ಮುಧೋಳ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಶುಕ್ರವಾರ 3,09,182 ಕೋಟಿ ರೂ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಇದರಲ್ಲಿ ರಾಜಸ್ವ ಸ್ವೀಕೃತಿ 2,25,910 ಕೋಟಿ ರೂ ಸೇರಿ ಒಟ್ಟು ಸ್ವೀಕೃತಿಯು 3,03,910 ಕೋಟಿ ರೂ ಇದೆ. ಬೊಮ್ಮಾಯಿ ಅವರು ಮಂಡನೆ ಮಾಡಿರುವ ಎರಡನೇ ಬಜೆಟ್ ಇದಾಗಿದೆ.
ಇದು ಈ ಸರ್ಕಾರದ ಕೊನೆಯ ಬಜೆಟ್ ಕೂಡ ಆಗಿದೆ. ಆರು ವಲಯಗಳಾಗಿ ವಿಭಾಗಿಸಿ ಅನುದಾನ ಬಿಡುಗಡೆ ಮಾಡಲಾಗಿದೆ. ಸಿಎಂ ಹೇಳಿಕೊಂಡ ಪ್ರಕಾರ ಈ ಬಾರಿಯದ್ದು ರೆವೆನ್ಯೂ ಸರ್ಪ್ಲಸ್ ಬಜೆಟ್ ಆಗಿದೆ. ಅಂದರೆ ವೆಚ್ಚಕ್ಕಿಂತ ಹೆಚ್ಚು ಆದಾಯ ಇರುವ ಬಜೆಟ್ ಆಗಿದೆ.
2034-24 ರ ಬಜೆಟಿನಲ್ಲಿ ಜಿಲ್ಲೆಗೆ ಬೆರಳೆಣಿೆಕೆಯಷ್ಟು ಯೋಜನೆಗಳು ಮಾತ್ರ ಘೋಷಣೆಯಾಗಿವೆ, ಆದ್ರೆ ಕಳವಳಕಾರಿ ಅಲ್ಲ, ಮುಖ್ಯವಾಗಿ ಮುಧೋಳ ಜನತೆಗೆ. ಯಾಕಂದ್ರೆ ಕಳೆದೈದು ವರ್ಷದಲ್ಲಿ ಬಜೆಟಿನಲ್ಲಿ ಇಲ್ಲದ ಅನೇಕ ಯೋಜನೆಗಳು ಮುಧೋಳ ತಾಲೂಕಿಗೆ ಬಂದಿವೆ, ಅವುಗಳಲ್ಲಿ ಮಂಟೂರ ಏತ ನೀರಾವರಿ, ಹಲಗಲಿ- ಮೇಳ್ಳಿಗೆರಿ ಏತ ನೀರಾವರಿ, ಮುಧೋಳ ಬೈಪಾಸ್ ರಸ್ತೆ, ನೂತನ ಬಸ್ ನಿಲ್ದಾಣ, ನೂತನ ಆಡಳಿತ ಸೌಧ ಇತ್ಯಾದಿ.
ಆದ್ರೆ ಒಟ್ಟಾರೆ ಸಮಗ್ರ ಜಿಲ್ಲೆಯ ಪರಿಗಣನೆಗೆ ತೆಗೆದುಕೊಂಡರೆ ಜಿಲ್ಲೆಯನ್ನು ನಿರ್ಲಕ್ಷಿಸಲಾಗಿದೆ. ಯಾಕಂದ್ರೆ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಬಹುನಿರೀಕ್ಷಿತವಾಗಿತ್ತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚುನಾವಣಾ ವರ್ಷದಲ್ಲಿ ಸಲ್ಲಿಸಿದ ಮುಂಗಡ ಪತ್ರ ಸಮಗ್ರ ಬಾಗಲಕೋಟೆ ಜಿಲ್ಲೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಯಾವ ಹೊಸ ಯೋಜನೆಯನ್ನು ಪ್ರಸ್ತಾಪಿಸಿಲ್ಲ. ನೀರಾವರಿ, ಪುನರ್ವಸತಿಯ ಭರವಸೆ ಹೊರತು ಪಡಿಸಿದರೇ ಕೋಟೆ ನಾಡಿನ ಜಿಲ್ಲೆಗೆ ಮುಂಗಡಪತ್ರ ಅನ್ಯಾಯ ಮಾಡಿದೆ. ಬೊಮ್ಮಾಯಿ ಅವರು
ವಿಧಾನ ಮಂಡಳದಲ್ಲಿ ಶುಕ್ರವಾರ ಮಂಡಿಸಿದ ಮುಂಗಡಪತ್ರ ಅವರ ಅಧಿಕಾರ ಅವಧಿಯ ಎರಡನೇ ಮುಂಗಡಪತ್ರವಾಗಿದೆ. ಪುನರ್ವಸತಿಗೆ 5ಸಾವಿರ ಕೋಟಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ 25ಸಾವಿರ ಕೋಟಿ ರೂ.
