ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಗುಲಗಾಲ ಜಂಬಗಿ ಗ್ರಾಮದವರಾದ 'ಸಾಹಿತ್ಯ ಜ್ಯೋತಿ' ಶ್ರೀ ಬಿ. ಪಿ. ಹಿರೇಸೋಮಣ್ಣವರ ಅವರು ನಮ್ಮನ್ನಗಲಿದ್ದಾರೆ. ಆದರ್ಶ ಶಿಕ್ಷಕರಾಗಿ ಮುಧೋಳ ತಾಲೂಕಿನಲ್ಲಿ ಸೇವೆ ಸಲ್ಲಿಸಿ ವಿಶ್ರಾಂತ ಜೀವನವನ್ನು ರನ್ನ ನಾಡಿನಲ್ಲಿ ಕಳೆಯುತ್ತಿದ್ದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಹಾಗೂ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಇವರು ಕಾರ್ಯನಿರ್ವಹಿಸಿದ್ದರು. ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ೬೪ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಧೋಳದಲ್ಲಿ ಯಶಸ್ವಿಯಾಗಿ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮುಧೋಳ ತಾಲೂಕ ಐದನೇಯ ಸಾಹಿತ್ಯ ಸಮ್ಮೇಳನದ ಗೌರವ ಅಧ್ಯಕ್ಷರಾಗಿದ್ದರು. ರನ್ನ ಪ್ರತಿಷ್ಠಾನದ ಸದಸ್ಯರಾಗಿ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದರು. ಹಲವು ಸಂಪಾದಕೀಯ ಕೃತಿ ಕೃತಿಗಳನ್ನು ಹೊರತರುವುದಲ್ಲದೇ ಐದು ಕೃತಿಗಳನ್ನು ರಚಿಸಿದ್ದರು.
ನನ್ನ ತವರೂರಿನಲ್ಲಿ ನಿರಂತರ ಹಳೆಗನ್ನಡದ ಕಹಳೆ ಊದಿದ ಇಂಗ್ಲೀಷ್ ಶಿಕ್ಷಕ, ಗಾಂಧಿ ಚರಿತ್ರೆಯನ್ನು ಸಾರಸ್ವತ ಲೋಕಕ್ಕೆ ಇಂಗ್ಲೀಷಿಗೆ ಭಾಷಾಂತರಿಸಿ ಜೀವನದ ಕೊನೆಯ ಕ್ಷಣಗಳಲ್ಲಿಯೂ ಸಾಹಿತ್ಯದ ಸೇವೆ ಮಾಡಿ ಅಗಲಿದ ಬಿ.ಪಿ.ಹಿರೇಸೋಮಣ್ಣವರ ರನ್ನ ಕಾವ್ಯದ ಗಟ್ಟಿ ಧ್ವನಿ, ಸಾಹಿತ್ಯ ಲೋಕದ ಅಪೂರ್ವ ಚಿಂತಕ,ಮುಧೋಳದ ಏಳಿಗೆ ಬಯಸಿದ ಅಪ್ರತಿಮ ಶಿಕ್ಷಕ.
