ಮುಧೋಳ: ಜಿಲ್ಲೆಯ ಮುಧೋಳದಲ್ಲಿರುವ ‘ಜಾಗರಿ ಪಾರ್ಕ್’ನಲ್ಲಿ ತಯಾರಾಗಿರುವ ಉತ್ಕೃಷ್ಟ ಗುಣಮಟ್ಟದ ಪುಡಿ ಬೆಲ್ಲ ರಷ್ಯಾಕ್ಕೆ ರಫ್ತಾಗುತ್ತಿದೆ.
ಮುಧೋಳಕ್ಕೆ ಬಂದಿರುವ ರಷ್ಯಾದ ಮಾಸ್ಕೊ ನಗರದ ವ್ಯಾಪಾರಿ ಅಲೆಕ್ಸಾಂಡರ್ ಉಸಾನಿನ್, ರೈತರಿಂದ ನೇರವಾಗಿ ಸುಮಾರು 25 ಟನ್ ಬೆಲ್ಲ ಖರೀದಿಸಿದ್ದು, ಇನ್ನೂ 250 ಟನ್ ಖರೀದಿಸಲಿದ್ದಾರೆ. ಈ ಸಂಬಂಧ ಅವರು ಮುಧೋಳದ ಸಾವಯವ ಕೃಷಿಕರಾದ ಲಕ್ಷ್ಮಣ ಬಿಲ್ಲೂರ, ಮುತ್ತು ಕೋಟಿಮನಿ, ಲಕ್ಷ್ಮಣ ಮಳಲಿ, ರಾಮನಗೌಡ ಪಾಟೀಲ ಅವರೊಂದಿಗೆ ಒಪ್ಪಂದಮಾಡಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಮುಧೋಳ ತಾಲ್ಲೂಕಿನ ನಾಗರಾಳದ ಸಾವಯವ ಕೃಷಿಕ ಲಕ್ಷ್ಮಣ ಬಿಲ್ಲೂರ, ‘ಟನ್ಗೆ ₨ 50 ಸಾವಿರ ಬೆಲೆ ನೀಡಿ ಖರೀದಿಸುತ್ತಿದ್ದು, ರೈತರಿಗೆ ಹೆಚ್ಚಿನ ಲಾಭ ದೊರೆಯುತ್ತಿದೆ’ ಎಂದರು.
ಇಸ್ಕಾನ್ಗೆ ಪೂರೈಕೆ: ‘ರಷ್ಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷ್ಣನ ಭಕ್ತರಿದ್ದು, ಇಲ್ಲಿಂದ ಕೊಂಡೊಯ್ಯವ ಬೆಲ್ಲವನ್ನು ಇಸ್ಕಾನ್ನಲ್ಲಿ ಪ್ರಸಾದ ತಯಾರಿಕೆಗೆ ಬಳಸಲಾಗುವುದು’ ಎಂದು ಅಲೆಕ್ಸಾಂಡರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಮೊದಲು ಬೆಳಗಾವಿ ಮತ್ತು ಮಹಾರಾಷ್ಟ್ರದ ಕೊಲ್ಹಾಪುರದಿಂದ ಖರೀದಿಸಲಾಗುತ್ತಿತ್ತು. ಆದರೆ, ಗುಣಮಟ್ಟದ ಕೊರತೆಯಿಂದಾಗಿ ಈ ವರ್ಷದಿಂದ ಮುಧೋಳದ ಜಾಗರಿ ಪಾರ್ಕ್ (ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಾವಯವ ಬೆಲ್ಲ ತಂತ್ರಜ್ಞಾನ ಸಂಸ್ಥೆ) ನಿಂದ ಖರೀದಿಸಲಾಗುತ್ತಿದೆ’ ಎಂದರು.
‘ತಯಾರಿಕೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಮತ್ತು ಶೇ 2ಕ್ಕಿಂತ ಕಡಿಮೆ ತೇವಾಂಶ ಇರುವ ಗುಣಮಟ್ಟದ ಬೆಲ್ಲ ತಯಾರಿಸಿ, ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸುವಂತೆ ರೈತರಿಗೆ ತಿಳಿಸಲಾಗಿದೆ. ಮುಂದಿನ ವರ್ಷ 500ಟನ್ ಖರೀದಿಸುವ ಉದ್ದೇಶವಿದೆ’ ಎಂದು ಅವರು ಹೇಳಿದರು.
ದುಬೈನಿಂದಲೂ ಬೇಡಿಕೆ
ಬಾಗಲಕೋಟೆ: ‘ಇಲ್ಲಿ ಉತ್ಕೃಷ್ಟ ಗುಣಮಟ್ಟದ, ಸ್ವಚ್ಛವಾದ ಮತ್ತು ಆರೋಗ್ಯಪೂರ್ಣವಾದ ಜಲಬೆಲ್ಲ (ಜೋನಿ ಬೆಲ್ಲ), ಪುಡಿ ಬೆಲ್ಲ, ಪೆಂಡಿ ಬೆಲ್ಲ ತಯಾರಿಸಿ, ದೇಶ–ವಿದೇಶಗಳ ಮಾರುಕಟ್ಟೆಗೆ ಪೂರೈಕೆ ಮಾಡಲಾಗುತ್ತಿದೆ’ ಎಂದು ‘ಜಾಗರಿ ಪಾರ್ಕ್’ ಯೋಜನಾಧಿಕಾರಿ ಡಾ. ಸಿ.ಪಿ.ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರತಿ ದಿನ 12 ರಿಂದ 16 ಟನ್ ಉತ್ಪಾದನೆಯಾಗುತ್ತಿದ್ದು, ದುಬೈನಿಂದಲೂ ಬೇಡಿಕೆ ಬಂದಿದೆ. ಜತೆಗೆ ಹೈದರಾಬಾದ್, ಗುಜರಾತ್ ಹಾಗೂ ರಾಜ್ಯದ ವಿವಿಧ ನಗರದ ವ್ಯಾಪಾರಿಗಳು ಕೂಡ ಇಲ್ಲಿಂದ ಖರೀದಿಸುತ್ತಿದ್ದಾರೆ’ ಎಂದರು.