ಮುಧೋಳ ಅರಮನೆಯ ದರ್ಶನ

ಸದಾ ಯುದ್ಧದಲ್ಲಿ ನಿರತವಾಗಿರುತ್ತಿದ್ದ ಈ ಕುಟುಂಬ ಮುಧೋಳ ಸಂಸ್ಥಾನದಲ್ಲಿ ಜನಪರ ಕಾರ್ಯಗಳನ್ನು ಕೈಗೊಂಡಿದ್ದನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ರಾಜಾ ಮಾಲೋಜಿರಾವ್ ಘೋರ್ಪಡೆ ಮುಧೋಳದ ವಿಶಿಷ್ಟ ನಾಯಿ ತಳಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮುಧೋಳ ಜಾಗತಿಕವಾಗಿ ಪ್ರಖ್ಯಾತಿ ಪಡೆಯಲು ಕಾರಣರಾದರು.

ಪರ್ಷಿಯನ್ ನಾಯಿ ತಳಿಗಳೊಂದಿಗೆ ದೇಸಿ ನಾಯಿ ತಳಿ ಸಂಕರಗೊಳಿಸುವುದರೊಂದಿಗೆ ‘ಮುಧೋಳ್ ಹೌಂಡ್’ ಎನ್ನುವ ವಿಭಿನ್ನ ನಾಯಿ ತಳಿ ಜನಿಸಿತು. ಬ್ರಿಟಿಷರೊಂದಿಗೆ ಈ ರಾಜ ಮನೆತನ ಉತ್ತಮ ಸಂಬಂಧ ಹೊಂದಿತ್ತು. ಮುಧೋಳ ನಾಯಿ ತಳಿಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ ದೊರೆ 5ನೇ ಜಾರ್ಜ್ ಈ ತಳಿಗೆ ‘ಮುಧೋಳ್ ಹೌಂಡ್’ ಎಂದು ನಾಮಕರಣ ಮಾಡಿದ. ಸದ್ಯ ಮುಧೋಳದ ಆಸುಪಾಸಿನಲ್ಲಿ ಈ ತಳಿಯ ಸಾವಿರಾರು ನಾಯಿಗಳನ್ನು ಬೆಳೆಸಲಾಗುತ್ತಿದೆ. ಮುದ್ದಾಪುರದಲ್ಲಿ ಮುಧೋಳ ನಾಯಿ ತಳಿ ಸಂವರ್ಧನೆ ಕೇಂದ್ರವೂ ಉಂಟು.

ಕುಟುಂಬದ ವಂಶಸ್ಥರಿಗೆ ಮುಧೋಳ ನಾಯಿ ತಳಿಗಳ ಜತೆ ಕುದುರೆಗಳ ಬಗ್ಗೆಯೂ ಆಸಕ್ತಿಯಿತ್ತು. ನಾನಾ ಬಗೆಯ ಕುದುರೆಗಳು ಆಸ್ಥಾನದಲ್ಲಿದ್ದವು, ಜನರಿಗೆ ಒಳ್ಳೆಯದಾಗಬೇಕು ಎಂಬ ಉದ್ದೇಶದಿಂದ ಕೆರೆಗಳ ನಿರ್ಮಾಣ ಹಾಗೂ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು’ ಎಂದು ರಾಜವಂಶಸ್ಥ ಅರ್ಜುನಸಿಂಹ ಜಡೇಜಾ ಸ್ಮರಿಸುತ್ತಾರೆ.