ಮುಧೋಳದ ಹಿರಿಯ ಸಾಹಿತಿ ಪ್ರೊ ಬಿ.ಪಿ ಹಿರೇಸೋಮಣ್ಣವರ ರನ್ನ ಮಹಾಕವಿಯ ಗದಾಯುದ್ಧ ಕಾವ್ಯದ ಗಟ್ಟಿಧ್ವನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಹಳೆಗನ್ನಡದ ಕಠಿಣ ರನ್ನ ಕಾವ್ಯವನ್ನು ಅವರು ಕಂಠಪಾಠ ಮಾಡಿದ್ದರು. ಮಾತು ಮಾತಿಗೆ ಅವರು ಗದಾಯುದ್ಧದ ಕಾವ್ಯದ ಸಾಲುಗಳನ್ನು ಹೇಳುತ್ತಿದ್ದರು. ಅವರ ಮಾತಿನಲ್ಲಿ ಸ್ಪಷ್ಟತೆ ತುಂಬಿರುತ್ತಿತ್ತು. ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ, ಸರಕಾರಿ ಪ್ರೌಢ ಶಾಲೆಯ ಇಂಗ್ಲೀಷ್ ಶಿಕ್ಷಕರಾಗಿ ೩೬ ವರ್ಷಗಳ ಕಾಲ ಶಿಕ್ಷಣ ದಾಸೋಹ ಮಾಡಿದ ದಿವಂಗತರು ಸುದ್ದಿ ಸಮಾರಂಭಗಳಿAದ ದೂರ ಉಳಿದು ಸಾಹಿತ್ಯ ಸೇವೆಯನ್ನಷ್ಟೇ ಅವರು ತಪಸ್ಸಿನಂತೆ ಮಾಡುತ್ತಿದ್ದರು. ಮುಧೋಳದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಂಘಟನೆಗೆ ಅವರು ದೊಡ್ಡ ಶಕ್ತಿಯಾಗಿದ್ದರು.ರನ್ನ ಕಾವ್ಯ ಕುರಿತು - ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯವನ್ನು ಅವರು ಕನ್ನಡ ಸೇವಾ ಮನೋಭಾವದಿಂದ ಮಾಡುತ್ತಿದ್ದರು. ಅವರು ಮುಧೋಳದಲ್ಲಿ ೧೯೯೫ ರಲ್ಲಿ ನಡೆದ ೬೪ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟನೆಯಲ್ಲಿ ಅವರ ಪಾತ್ರ ತುಂಬ ದೊಡ್ಡದು. ಈ ಸಮ್ಮೇಳನದ ೨೫ ನೇ ವರ್ಷದ ಆಚರಣೆಯ ಸಿದ್ಧತೆಯಲ್ಲಿದ್ದಾಗಲೇ ಅವರು ಹೊರಟು ಹೋಗಿರುವುದು ಬಹು ವಿಷಾದದ ಸಂಗತಿ. ಅವರು ಮುಧೋಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದರು. ಅವರಿಗೆ ಮುಧೋಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವ ಲಭಿಸಿತ್ತು. ಮುಧೋಳ ಸ್ವಾತಂತ್ರ್ಯ ಯೋಧರು ಕುರಿತು ಬರೆದ ನಮ್ಮ ಸ್ವಾತಂತ್ರ್ಯ ಯೋಧರ ಕೃತಿಗೆ ಸಾಹಿತ್ಯ ಪರಿಷತ್ ಪ್ರಶಸ್ತಿ ಲಭಿಸಿತ್ತು.ಹಿರೇಸೋಮಣ್ಣವರ ಅವರು ಕಳೆದ ಕೆಲವು ವರ್ಷಗಳಿಂದ ಗಾಂಧಿ ಸಾಹಿತ್ಯದಿಂದ ಆಕರ್ಷಿತರಾಗಿದ್ದರು. ಗೆಳೆಯರೊಂದಿಗೆ ಅವರು ಈಚೆಗೆ ಸಬರಮತಿ ಮತ್ತು ಪೌನಾರ್ ಆಶ್ರಮಕ್ಕೆ ಭೇಟಿ ನೀಡಿದ್ದರು. ಅವರು ಗಾಂಧೀಜಿ ಅವರನ್ನು ಕುರಿತು 'ಎ ನೋಬಲ್ ಸೋಲ್' ಎಂಬ ಇಂಗ್ಲೀಷ ಕೃತಿ ರಚಿಸಿದ್ದಾರೆ. ಈ ಕೃತಿಯ ಬಿಡುಗಡೆ ಕೆಲವು ಒಂದು ತಿಂಗಳ ಹಿಂದೆ ನಡೆದಿತ್ತು. ಆಗ ತುಂಬ ಲವಲವಿಕೆಯಿಂದ ಅವರು ಒಮ್ಮೆಲೇ ಹೋರಟು ಹೋದದ್ದನ್ನು ನೋಡಿದಾಗ 'ಅನುದಿನವೂ ತನುವಿನೊಳಗಿದ್ದು, ಮನಕ್ಕೆ ಹೇಳದೇ ಹೋದೆಯೆಲ್ಲೋ ಹಂಸ' - ಎಂಬ ತತ್ವಪದ ಮತ್ತೆ ಮತ್ತೆ ನೆನಪಾಗಿ ಕಾಡುತ್ತಿದೆ.