ಈ ವರ್ಷ ಜೋಳದ ಉತ್ಪಾದನೆ ಕ್ಷೀಣಿಸಲಿದೆ ಎನ್ನುವ ಆತಂಕ ಬಾಗಲಕೋಟೆ ಜಿಲ್ಲೆಯ ಸಾರ್ವಜನಿಕರಲ್ಲಿ ಮನೆಮಾಡಿದೆ. ಜಿಲ್ಲೆಯಲ್ಲಿ ಹಿಂದಿನ ವರ್ಷ ಬಿತ್ತನೆಯಾದ 1.20 ಲಕ್ಷ ಹೆಕ್ಟೇರ್ ಕೃಷಿಭೂಮಿಗೆ ಹೋಲಿಸಿದರೆ ಈ ಬಾರಿ ಪ್ರತಿಶತ 50ರಷ್ಟು ಕಡಿಮೆ ಪ್ರಮಾಣದಲ್ಲಿ ಜೋಳ ಬಿತ್ತನೆಯಾಗಿದೆ.
ರೈತರು ವಾಣಿಜ್ಯ ಬೆಳೆಗಳಾದ ಕಬ್ಬು, ರೇಷ್ಮೆ, ಮೆಣಸಿನಕಾಯಿಯನ್ನು ಹೆಚ್ಚು ನೆಚ್ಚಿಕೊಂಡಿರುವುದೇ ಇದಕ್ಕೆ ಕಾರಣ.
ಒಣಬೇಸಾಯವನ್ನು ಆಶ್ರಯಿಸಿರುವ ರೈತರು ಮಾತ್ರ ಜೋಳದ ಬಿತ್ತನೆ ಮಾಡುತ್ತಿದ್ದಾರೆ. ನೀರಾವರಿ ಸೌಲಭ್ಯ ಹೊಂದಿರುವ ರೈತರು ಹೆಚ್ಚಾಗಿ ಬೆಳೆಯುತ್ತಿರುವುದು ವಾಣಿಜ್ಯ ಬೆಳೆಗಳನ್ನು. ಜೋಳ ಮುಖ್ಯ ಆಹಾರ ಬೆಳೆಯಾಗಿರುವುದರಿಂದ ಅದರ ಉತ್ಪಾದನೆ ಕ್ಷೀಣಿಸುತ್ತಿರುವುದು ಸಹಜವಾಗಿಯೇ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಆತಂಕ ಬಾಗಲಕೋಟೆ ಜಿಲ್ಲೆಗಷ್ಟೇ ಸೀಮಿತವಾಗಿಲ್ಲ, ಅದು ಇಡೀ ಉತ್ತರ ಕರ್ನಾಟಕ ಭಾಗಕ್ಕೆ ಅನ್ವಯಿಸುತ್ತದೆ.
ಒಂದರ್ಥದಲ್ಲಿ, 'ನಾನೇಕೆ ಆರ್ಥಿಕ ನಷ್ಟ ಅನುಭವಿಸಿಕೊಂಡು ಬೇರೆಯವರ ಹಸಿವು ತಣಿಸಲಿ' ಎಂದು ಅನ್ನದಾತ ಮುನಿಸಿಕೊಂಡಂತಿದೆ. ಸಾರ್ವಜನಿಕರ ಆತಂಕವನ್ನೇ ಆಧಾರವಾಗಿ ಇಟ್ಟುಕೊಂಡು, ಆಹಾರ ಬೆಳೆಗಳನ್ನೇ ಗಣನೀಯ ಪ್ರಮಾಣದಲ್ಲಿ ಬೆಳೆಯುವಂತೆ ರೈತರನ್ನು ಆಗ್ರಹಿಸುವಂತಿಲ್ಲ. ಆ ಒಂದು ನೈತಿಕತೆಯನ್ನು ಸರ್ಕಾರ ಮತ್ತು ಸಾರ್ವಜನಿಕರು ಎಂದೋ ಕಳೆದುಕೊಂಡಾಗಿದೆ.