ಅಂದಹಾಗೆ ಮುಧೋಳ ಹೊರವಲಯದಲ್ಲಿ ಕುಡಿಯುವ ನೀರಿಗಾಗಿ ನಿರ್ಮಿಸಿದ ಬೃಹತ್ ಕೆರೆ, ಅಂಬಾ ಭವಾನಿ, ವೆಂಕಟೇಶ್ವರ, ಮಹಾಲಿಂಗೇಶ್ವರ, ಸಿದ್ದರಾಮೇಶ್ವರ ದೇವಸ್ಥಾನ ಮತ್ತು ಬೃಹತ್ ಮೈದಾನಗಳನ್ನು ಈಗಲೂ ಕಾಣಬಹುದು. 1924ರಲ್ಲಿ 7ನೇ ಕಿಂಗ್ ಜಾರ್ಜ್ ಹೆಸರಿನಲ್ಲಿ ಸ್ಥಾಪಿಸಿದ ಆಸ್ಪತ್ರೆ ಈಗ ಸರಕಾರದ ಅಧೀನದಲ್ಲಿದೆ.

ಘೋರ್ಪಡೆ ಕುಟುಂಬದ ಹಳೆಯ ಅರಮನೆ ಕುಸಿದು ಬಿದ್ದಿದ್ದು ಬಾಗಿಲು ಮಾತ್ರ ಇತಿಹಾಸ ಸಾರುತ್ತ ನಿಂತಿದೆ. ಮುಧೋಳದ ಹೊರವಲಯದಲ್ಲಿ ಮಹಾರಾಜರು ಕಟ್ಟಿದ ಹೊಸ ಅರಮನೆಯಿದೆ. ಕೇವಲ 34 ಹಾಗೂ ಇನ್ನರ್ಧ ಹಳ್ಳಿಗಳನ್ನೊಳಗೊಂಡಿದ್ದರೂ ಈ ಮನೆತನದ ವೈಭವದ ಆಳ್ವಿಕೆ ಮಾತ್ರ ಯಾವ ದೊಡ್ಡ ರಾಜಮನೆತನಕ್ಕೂ ಇರಲಿಲ್ಲ ಎನ್ನುವುದಂತೂ ಸತ್ಯ.

ಅಂದಿನ ಮುಧೋಳ ಸಂಸ್ಥಾನದ ಆಡಳಿತದ ಅನುಕೂಲಕ್ಕಾಗಿ ಮುಧೋಳ ನಗರದಲ್ಲಿ ದರ್ಬಾರ್ ಹಾಲ್/ಅರಮನೆ/ಬಂಗಲೆಯನ್ನು 1816 ರಲ್ಲಿ ಘೋರ್ಪಡೆ ವಂಶಸ್ಥರು ನಿರ್ಮಿಸಿದರು.

ರಾಜ ವಂಶಸ್ಥರು ಅವರ ರಾಜವಾಡಗಳನ್ನು (ಅರಮನೆ) ನಿರ್ಮಿಸಿಕೊಂಡಿದ್ದರು. ಇದರಲ್ಲಿ ದರ್ಬಾರ್‌ ಹಾಲ್‌ ವಿಶಾಲವಾಗಿರುತ್ತಿದ್ದವು. ಮುಧೋಳದಲ್ಲಿ ಮರಾಠ ಬುಡಕಟ್ಟಿನ ಘೋರ್ಪಡೆಯವರು ಸುಮಾರು 200 ವರ್ಷಗಳ ಹಿಂದೆ ಅರಮನೆ ಕಟ್ಟಿದ್ದರು. ಈ ಪ್ರಾಂತದ ಆಡಳಿತಕ್ಕೆ ಒಳಪಟ್ಟು ಕೆಲವು ಗ್ರಾಮಗಳಿದ್ದವು, ಇವೆಲ್ಲವೂ ಕೃಷಿ ಭೂಮಿಗಳಾಗಿದ್ದವು. ಅಕ್ಕಪಕ್ಕದ ಗ್ರಾಮಗಳೊಂದಿಗೆ ಸೌಹಾರ್ದ ಸಂಬಂಧವಿರಿಸಿಕೊಳ್ಳುತ್ತಿದ್ದ ಘೋರ್ಪಡೆಯವರು ರಾಯಲ್‌ ಕೋರ್ಟ್‌ನ ಪ್ರಮುಖ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಿ ಅವರನ್ನು ಮಂತ್ರಿಗಳನ್ನಾಗಿ ನೇಮಿಸಿಕೊಳ್ಳುತ್ತಿದ್ದರು. ಬ್ರಿಟಿಷರ ಕಾಲದಲ್ಲಿ ಮುಧೋಳದ ರಾಜರ ಬಹುತೇಕ ಅಧಿಕಾರಗಳು ಕೈತಪ್ಪಿದವು. ಮುಧೋಳದ ರಾಜರ ಗುಣನಡತೆಯಿಂದಾಗಿ ಜನರೇ ಸ್ವಯಂಪ್ರೇರಿತರಾಗಿ ತಮ್ಮ ಆಡಳಿತಗಾರರಾಗಿ ಘೋರ್ಪಡೆಯವರನ್ನು ಒಪ್ಪಿಕೊಂಡಿದ್ದರು. ಇದರಿಂದಾಗಿ ಬ್ರಿಟಿಷರು ಮುಧೋಳದ ರಾಜರಿಗೆ ಆಡಳಿತವನ್ನು ಕೊಟ್ಟಿದ್ದರು.

