ಮುಧೋಳ: ಜಿಲ್ಲೆಯಲ್ಲಿ ಸಾಂಸ್ಕೃತಿಕ ಸಂಭ್ರಮ ಕಡಿಮೆಯಾಗುತ್ತಿದೆ. ಶಿವಸಂಚಾರ ನಾಟಕ ಪ್ರದರ್ಶನ ಬಿಟ್ಟರೇ ಸಂಗೀತ, ನೃತ್ಯ, ನಾಟಕ ಕಾರ್ಯಕ್ರಮಗಳು ನಡೆಯುವುದೇ ಅಪರೂಪ. ಕಳೆದ ಹಲವು ವರ್ಷಗಳಿಂದ ರನ್ನ ಉತ್ಸವವೇ ನಡೆದಿಲ್ಲ. ಬರ, ಕೋವಿಡ್ ಕಾರಣ ನೀಡಿ ಮುಂದಕ್ಕೆ ಹಾಕಲಾಗಿದ್ದ ಉತ್ಸವಗಳು ಮರೆಯಾಗುತ್ತಿವೆ.
ವಾಸ್ತವಿಕವಾಗಿ ಕರ್ನಾಟಕದಲ್ಲಿ ಉತ್ಸವ ಪರಂಪರೆ ಆರಂಭವಾದದ್ದೇ ಅವಿಭಜಿತ ವಿಜಯಪುರ ಜಿಲ್ಲೆಯಿಂದ. 1986ರಲ್ಲಿ ಜಿಲ್ಲಾ ಪರಿಷತ್ ಮುಖ್ಯ ಕಾರ್ಯದರ್ಶಿಗಳಾಗಿದ್ದ ಅರವಿಂದ ಜಾಧವ ಅವರು ಪಟ್ಟದಕಲ್ಲಿನಲ್ಲಿ ನೃತ್ಯ. ವಿಜಯಪುರದ ನವರಸಪುರದಲ್ಲಿ ಸಂಗೀತೋತ್ಸವ ಆರಂಭಕ್ಕೆ ಚಾಲನೆ ನೀಡಿದ್ದರು. ಆದರೀಗ ಲಕ್ಕುಂಡಿ, ಕಿತ್ತೂರ, ಹಂಪಿ, ಚಿಕ್ಕಬಳ್ಳಾಪುರ, ಬಳ್ಳಾರಿ ಉತ್ಸವಗಳು ನಡೆಯುತ್ತಿದ್ದರೂ ರನ್ನ ಉತ್ಸವದ ಬಗ್ಗೆ ಜನಪ್ರತಿನಿಧಿಗಳು ಮಾತನಾಡುವದಿಲ್ಲ.
ಪ್ರವಾಸೋದ್ಯಮವನ್ನು ಆಕರ್ಷಿಸಲು ಈ ಉತ್ಸವ ಆರಂಭವಾಗಿತ್ತು. ಖ್ಯಾತ ತಾರೆಯರು ನೃತ್ಯ ಪ್ರದರ್ಶನ ನೀಡಿ ಉತ್ಸವ ವೈಭವವನ್ನು ಹೆಚ್ಚಿಸಿದ್ದರು. ವರ್ಷ ವರ್ಷ ಇದು ಅಭಿವೃದ್ಧಿಯಾಗಿತ್ತು. ಜಿಲ್ಲೆಯ ವಿಭಜನೆ ನಂತರ ಐಹೊಳೆ, ಬಾದಾಮಿ, ಪಟ್ಟದಕಲ್ಲಿನಲ್ಲಿ ದಿನವೊಂದು ಉತ್ಸವಗಳು ನಡೆದವು. ಇದೇ ಹೊತ್ತಿಗೆ ಮುಧೋಳದಲ್ಲಿ ರನ್ನ ಪ್ರತಿಷ್ಠಾನ ಸ್ಥಾಪನೆಯಾಗಿ ಕಾರಜೋಳರ ಉಪಸ್ಥಿತಿಯಲ್ಲಿ ಉತ್ಸವ ನಡೆಯಿತು. ಪ್ರತಿ ವರ್ಷ ಅನುದಾನವೂ ಬಂದಿದೆ. ಇತ್ತಿತ್ತಲಾಗಿ ಪ್ರವಾಹ, ಬರ, ಕೋವಿಡ್ ಕಾರಣಗಳಿಂದ ನಿಂತು ಹೋದ ಉತ್ಸವ ಈಗ ನಡೆಯುತ್ತಲೇ ಇಲ್ಲ.