ದಶಕದ ಹಿಂದೆ ಆಂಧ್ರಪ್ರದೇಶದಲ್ಲಿ ಕೃಷಿಗೆ ಸಂಬಂಧಿಸಿದಂತೆ ವಿಚಿತ್ರ ಸನ್ನಿವೇಶ ಎದುರಾಗಿತ್ತು. 2011ರಲ್ಲಿ ಪೂರ್ವ ಗೋದಾವರಿ ಪ್ರಾಂತ್ಯದಲ್ಲಿನ ರೈತರು ಸಾಮೂಹಿಕವಾಗಿ ಕೃಷಿ ಚಟುವಟಿಕೆಯನ್ನು ಸ್ಥಗಿತ
ಗೊಳಿಸಿದ್ದರು. ಒಂದು ವರ್ಷದ ಕಾಲ ವ್ಯವಸಾಯ ಮಾಡದಿರಲು ನಿರ್ಧರಿಸಿದ್ದರು. ಈ ಕಾಲಾವಧಿಯನ್ನು ಅವರು ರಜೆ ಎಂದು ಘೋಷಿಸಿಕೊಂಡರು. ನಿರಂತರ ಕೃಷಿ ಚಟುವಟಿಕೆಯಿಂದ ಬಳಲಿರುವ ತಮಗೆ ವಿಶ್ರಾಂತಿಯ ಅಗತ್ಯವಿದೆ ಎನ್ನುವುದು ಅವರ ಬೇಡಿಕೆಯಾಗಿತ್ತು. ಪರಿಣಾಮವಾಗಿ, ಆ ರಾಜ್ಯದ ಮುಖ್ಯ ಆಹಾರ ಬೆಳೆಯಾದ ಭತ್ತದ ಕೊರತೆ ಎದುರಾಗಲಿದೆ ಎನ್ನುವ ಆತಂಕ ಜನರಲ್ಲಿ ಮೂಡಿ, ಆನಂತರ ಸರ್ಕಾರವೇ ಮುಂದಾಗಿ ರೈತರ ಮನವೊಲಿಸಬೇಕಾದ ಸಂದರ್ಭ ಸೃಷ್ಟಿಯಾಗಿತ್ತು.
ರೈತರು ಹೀಗೆ ಕಾಲಕಾಲಕ್ಕೆ ಮುನಿಸಿಕೊಳ್ಳಲು ಅನೇಕ ಕಾರಣಗಳಿವೆ. ರೈತರಿಗೆ ಕೃಷಿ ಚಟುವಟಿಕೆಯಿಂದ ಅದರಲ್ಲೂ ಒಣಬೇಸಾಯವನ್ನೇ ಆಶ್ರಯಿಸಿರುವವರಿಗೆ ಹೇಳಿಕೊಳ್ಳುವಂಥ ಆದಾಯ ದೊರೆಯುತ್ತಿಲ್ಲ. ಕಳಪೆ ಬೀಜಗಳ ಬಳಕೆ, ಅಧಿಕ ಬೆಲೆಗೆ ಖರೀದಿಸಿದ ರಸಗೊಬ್ಬರ, ಸಕಾಲಕ್ಕೆ ಆಗದ ಮಳೆ, ಕ್ರಿಮಿಕೀಟಗಳಿಂದ ಹಾನಿಗೊಳಗಾಗುವ ಬೆಳೆ ಇಷ್ಟೆಲ್ಲ ತೊಂದರೆಗಳನ್ನು ಎದುರಿಸಿ ಬೆಳೆ ಕೈಗೆ ಬರುವ ಹೊತ್ತಿಗೆ ಬಡ ರೈತರ ಸ್ಥಿತಿ ಚಿಂತಾಜನಕವಾಗಿರುತ್ತದೆ. ಸಾಲದ ಹೊರೆಯಿಂದ ಬೆನ್ನು ಬಾಗಿರುತ್ತದೆ. ಬೆಳೆಯನ್ನು ಹೊಲದಿಂದಲೇ ನೇರವಾಗಿ ಮಾರುಕಟ್ಟೆಗೆ ಸಾಗಿಸುವ ಪರಿಸ್ಥಿತಿ ರೈತನದು. ಗಗನಕ್ಕೇರಿದ್ದ ಬೆಲೆಯು ಬೆಳೆ ರೈತನ ಕೈಗೆ ಬರುವ ಹೊತ್ತಿಗೆ ಪಾತಾಳಕ್ಕೆ ಇಳಿದಿರುತ್ತದೆ.
ರೈತ ತನ್ನ ಬೆಳೆಯನ್ನು ಮಧ್ಯವರ್ತಿಗಳು ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡಬೇಕು. ಅನೇಕ ಮಾರಾಟಗಾರರು ರೈತರಿಂದ ಕಡಿಮೆ ಬೆಲೆಗೆ ದವಸ ಧಾನ್ಯಗಳನ್ನು ಖರೀದಿಸಿ ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಸಾರ್ವತ್ರಿಕ ಸತ್ಯ.
ಒಂದೆಡೆ ಮಧ್ಯವರ್ತಿಗಳ ಹಾವಳಿ, ಇನ್ನೊಂದೆಡೆ ರೈತರಿಂದಲೇ ನೇರವಾಗಿ ಖರೀದಿಸಲು ಸಿದ್ಧರಿಲ್ಲದ ಗ್ರಾಹಕರು. ಈ ನಡುವೆ, ಸರ್ಕಾರವು ಅವರ ಸಮಸ್ಯೆಗಳಿಗೆ ಕಿವುಡಾಗುತ್ತದೆ. ರಾತ್ರಿಯೆಲ್ಲ ನಿದ್ದೆ ಇಲ್ಲದೆ ಹೊಲಗಳಿಗೆ ನೀರುಣಿಸುವ ರೈತರ ಸಂಖ್ಯೆ ಹೇರಳವಾಗಿದೆ. ಅದೆಷ್ಟೋ ರೈತರು ರಾತ್ರಿ ವೇಳೆ ವಿಷಜಂತುಗಳಿಗೆ ಬಲಿಯಾದ ಉದಾಹರಣೆಗಳೂ ಇವೆ.