ಬಾಗಲಕೋಟೆಗೆ ತೀವ್ರತರ ರೋಗ ಚಿಕಿತ್ಸೆಯ 50 ಬೆಡ್ ಆಸ್ಪತ್ರೆ ಬಿಟ್ಟರೇ ಯಾವ ಹೊಸ ಪ್ರಸ್ತಾಪವೇ ಇಲ್ಲ. ಈಗಾಗಲೇಘೋಷಣೆಯಾಗಿರುವ ಜಮಖಂಡಿ ವಿಶ್ವವಿದ್ಯಾಲಯ, ಸಸಾಲಟ್ಟಿಯ ವೆಂಕಟೇಶ ಏತ ನೀರಾವರಿ ಯೋಜನೆಯನ್ನು ಪೂರ್ತಿಗೊಳಿಸಲು ಕ್ರಮ ವಹಿಸಲಾಗುತ್ತದೆ ಎಂಬ ಭರವಸೆ, ಕೇಂದ್ರ ಸಮಪಾಲಿನ ಬಾಗಲಕೋಟೆ ಕುಡಚಿ ರೈಲು ಮಾರ್ಗಕ್ಕೆ ರಾಜ್ಯದ ಪಾಲು, ಮುಧೋಳ ನಾಯಿ ತಳಿ ಸಂಶೋಧನಾ ಕೇಂದ್ರಕ್ಕೆ 5 ಕೋಟಿ ರೂಗಳ ನೆರವು ಹೊರತುಪಡಿಸಿದರೆ ಇಡೀ ಮುಂಗಡಪತ್ರದಲ್ಲಿ ಬಾಗಲಕೋಟೆ ಜಿಲ್ಲೆಯ ಹೆಸರಿಲ್ಲ.
ಪ್ರವಾಸೋದ್ಯಮ ಅಭಿವೃದ್ಧಿ ವಿಷಯದಲ್ಲಿಯೂ ಯಾವ ಹೆಸರಿಲ್ಲ, ಚಾಲುಕ್ಯ ಉತ್ಸವ, ರನ್ನ ಉತ್ಸವ ಮಾತೇ ಇಲ್ಲ. ಜವಳಿ ಪಾರ್ಕ ಅಭಿವೃದ್ಧಿಯ ಪ್ರಸ್ತಾಪ ಇಲ್ಲ, ಸಾಂಪ್ರದಾಯಿಕ ಘೋಷಣೆಗಳಲ್ಲಿ ನೇಕಾರರಿಗೆ ಉಚಿತ ವಿದ್ಯುತ ಅದು ಜಿಲ್ಲೆಯ ನೇಕಾರರಿಗೆ ಸಿಗಲಿದೆ, ಗಣಿಗಾರಿಕೆ ಅಭಿವೃದ್ಧಿ ಬಗ್ಗೆಯೂ ಯಾವ ಹೆಸರಿಲ್ಲ. ಇದರಿಂದ ಜಿಲ್ಲೆಯನ್ನು ಬೊಮ್ಮಾಯಿ ಸರಕಾರ ಕಡೆಗಣಿಸಿದಂತಿದ್ದು ಇದಕ್ಕೆ ಅವರು ಹೊಣೆಯೋ ಅಥವಾ ಅವರ ಗಮನಕ್ಕೆ ತಾರದ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ಹೊಣೆಯೋ ಎಂಬುದನ್ನು ಬರಲಿರುವ ದಿನಗಳಲ್ಲಿ ನಿರ್ಧರಿಸಬೇಕು.