ಕಾಲಕ್ರಮೇಣ ಅರಮನೆ ಶಿಥಿಲಾವಸ್ಥೆಗೆ ಬಂದಾಗ ಪಕ್ಕದಲ್ಲಿ ಇನ್ನೊಂದು ಅರಮನೆಯನ್ನು ಕಟ್ಟಿಕೊಂಡರು. ಹಳೆಯ ಅರಮನೆ ಕಟ್ಟಡ ಪಾಳುಬಿತ್ತು. ಅಕ್ಕಪಕ್ಕದ ವರು ಒಂದೊಂದೇ ಭಾಗವನ್ನು ಅತಿಕ್ರಮಿಸಿಕೊಂಡ ಪರಿಣಾಮ ದರ್ಬಾರ್‌ ಸಭಾಂಗಣ ಮಾತ್ರ ಉಳಿದಿತ್ತು.












ಮುಧೋಳ ರಾಜ ಮನೆತನದವರು ಜಮಖಂಡಿಯ ಗುಜರಾತಿ ವ್ಯಾಪಾರಿ ಓಸ್ವಾಲ್‌ ಕುಟುಂಬದವರಿಗೆ ಅಳಿದುಳಿದ ದರ್ಬಾರ್‌ ಹಾಲ್‌ ಸಹಿತ ಎಲ್ಲ ಭೂಮಿಗಳನ್ನು ಕೊಟ್ಟು ಪುಣೆಗೆ ಹೋದರು. ಹಸ್ತಶಿಲ್ಪ ಟ್ರಸ್ಟ್‌ ಓಸ್ವಾಲ್‌ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ ಮುಧೋಳ ಅರಮನೆಯ ದರ್ಬಾರ್‌ ಸಭಾಂಗಣವನ್ನು ಹೊಸದಿಲ್ಲಿಯ ನಾರ್ವೆ ರಾಯಭಾರ ಕಚೇರಿಯ ಸಹಕಾರದಿಂದ ಮಣಿಪಾಲಕ್ಕೆ ತಂದು ಪುನಃ ಸ್ಥಾಪಿಸಿತು.