ಹಳ್ಳಿಗಳಲ್ಲಿ ವ್ಯವಸಾಯ ಮಾಡಿಕೊಂಡಿರುವ ರೈತರ ಮಕ್ಕಳಿಗೆ ಅಲ್ಲಿ ಉತ್ತಮ ಶೈಕ್ಷಣಿಕ ಸೌಲಭ್ಯ ದೊರೆಯುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರ ಕೊರತೆಯಿಂದಾಗಿ ಸೂಕ್ತ ಆರೋಗ್ಯ ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ. ರಸ್ತೆ ಸಂಪರ್ಕದ ಕೊರತೆಯಿಂದ ಅನೇಕ ಹಳ್ಳಿಗಳು ಮಳೆಗಾಲದಲ್ಲಿ
ದ್ವೀಪಗಳಾಗುತ್ತಿವೆ. ಹಳ್ಳಿಗರೆಲ್ಲ ದಿನಗೂಲಿಗಳಾಗಿ ನಗರ ಪ್ರದೇಶಗಳಿಗೆ ವಲಸೆ ಬರುತ್ತಿರುವುದರಿಂದ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗೆ ಕೆಲಸಗಾರರು ದೊರೆಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದು ಪ್ರವಾಹಕ್ಕೆ ಬೆಳೆ ಕೊಚ್ಚಿ ಹೋದಾಗ ಇಲ್ಲವೆ ಭೀಕರ ಬರಗಾಲ ತಲೆದೋರಿದಾಗಲೂ ಸಂಕಷ್ಟಕ್ಕೆ ಒಳಗಾಗುವುದು ರೈತನ ಬದುಕೇ.
ಬೆಳೆ ಬೆಳೆದು ಸಕಾಲದಲ್ಲಿ ಲಾಭವಾಗದೇ ಇದ್ದರೆ ರಸಗೊಬ್ಬರಗಳ ಸಾಲ ಗಂಭೀರ ಸಮಸ್ಯೆಯನ್ನು ತಂದೊಡ್ಡುತ್ತದೆ. ಈಗ ಕೃಷಿಭೂಮಿಯು ವಸತಿ ಪ್ರದೇಶವಾಗಿ ಪರಿವರ್ತನೆಯಾಗುತ್ತಿದೆ. ರಿಯಲ್ ಎಸ್ಟೇಟ್ ಉದ್ದಿಮೆಯಿಂದ ರೈತರ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಅದೆಷ್ಟೋ ರೈತರು ಬಂಡವಾಳದಾರರಿಗೆ ಕೃಷಿಭೂಮಿಯನ್ನು ಮಾರಾಟ ಮಾಡಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.
ಈಗಾಗಲೇ ಜಗತ್ತಿನಲ್ಲಿ ಆಹಾರದ ಕೊರತೆ ಉಂಟಾಗಿದೆ. ಜೊತೆಗೆ ಕೃಷಿಭೂಮಿ ಕ್ಷೀಣಿಸುತ್ತಿರುವುದು ಮತ್ತಷ್ಟು ಕಳವಳಕಾರಿ. ಈ ಗಂಭೀರ ಸಮಸ್ಯೆಯನ್ನು ಹೋಗಲಾಡಿಸಲು ಮೊದಲು ರೈತರ ಸಮಸ್ಯೆಗಳು ಪರಿಹಾರ ಕಾಣುವಂತೆ ಆಗಬೇಕು. ಕೇವಲ ವೇದಿಕೆಗಳಲ್ಲಿನ ಚರ್ಚೆ ಮತ್ತು ಸಂವಾದ
ಗಳಿಂದಾಗಲಿ, ಪ್ರದರ್ಶನ ಮೇಳಗಳಿಂದಾಗಲಿ ರೈತರ ಸಮಸ್ಯೆಗಳು ಪರಿಹಾರವಾಗಲಾರವು. ಸರ್ಕಾರ ಮತ್ತು ಸಾರ್ವಜನಿಕರು ಜೊತೆಗೂಡಿ ರೈತರ ಪ್ರಶ್ನೆಗಳು ಮತ್ತು ಸಮಸ್ಯೆಗಳಿಗೆ ಉತ್ತರದಾಯಿಯಾಗಬೇಕಿದೆ.