ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರಡಿ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳಿಗೆ ಏಕ ರೂಪದ ದರ ನಿಗದಿಪಡಿಸಿ ಒಪಂದದ ಐತೀರ್ಪು ರಚಿಸಿ ಪರಿಹಾರ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಪ್ಪಂದದ ಐತೀರ್ಪು ಅನ್ವಯ ಒಣ ಬೇಸಾಯಕ್ಕೆ ಪ್ರತಿ ಎಕರೆಗೆ 5 ಲಕ್ಷ ನೀರಾವರಿ ಜಮೀನಿಗೆ 6 ಲಕ್ಷ ರು.ಗಳ ಮಾರುಕಟ್ಟೆ ದರಕ್ಕೆ ನಿಯಮಾನುಸಾರ 4 ಪಟ್ಟು ದರವನ್ನು ಪರಿಗಣಿಸಿ ಪರಿಹಾರ ನಿಗದಿಪಡಿಸಲಾಗಿದೆ. ಐತೀರ್ಪಿಗೆ ಒಳಪಡುವ ಕಟ್ಟಡಗಳನ್ನು ಲೋಕೋಪಯೋಗಿ ಇಲಾಖೆಯ ದರಪಟ್ಟಿಯಂತೆ ಸವಕಳಿ ರಹಿತ ಮೌಲ್ಯಕ್ಕೆ ಶೇ.20 ರಷ್ಟು ಹೆಚ್ಚಿಸಲಾಗಿದೆ ಎಂದರು. ಆದೇಶದ ಪ್ರಕಾರ ಈಗಾಗಲೇ 1.34 ಲಕ್ಷ ಎಕರೆ ಪೈಕಿ 26 ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಂಡಿದ್ದು, ಬಾಕಿ ಉಳಿದ 1.6 ಲಕ್ಷ ಎಕರೆ ಜಮೀನುಗಳಿಗೆ ಹೊಸದಾಗಿ ನಿಗದಿಪಡಿಸಿದ ದರದಲ್ಲಿ ಪರಿಹಾರ ಒದಗಿಸಲಾಗುತ್ತಿದೆ. 2013ರ ಭೂಸ್ವಾಧೀನ ನೀತಿ ಪ್ರಕಾರ ಪ್ರತಿ ಎಕರೆಗೆ 5 ಲಕ್ಷ ರು.ಗಳಿಗೆ ಅದರ ನಾಲ್ಕು ಪಟ್ಟು 220 ಲಕ್ಷ ಮತ್ತು 6 ಲಕ್ಷ ಗಳಿಗೆ 524 ಲಕ್ಷಗಳಷ್ಟು ರೈತರಿಗೆ ನೀಡಲಾಗುತ್ತಿದೆ. ಇದರಿ೦ದ ರೈತರು ತಮ್ಮ ಜೀವನ ಕಟ್ಟಿಕೊಳ್ಳಲು ಅನುಕೂಲವಾಗಲಿದೆ ಎಂದರು. ಯುಕೆಪಿ 3ನೇ ಹಂತಕ್ಕೆ 210 ಸಾವಿರ ಕೋಟಿ ಗುರಿ ಹೊಂದಿದ್ದು, 23 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಇನ್ನೆರಡು ತಿಂಗಳೊಳಗೆ 25 ಸಾವಿರ ಕೋಟಿ ಬಿಡುಗಡೆ ಮಾಡಲಾಗುವುದು. ಈ ವರ್ಷ 2 10 ಸಾವಿರ ಕೋಟಿ ಗುರಿಯಿದ್ದು, 28 ಸಾವಿರ ಕೋಟಿ ಖಂಡಿತ ಬಿಡುಗಡೆ ಆಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕೃಷ್ಣಾನ್ಯಾಯಾಧೀಕರಣ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ತೆಲಂಗಾಣ, ಆಂಧ್ರ ಹಾಗೂ ಮಹಾರಾಷ್ಟ್ರದಿಂದ 3 ದಿನ ನಿರಂತರ ವಾದ ನಡೆಯಿತು. ಇದೀಗ ಆ೦ಧ್ರದ ವಾದ ಮುಗಿದಿದ್ದು, ಬಹುತೇಕ ಗೆಜೆಟ್ ನೋಟಿಫಿಕೇಶನ್ ಆಗಬಹುದೆಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ ಇದ್ದರು.