ಮುಧೋಳದ ಕುಳಲಿ ರಸ್ತೆಯಲ್ಲಿ ಭೀಕರ ಅಪಘಾತ ಇಬ್ಬರ ಸಾವು 15 ಜನರಿಗೆ ಗಾಯ


ಮುಧೋಳ : ಸವದತ್ತಿ ಯಲ್ಲಮ್ಮನ ದೇವಿ ಜಾತ್ರೆಗೆ ತೆರಳಿ ವಾಪಸ್ ಊರಿಗೆ ತೆರಳುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸಾವಿಗೀಡಾಗಿ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಸಮೀಪದ ಕುಳಲಿ ಹತ್ತಿರ ಗುರುವಾರ ನಡೆದಿದೆ.

ಗೋವಿಂದ ಪಾಟೀಲ (20) ಹಾಗೂ ಹನಮಂತ ಬೊಮ್ಮಕ್ಕನವರ (20) ಮೃತ ದುರ್ದೈವಿಗಳು. ನಾವಲಗಿಯ ಗ್ರಾಮಸ್ಥರು ಎರಡು ದಿನಗಳ ಹಿಂದೆ ಸವದತ್ತಿ ಯಲ್ಲಮ್ಮನ ಜಾತ್ರೆಗೆ ತೆರಳಿದ್ದರು. ಜಾತ್ರೆ ಮುಗಿಸಿ ಮರಳಿ ಗ್ರಾಮಕ್ಕೆ ವಾಪಸ್ಸಾಗುವ ಇಬ್ಬರು ಟ್ರ್ಯಾಕ್ಟರ್ ಚಾಲಕರು ಒಬ್ಬರಿಗೊಬ್ಬರು ಓವರ್ ಟೇಕ್ ಮಾಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಟ್ರೇಲರ್ ಅಂದಾಜು 20 ಅಡಿ ತಗ್ಗು ಪ್ರದೇಶದ ಹೊಲದಲ್ಲಿ ಪಲ್ಟಿಯಾಗಿದೆ. ಅವಘಡದಿಂದಾಗಿ ನಾಲ್ವರಿಗೆ ಗಂಭೀರ ಗಾಯವಾಗಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.


ನೆರವಿಗೆ ಧಾವಿಸಿದ ಸಾರ್ವಜನಿಕರು ಟ್ರ್ಯಾಕ್ಟರ್ ಟ್ರೇಲರ್ ಪಲ್ಟಿಯಾದೊಡನೆ ಸ್ಥಳೀಯರ ಗಾಯಾಳುಗಳ ನೆರವಿಗೆ ಧಾವಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಮಗುಚಿ ಬಿದ್ದಿದ್ದ ಟ್ರೇಲರ್ ನ್ನು ಕೂಡಲೇ ಮೇಲೆತ್ತಿದ್ದ ಪರಿಣಾಮ ಹೆಚ್ಚಿನ ಸಾವು ನೋವು ತಪ್ಪಿಸಿದ್ದಾರೆ. ಕೂಡಲೇ ಅಂಬ್ಯುಲೆನ್ಸ್ ಗೆ ಕರೆಮಾಡಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲು ನೆರವಾದರು.
ನವೀನ ಹಳೆಯದು