ಹಿಂದೂ ರಾಜರ ಕಟ್ಟಡಗಳಲ್ಲಿ ಮೊಘಲರ ಕಟ್ಟಡದ ಲಕ್ಷಣಗಳು ಕಾಣಸಿಗುತ್ತವೆೆ. ಬ್ರಿಟಿಷರ ಕಾಲದಲ್ಲಿ ಬ್ರಿಟಿಷರು ಇಂತಹ ಕಟ್ಟಡಗಳಿಗೆ ಪಾಶ್ಚಾತ್ಯ ಸ್ವರೂಪ ವಿನ್ಯಾಸಗಳನ್ನು ನೀಡಿದ್ದೂ ಇದೆ. ವಿಶಾಲವಾದ ಪ್ರವೇಶದ್ವಾರ, ಮರದ ಕೆತ್ತನೆಗಳು, ಕಿಂಡಿಗಳಲ್ಲಿ ಆಕರ್ಷಕ ಕೆತ್ತನೆಗಳಿವೆ. ರಾಜಸ್ಥಾನದಲ್ಲಿ ಸಭೆ ನಡೆಯುವಾಗ ರಾಜರು ಕೂರುತ್ತಿದ್ದ ಆಸನಗಳು, ತೂಗುದೀಪಗಳು, ಚಿತ್ರಕಲಾಕೃತಿಗಳು, ಟ್ರೋಫಿಗಳು, ಶಸ್ತ್ರಾಸ್ತ್ರಗಳನ್ನು ನೋಡಬಹುದು.

2003-04ರ ವೇಳೆ ಓಸ್ವಾಲ್‌ ಕುಟುಂಬದವರೊಂದಿಗೆ ಎರಡು ಮೂರು ಬಾರಿ ಮಾತುಕತೆ ನಡೆಸಿ ಹಸ್ತಶಿಲ್ಪ ಟ್ರಸ್ಟ್‌ ಕಾರ್ಯದರ್ಶಿ ವಿಜಯನಾಥ ಶೆಣೈ ಕಟ್ಟಡವನ್ನು ಮಣಿಪಾಲಕ್ಕೆ ಸ್ಥಳಾಂತರಿಸಿದರು. ಕಟ್ಟಡವನ್ನು ಪುನಃ ನಿರ್ಮಿಸುವಾಗ ರಾಜಮನೆತನದ ಮೇನಕರಾಜೆ ಘೋರ್ಪಡೆ ಮತ್ತು ಗಂಡ ವಿಜಯರಾಜೆ ಅರಸ್‌ ಭೂಮಿ ಪೂಜೆ ನಡೆಸಿದ್ದರು. ಉದ್ಘಾಟನೆ ವೇಳೆ ಮೇನಕರಾಜೆ ಮತ್ತು ಅವರ ತಾಯಿ ಇಂದಿರಾ ರಾಜೆ ಘೋರ್ಪಡೆ ಆಗಮಿಸಿದ್ದರು. ಸುಮಾರು 15 ಕುಶಲಕರ್ಮಿಗಳು ಸುಮಾರು ಹತ್ತು ತಿಂಗಳು ಶ್ರಮ ಪಟ್ಟು ಪುನಾರಚಿಸಿದರು.

ಅರಮನೆ ವೀಕ್ಷಿಸಲು ಭೇಟಿ ನೀಡುವುದು ಹೇಗೆ?

2004 ರಲ್ಲೇ ಅರಮನೆಯನ್ನು ಮುದೊಳದಿಂದ ಮಣಿಪಾಲದ ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಗೆ ಸ್ಥಳಾಂತರಿಸಲಾಗಿದೆ ವೀಕ್ಷಿಸಬಯಸುವವರು ಈ ಕೆಳಗಿನ ವಿಳಾಸಕ್ಕೆ ಭೇಟಿ ನೀಡಬಹುದು

ಹಸ್ತ ಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ: ಹೋಟೆಲ್ ಲೇಕ್ ವ್ಯೂ ಎದುರು, ಅಲೆವೂರ್ - ಮಣಿಪಾಲ್ ರಸ್ತೆ, ಕ್ರೈಸ್ಟ್ ಚರ್ಚ್ ಹತ್ತಿರ, ಮಣಿಪಾಲ್, ಕರ್ನಾಟಕ 576104 https://maps.app.goo.gl/n5hD6bDFRmNY8PWr8

ನವೀನ ಹಳೆಯದು