ಈ ಹಿಂದೆಯೂ ಕೂಡ ಉಳಿದ ಜಿಲ್ಲೆಗಳಲ್ಲಿ ಉತ್ಸವಗಳು ನಡೆದವು. ಆದರೆ ಶಾಪಿಷ್ಠಜಿಲ್ಲೆಯಂತೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆಯಬೇಕಿರುವ ಪಟ್ಟದಕಲ್ಲು ಬಾದಾಮಿ ಮತ್ತು ರನ್ನ ಉತ್ಸವಗಳನ್ನು ಬರ ಕಾರಣಗಳಿಂದ ಜಿಲ್ಲಾಡಳಿತ ಮನಸ್ಸು ಮಾಡಲೇ ಇಲ್ಲ.
ಪಕ್ಕದ ಕಿತ್ತೂರ, ಲಕ್ಕುಂಡಿ, ಹಂಪಿ ಉತ್ಸವಗಳು ಹುಬ್ಬಳ್ಳಿ-ಧಾರವಾಡದಲ್ಲಿ ಯುವಜನೋತ್ಸವ, ಸಂಸದರ ಬೃಹತ್ ಉತ್ಸವಗಳು ಅದ್ದೂರಿಯಾಗಿಯೇ ನಡೆದಿವೆ.
ಇಲ್ಲಿ ಅದರ ಬಗ್ಗೆ ಯಾರೂ ಪ್ರಸ್ತಾಪಿಸುತ್ತಿಲ್ಲ. ಕನ್ನಡ ಸಾಹಿತ್ಯ ಪರಿಷತ್ ಸೇರಿ ಯಾವ ಸಂಘಟನೆಗಳು ಈ ಬಗ್ಗೆ ಒತ್ತಾಯಿಸುತ್ತಿಲ್ಲ. ಜನಪ್ರತಿನಿಧಿಗಳಂತೂ ಇಚ್ಚಾಶಕ್ತಿ ಕಳೆದುಕೊಂಡಿದ್ದಾರೆ. ಇದರಿಂದಾಗಿ ಉತ್ಸವಗಳಿಗೆ ಬರದ ಗರ ಬಡೆದಿದೆ. ಈಗಲಾದರೂ ಈ ಬಗ್ಗೆ ಚಿಂತಿಸಬೇಕಾಗಿದೆ.
ಉತ್ಸವಗಳು ಕೇವಲ ಜಾತ್ರೆಗಳಲ್ಲ ಅವುಗಳಲ್ಲಿ ಕಲೆ, ಸಾಹಿತ್ಯ ಮತ್ತು ಪ್ರತಿಭೆಯ ವಿಕಸನಕ್ಕೆ ವೇದಿಕೆ ಇದೆ. ಅದು ಜಿಲ್ಲೆಯೊಂದರ ಕ್ರೀಯಾಶೀಲತೆಯನ್ನು ಎತ್ತಿ ತೋರಿಸುತ್ತದೆ. ಇದನ್ನು ಎಲ್ಲರೂ ಅರಿಯಬೇಕು.
ಈಗಲೂ ಕಾಲ ಮಿಂಚಿಲ್ಲ ಜಿಲ್ಲಾಡಳಿತ, ವಿಶೇಷವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಗ್ಗೆ ಯೋಚಿಸಬೇಕು. ಕಾರ್ಯಕ್ರಮ ರೂಪಿಸಲು ಮುಂದಾಗಬೇಕು. ಉತ್ಸವವನ್ನು ನಡೆಸುವದು ಸೂಕ್ತ.
ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರು. ಸ್ಥಳೀಯ ಕಲಾವಿದರನ್ನು ಗುರುತಿಸಿ ಅವರಿಗೆ ವೇದಿಕೆ ನೀಡುವ ಕೆಲಸ ಆದರೆ ಅದು ನಿಜಕ್ಕೂ ಕಲೆಯನ್ನು ಉತ್ತೇಜಿಸಿದಂತಾಗುತ್ತದೆ. ಸಚಿವರು, ಶಾಸಕರುಗಳಿಗೆ ಸಾಂಸ್ಕೃತಿಕ ಅಭಿರುಚಿ ಅಗತ್ಯವಾಗಿದೆ. ಈ ಅಭಿರುಚಿ ಇದ್ದಷ್ಟೂ ಕಲೆಗೆ ಪ್ರೋತ್ಸಾಹ ಸಿಗುತ್ತದೆ. ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿ ಉತ್ಸವಗಳನ್ನು ಆಯೋಜಿಸಲು ಈ ಬಗ್ಗೆ ಚಿಂತನ-ಮಂಥನ ನಡೆಸಲು ಉತ್ಸವ ನಡೆಸುವದು ಅತ್ಯಂತ ಅಗತ್ಯ.
ರನ್ನ ವೈಭವ ಅನ್ನೋದು ಕೇವಲ ಆಚರಣೆಯಲ್ಲ ಅದೊಂದು ಭಾವನೆ ಜಗತ್ತಿಗೆ ಕನ್ನಡದ ಸಾಹಿತ್ಯದ ಬಗ್ಗೆ ಅಪಾರ ಕೊಡುಗೆ ನೀಡಿದ ರನ್ನನ್ನು ಪರಿಚಯಿಸುವ ವೇದಿಕೆ ಹಾಗೆಯೇ ಸ್ಥಳೀಯ ಸಾಹಿತಿಗಳು ಹಾಗೂ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿಯೂ ಕೂಡ ಉತ್ತಮ ವೇದಿಕೆ. ರನ್ನನ ಜನ್ಮಸ್ಥಳವೆಂಬ ಹಿನ್ನೆಲೆ 1995 ರಲ್ಲಿ ತಾಲೂಕಿನ ನಾಯಕರೆಲ್ಲ ಪಕ್ಷ ಬೇಧ ಮರೆತು ತಾಲೂಕಿನಲ್ಲಿ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತು. ಆದರೆ ಇಂದು ರನ್ನ ವೈಭವ ಎಂಬುದು ನಿಂತ ನೀರಾಗಿದೆ.
90 ರ ನಂತರ ತಾಲೂಕಿನ ರಾಜಕೀಯವು ರನ್ನ, ಸಾಹಿತ್ಯ ಮತ್ತು ನಾಡು ನುಡಿ ಕೇಂದ್ರಿತವಾಗಿತ್ತು, ಆದರೆ ಇತ್ತೀಚೆಗೆ ಅಂದರೆ ಕಳೆದ 8-10 ವರ್ಗಗಳಿಂದ ಇದು ಜಾತಿ ರಾಜಕಾರಣದ ಕೇಂದ್ರಿತ ಸ್ವರೂಪ ಪಡೆದುಕೊಂಡಿದ್ದರಿಂದ ನಾಡು ನುಡಿ ಹಾಗೂ ಕವಿ ಚಕ್ರವರ್ತಿ ರನ್ನ ಕೇಂದ್ರಿತ ರಾಜಕೀಯ ಹಾಗೂ ಸಾಹಿತ್ಯಿಕ ಚಟುವಟಿಕೆಗಳು ಸ್ಥಳೀಯ ನಾಯಕರ ಹಿತಾಸಕ್ತಿಯ ಕೊರತೆಯ ಕಾರಣದಿಂದ ಸರ್ಕಾರದ ಮಟ್ಟದಲ್ಲಿ ಕಡಿಮೆಯಾಗಲು ಕಾರಣವಾಯಿತೇ?
ಅದೇನೇ ಇರಲಿ ಕವಿ ಚಕ್ರವರ್ತಿ ರನ್ನನ ಸಾಂಸ್ಕೃತಿಕ ಚಟವಟಿಕೆಗಳಿಗೆ ಅಂದು ಗೋವಿಂದ ಕಾರಜೋಳ ಹಾಗೂ ರನ್ನ ಪ್ರತಿಷ್ಠಾನದ ಇಚ್ಛಾಶಕ್ತಿಯಿಂದ ಪ್ರಾರಂಭವಾದ ರನ್ನ ವೈಭವ ನಿಂತ ನೀರಾಗದೆ, ಮತ್ತೇ ಮರುಕಳಿಸಲಿ ಎಂಬುದೇ ನಮ್ಮ ಉದ್ದೇಶ.