವ್ಯತೆ, ಚಿಂತನೆ, ಅಭಿವ್ಯಕ್ತಿ ಮತ್ತು ಚಿಂತನೆಗಳಿಂದ ಹೆಸರುವಾಸಿಯಾಗಿದೆ. ಶ್ರೀ ಸ್ವಾಮೀಜಿ ಅವರು "ಪತಂಜಲಿ ಯೋಗಶಾಸ್ತ್ರ"ವನ್ನು ಸಂಪಾದಿಸಿದ್ದಾರೆ. ಸಿದ್ದೇಶ್ವರ ಶ್ರೀಗಳು ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲಿಷ್, ಮರಾಠಿ ಪಂಚ ಭಾಷೆಗಳಲ್ಲಿ ಪ್ರವಚನ ನೀಡುತ್ತಾರೆ. ಸಿದ್ದೇಶ್ವರರ ಪ್ರವಚನ ಕೇಳಿದವರು ಅದರಲ್ಲೇ ಅನುರಕ್ತರಾಗಿ ಬಿಡುತ್ತಾರೆ. ಅವರ ಪ್ರವಚನ ಕಾರ್ಯಕ್ರಮ ಎಲ್ಲಿ ಏರ್ಪಡಿಸಿದರೂ ಸಹ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ.
ಜ್ಞಾನಯೋಗಾಶ್ರಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಸಿದ್ಧೇಶ್ವರರು ತಮ್ಮ ಗುರುಗಳ ಮಾರ್ಗದರ್ಶನದಲ್ಲೇ ಆಶ್ರಮದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ತಮ್ಮ ಗುರುಗಳು ಸ್ಥಾಪಿಸಿದ ನೂರಾರು ವಿದ್ಯಾ ಸಂಸ್ಥೆಗಳನ್ನು ಸಿದ್ದೇಶ್ವರರು ಮುಂದುವರಿಸಿಕೊಂಡು ಬರುತ್ತಿದ್ದರೂ, ಯಾವ ಸಂಸ್ಥೆಗಳಿಗೂ ಆಶ್ರಮದ ಹೆಸರಾಗಲಿ, ಅವರ ಹೆಸರಾಗಲಿ ಇರುವುದಿಲ್ಲ ಎಂದರೆ ಆಶ್ಚರ್ಯವಲ್ಲವೆ? "ಕೆರೆಯ ನೀರನ್ನು ಕೆರೆಗೆ ಚೆಲ್ಲಿ" ಎಂಬ ದಾಸ ವಾಣಿಯಂತೆ ನನ್ನದೇನಿದೆ, ಎಲ್ಲವೂ ಭಗವಂತನದು,ಇಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ದೇವರು, ಎಲ್ಲರಲ್ಲೂ ದೇವರನ್ನು ಕಾಣಬೇಕು, ನಾನು ನನ್ನದೆಂಬ ಮಮಕಾರ ಸಲ್ಲದು, ಇಹಪರ ಎರಡೂ ಒಂದೇ ಎಂದು ಸಾರುತ್ತ ಅದರಂತೆ ನಡೆಯುತ್ತ ಇರುವ ಅಪರೂಪದ ಯೋಗಿಗಳು ಶ್ರೀ ಸಿದ್ದೇಶ್ವರರು.
ಸಿದ್ದೇಶ್ವರ ಶ್ರೀಗಳ ಪರಿಸರ ಕಾಳಜಿಯೂ ಮಹತ್ವಪೂರ್ಣವಾದದ್ದು. ಭೂಮಿಯ ಮೇಲೆ ಮನುಷ್ಯ ಒಬ್ಬನೇ ಬುದ್ದಿಜೀವಿ, ಸಂಗಜೀವಿಯಾಗಿದ್ದಾನೆ. ಆದ್ದರಿಂದ ಮನುಷ್ಯ ಸಮಾಜದಲ್ಲಿ ಹೃದಯವಂತಿಕೆಯಿಂದ ಬಾಳಿ ಬದುಕಬೇಕು. ಅಲ್ಲದೇ ಉಳಿದ ಇತರರಿಗೆ ಕೇಡನ್ನು ಬಯಸದೆ ಸಂತೋಷ ನೀಡುವ ಗುಣ ಬೆಳೆಸಿಕೊಳ್ಳಬೇಕು ಎನ್ನುತ್ತಾರೆ.
ಸಿದ್ದೇಶ್ವರ ಶ್ರೀಗಳಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಘೋಷಿಸಿತು. ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಲು ಮುಂದಾಯಿತು. ಆದರೆ ಇಂತಹ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಸಿದ್ದೇಶ್ವರ ಶ್ರೀಗಳು ವಿನಮ್ರವಾಗಿ ನಿರಾಕರಿಸಿದರು. ‘ನಾನೊಬ್ಬ ಸರಳ ವ್ಯಕ್ತಿ. ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವುದು ನನ್ನ ಉದ್ದೇಶ. ಹಾಗಾಗಿ ಪ್ರಶಸ್ತಿಗಳ ಅವಶ್ಯಕತೆಯು ನನಗಿಲ್ಲ. ಅಧ್ಯಾತ್ಮ, ಆದರ್ಶ ಮತ್ತು ನೈತಿಕತೆ ಕೇವಲ ಬೋಧನೆ ಮಾಡುವುದಷ್ಟೇ ಅಲ್ಲ ಅವುಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದು ನನ್ನ ಧರ್ಮ” ಎಂದು ಹೇಳಿ ಗೌರವಪೂರ್ವಕ ಭಾವನೆಯಿಂದ ಅವುಗಳನ್ನು ನಿರಾಕರಿಸಿದರು.
ಪದವಿ, ಪ್ರಶಸ್ತಿ, ಸ್ಥಾನ, ಅಧಿಕಾರಗಳಿಗಾಗಿ ಪರಿತಪಿಸುವ ಲೋಕದಲ್ಲಿ, ನನ್ನ ಅಂತರಾತ್ಮದ ಆನಂದದಲ್ಲಿಯೇ ಎಲ್ಲವೂ ಇದೆ ಎಂದು ವಿನಮ್ರವಾಗಿ ನಿರಂತರ ಹಗಲಿರುಳೂ ಕಾಯಕದಲ್ಲಿ ನಿರತರಾಗಿರುವ ನಮ್ಮ ಕಣ್ಮುಂದೆಯೇ ಇರುವ ಸಿದ್ದೇಶ್ವರ ಶ್ರೀಗಳಂತಹ ಮಹಾತ್ಮರ ಬದುಕು ನಮ್ಮ ಕಣ್ಣನ್ನೂ ತೆರೆಸುವಂತಾಗಲಿ.