ಐಹೊಳೆ ಸ್ಥಳಾಂತರ, ಪ್ರವಾಸೋದ್ಯಮ ಅಭಿವೃದ್ಧಿ, ಇಳಕಲ್ ಹುನಗುಂದ ತಾಲೂಕಿನ ಗಣಿಗಾರಿಕೆ ಸುರಕ್ಷತೆ, ಗುಳೇದಗುಡ್ಡ ರಬಕವಿ ಬನಹಟ್ಟಿ ಭಾಗದಲ್ಲಿ ನೇಕಾರರ ಕಲ್ಯಾಣ ಯೋಜನೆ, ಬಾಗಲಕೋಟೆ ಸರಕಾರಿ ಮೆಡಿಕಲ್ ಕಾಲೇಜ ಸ್ಥಾಪನೆ ಬಗ್ಗೆ ಮುಂಗಡಪತ್ರದಲ್ಲಿ ಯಾವುದೇ ಪ್ರಸ್ತಾಪವಿಲ್ಲ.
ಬಜೆಟಿನಲ್ಲಿ ಘೋಷಣೆಯಾದ ಯೋಜನೆಗಳು ಈ ಕೆಳಗಿನಂತಿವೆ.
ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗಕ್ಕೆ 210 ಕೋಟಿ ರೂಪಾಯಿ ಒದಗಿಸಲಾಗಿದೆ.
ಬಾಗಲಕೋಟೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ.
ರಾಷ್ಟ್ರೀಯ ಪ್ರಾಣಿ ತಳಿ ಸಂಪನ್ಮೂಲ ಬ್ಯೂರೋದಿಂದ ಭಾರತೀಯ ದೇಶಿ ಶ್ವಾನ ತಳಿ ಎಂದು ಮಾನ್ಯತೆ ಪಡೆದ ಮುಧೋಳ ಹೌಂಡ್ ಶ್ವಾನ ತಳಿಯ ಅಭಿವೃದ್ಧಿಗಾಗಿ 5 ಕೋಟಿ ರೂ. ಅನುದಾನ
ಬಾಗಲಕೋಟೆ, ಕಂಕಣವಾಡಿ- ಕದಮ್‌ಪುರ, ಕಲಬುರಗಿ, ಸನ್ನತಿ, ಶಿವಮೊಗ್ಗ, ಕೊಗರು,ಶಿಗ್ಲು, ಮಂಗಳೂರು, ಹಂಗಾರಕಟ್ಟೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಹೊಸ ಲೈಟ್ ಕಾರ್ಗೋ ಟ್ರಾನ್ಸ್‌ಪೋರ್ಟ್ (LCT) ಬೋಟ್ ಸೇವೆಗಳನ್ನು ಪ್ರಾರಂಭಿಸಲಾಗುವುದು
ಎಲ್ಲಾ ಜಿಲ್ಲೆಗಳಲ್ಲಿ Hand Held, X-ray ಯಂತ್ರಗಳ ಸಹಾಯದಿಂದ ಕ್ಷಯ ರೋಗಿಗಳ ಆರಂಭಿಕ ತಪಾಸಣೆ ಮತ್ತು ಚಿಕಿತ್ಸೆಗಾಗಿ ಸಮುದಾಯ ಆಧಾರಿತ ತಪಾಸಣೆ ಚಟುವಟಿಕೆ ನಡೆಸಲು 12.50 ಕೋಟಿ ರೂ. ಪ್ರಸ್ತಾಪಿಸಲಾಗಿದೆ.
ಬಾದಾಮಿ ಗುಹೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಈ ಸ್ಥಳಗಳಲ್ಲಿ ಅತ್ಯಾಧುನಿಕ ಬೆಳಕಿನ ವ್ಯವಸ್ಥೆ, 3D projection mapping, ಧ್ವನಿ ಮತ್ತು ಬೆಳಕು ಪ್ರದರ್ಶನಗಳನ್ನು ಅಳವಡಿಸಲಾಗುವುದು.