ಬೆಳಗಲಿ: ಮುಧೋಳ ತಾಲೂಕಿನ ಬೆಳಗಲಿ ಗ್ರಾಮದಲ್ಲಿಂದು ಮಕರ ಸಂಕ್ರಾಂತಿಯನ್ನು ಅತ್ಯಂತ ವೈಭವಪೂರ್ಣವಾಗಿ ಗ್ರಾಮಸ್ಥರೆಲ್ಲ ಸೇರಿ ಆಚರಿಸಿದರು.
ಗ್ರಾಮದಲ್ಲಿ ಶಾಲಾ, ಕಾಲಣೆಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲ ವಯೋಮಾನದವರು ಸೇರಿಕೊಂಡು ಬೆಳಗಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಂಕ್ರಾಂತಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ನಶಿಸಿ ಹೋಗುತ್ತಿರುವ ಹಳ್ಳಿ ಸೊಗಡಿನ ಹಬ್ಬದಾಚರಣೆ, ಸಂಸ್ಕೃತಿಯನ್ನು ಜನತೆಯಲ್ಲಿ ಮತ್ತೊಮ್ಮೆ ನೆನಪಿಸಿಕೊಡುವ ಕೆಲಸ ಮಾಡಿದರು.
ಕುದರೆ ಕುಣಿತ, ದೇಶಿ ಶೈಲಿಯ ಉಡುಗೆ-ತೊಡುಗೆ, ಕೇಸರಿ, ಗುಲಾಬಿ ಬಣ್ಣದ ಪೇಟಗಳನ್ನು ಸುತ್ತಿ ಗಮನ ಸೆಳೆದರು.ರನ್ನ ಬೆಳಗಲಿಯ ಶ್ರೀಗುರು ಮಹಾಲಿಂಗೇಶ್ವರ ಪಪೂ ಕಾಲೇಜಿನ ವಿದ್ಯಾರ್ಥಿಗಳ ಝಾಂಜ್ ಪಥಕ ಹಾಗೂ ಬಂಗಾರದ ಒಡವೆಗಳು, ಇಳಕಲ್ ಸೀರೆಗಳನ್ನು ತೊಟ್ಟ ವಿದ್ಯಾರ್ಥಿನಿಯರಿಂದ ಡೊಳ್ಳು ವಾದ್ಯ ನುಡಿಸುವಿಕೆ ಪಟ್ಟಣದ ಮಹಿಳೆಯರಾದಿಯಾಗಿ ವೀಕ್ಷಣೆ ಮಾಡಿದ ಎಲ್ಲರನ್ನೂ ಗಮನ ಸೆಳೆಯಿತು.
ರುಚಿ ರುಚಿಯಾದ ಊಟ :ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿ ಮಾಡಿದ ಚಟ್ನಿ, ಉಪ್ಪಿನ ಕಾಯಿ, ತರಕಾರಿ ಪಲ್ಯ, ಕಾಳು ಪಲ್ಯ, ಅಂಬಲಿ, ಹಣ್ಣು ಹಾಲು, ಹೋಳಿಗೆ, ತುಪ್ಪ, ಜೋಳದ ರೊಟ್ಟಿ, ಚಪಾತಿ, ಅನ್ನ, ನುಚ್ಚು, ದೋಸೆ, ಉಪ್ಪಿಟ್ಟು, ಅವಲಕ್ಕಿ, ಹಿಂಡಿ, ಮೊಸರು, ಕೆಂಪು ಮೆಣಸಿನ ಖಾರ, ಹಪ್ಪಳ, ಮಾದಿಲಿ, ಸಿಹಿ ತಿಂಡಿಗಳು, ವಿವಿಧ ತರಹದ ಕಾಯಿಪಲ್ಯಗಳು ಮತ್ತು ಅನ್ನ ಸಾರು ಇತ್ಯಾದಿ ಸುಮಾರು ನೂರಾರು ತರಹಗಳ ಭಕ್ಷ್ಯ ಭೋಜನಗಳನ್ನು ಸಿದ್ದಪಡಿಸಿದ್ದರು. ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಶ್ರೀಗುರು ಮಹಾಲಿಂಗೇಶ್ವರ ಸಾಂಸ್ಕೃತಿಕ ಭವನಕ್ಕೆ ಆಗಮಿಸಿ, ಭಕ್ಷ್ಯಭೋಜನ ಸವಿದರು.ಆಹಾರ ವಸ್ತುಗಳ ವಿಭಾಗಗಳಿಗೆ ಲಕ್ಷ್ಮಣ ತೀರ್ಥ – ಹಣ್ಣು -ಕಾಯಿ, ವರದಾ – ಅಂಬಲಿ, ಅರ್ಕಾವತಿ – ಸಾಂಬರ, ದೋಣಿ – ಉಪ್ಪಿಟ್ಟು – ಅವಲಕ್ಕಿ, ಭೀಮಾ – ಅನ್ನ,ನುಚ್ಚು, ಕಾಳಿ – ಹಾಲಿನ ಪದಾರ್ಥಗಳು, ಕಪಿಲಾ – ಚಟ್ನಿ, ಉಪ್ಪಿನಕಾಯಿ, ನೇತ್ರಾವತಿ – ತರಕಾರಿ ಪಲ್ಯ, ಶರಾವತಿ – ಕಾಳುಪಲ್ಯ, ಹೇಮಾವತಿ – ಹಪ್ಪಳ, ಘಟಪ್ರಭಾ – ಸಿಹಿ ತಿಂಡಿಗಳು, ಮಲಪ್ರಭಾ – ದೋಸೆ, ಕೃಷ್ಣಾ – ಹೋಳಿಗೆ ಇತ್ಯಾದಿಗಳು ನಾಡಿನ ನದಿ, ಉಪನದಿಗಳ ಹೆಸರಿಟ್ಟು ನದಿಗಳ ಹೆಸರನ್ನು ನೆನಪಿಸಿಕ್ಕೊಳ್ಳುವಂತೆ ಮಾಡಿದ್ದು ಮತ್ತೊಂದು ವಿಶೇಷವಾಗಿತ್ತು.