Holi Fest : ಬಾಗಲಕೋಟೆ ಐತಿಹಾಸಿಕ ಹೋಳಿಗೆ ಮಾ.6 ರಂದು ಅಧಿಕೃತ ಚಾಲನೆ


ಬಾಗಲಕೋಟೆ 15 : ಐತಿಹಾಸಿಕ ಬಾಗಲಕೋಟೆ ಹೋಳಿ ಉತ್ಸವಕ್ಕೆ ಮಾ.6ರಂದು ಸಂಜೆ ಅಧಿಕೃತ ಚಾಲನೆ ಸಿಗಲಿದೆ. ಮಾ.7ರ ನಸುಕಿನ ಜಾವ ಹುಬ್ಬಾ ನಕ್ಷತ್ರದಂದು ಕಿಲ್ಲಾ ಓಣಿ ಕಾಮದಹನ ಜರುಗಲಿದ್ದು, ಮಧ್ಯಾ ಹೃದ ನ೦ತರ ನಗರದ ಇತರೆ ಭಾಗಗಳಲ್ಲಿ ಕಾಮದಹನ ಜರುಗಲಿದೆ.

ಮಾ.8 ರಿಂದ ಮಾ.10ರವರೆಗೆ ಮೂರು ದಿನಗಳ ಕಾಲ ಬಣ್ಣದಾಟ ನಡೆಯಲಿದ್ದು, ಸರ್ಕಾರದಿಂದ ಲಭ್ಯವಾಗಿರುವ ಅನುದಾನ ಸದುಪಯೋಗ ಪಡಿಸಿಕೊಂಡು ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆಯೂ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಬಳೇಶ್ವರ ಗುಡುಗುಂಟಿ ತಿಳಿಸಿದರು.

ಸರ್ಕಾರದಿಂದ ಲಭ್ಯವಾಗಿರುವ 10 ಲಕ್ಷ ರೂ.ಗಳನ್ನು ಬಳಸಿಕೊಳ್ಳುವ ಕುರಿತಂತೆ ಕಳೆದ ಬಾರಿ ಕೆಲ ಗೊಂದಲಗಳಿದ್ದವು. ಈ ಬಾರಿ ಅದನ್ನು ಎಲ್ಲ ಓಣಿಯ ಬಾಬುದಾರರು, ಹಿರಿಯರು, ಯುವಕರಿಗೆ ಮನವರಿಕೆ ಮಾಡಿಕೊಡಲಾಗಿದೆ. ಎಲ್ಲರೂ ಒಪ್ಪಿರುವುದರಿಂದ ಫೆ.16ರಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಸರ್ಕಾರದ ನಿಯಮಕ್ಕೆ ಒಳಪಟ್ಟು ಅನುದಾನವನ್ನು ಹೇಗೆ ಬಳಸಿಕೊಳ್ಳಲು ಸಾಧ್ಯವೋ ಅದೇ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡುವುದಾಗಿ ತಿಳಿಸಿದರು.

ಮಾ.8ರಂದು ಬೆಳಗ್ಗೆ ಮಧ್ಯಾಹ್ನ 1.30ರವರೆಗೆ 10.30 ರಿಂದ ವಿದ್ಯಾಗಿರಿ ಹಾಗೂ ನವನಗರ ಭಾಗದ ಬಣ್ಣದಾಟ ಜರುಗಲಿದೆ. ಮಧ್ಯಾಹ್ನದ ನಂತರ ಕಿಲ್ಲಾ ಓಣಿಯ ಬಣ್ಣದಾಟ ನಡೆಯಲಿದೆ. ಮಾ.9ರಂದು ಮೂರು ಓಣಿಯ ಬಣ್ಣ ಜರುಗಲಿದ್ದು, ಕೊನೆಯ ದಿನ ಹೊಸಪೇಟೆ ಓಣಿಯ ಬಣ್ಣದೋಕುಳಿ ಜರುಗಲಿದೆ ಎಂದು ವಿವರಿಸಿದರು.

ಮಾ.7ರಂದು ರಾತ್ರಿ ಕಿಲ್ಲಾ ಓಣಿಯ ಸೋಗಿನ ಬಂಡಿ, ಮಾ.8ರಂದು ಹಳ ಪೇಟೆ, ಮಾ.9ರಂದು ಹೊಸಪೇಟೆ, ಮಾ.10ರಂದು ಜೈನಪೇಟೆ ಹಾಗೂ ಮಾ.11ರಂದು ವೆಂಕಟಪೇಟೆ ಓಣಿಯ ಸೋಗಿನ ಬಂಡಿ ಇರಲಿದೆ ಎಂದು ಮಾಹಿತಿ ನೀಡಿದರು.

ಬಾಬುದಾರ ಮಧ್ವರಾಜ ಕುಲಕರ್ಣಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೊಡಗಿ ಅಧ್ಯಕ್ಷತೆ ವಹಿಸಿದ್ದರು. ಕಿರಣ ಶೆಟ್ಟರ್, ಪ್ರವೀಣ ಖಾತೆದಾರ, ಡಾ.ಶೇಖರ ಮಾನೆ, ನಾಗರಾಜ ಹಡ್ಲಿ, ಶಿವಕುಮಾರ ಮೇಲ್ಪಾಡ, ವಿಜಯ ಸುಲಾಖೆ, ವಕೀಲ ಪರಶುರಾಮ ಮಡಿವಾಳರ, ರಾಜು ನಾಯ್ಕ ಮತ್ತಿತರರು ಸಭೆಯಲ್ಲಿದ್ದರು.
ನವೀನ ಹಳೆಯದು