ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ನಡೆದ ತೆರೆದ ಬಂಡಿ ಓಡಿಸುವ ಸ್ಪರ್ಧೆ ನೋಡುಗರನ್ನು ರೋಮಾಂಚನಗೊಳಿಸ್ತು. ಮದಗಜಗಳಂತೆ ಕೊಬ್ಬಿದ ಎತ್ತುಗಳು ಒಂದಕ್ಕಿಂತ ಒಂದು ದಷ್ಟಪುಷ್ಟವಾಗಿದ್ದು ತೆರೆದ ಬಂಡಿಯನ್ನು ನಾ ಮುಂದೆ ತಾ ಮುಂದೆ ಎನ್ನುವ ರೀತಿ ಎಳೆಯುತ್ತಿದ್ದವು.
ಎತ್ತುಗಳು ತೆರೆದಬಂಡಿ ಎಳೆಯೋದು ನೋಡುಗರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು. ತೆರೆಬಂಡಿ ಅಷ್ಟು ಸುಲಭದ ಕ್ರೀಡೆಯಲ್ಲ. ಯಾಕೆಂದರೆ ಇಲ್ಲಿ ಗಾಲಿ ಉರುಳೋದಿಲ್ಲ, ಚಕ್ಕಡಿ ಬಂಡಿ ಗಾಲಿಗೆ ಒಂದು ಮರದ ಕೊಂಬೆ ಅಡ್ಡಲಾಗಿ ಸೇರಿಸಲಾಗಿರುತ್ತದೆ.ಇಡೀ ಚಕ್ಕಡಿ ಬಂಡಿಗಾಲಿ ತೆರೆಯುತ್ತಾ ಹೋಗೋದರಿಂದ ಇದನ್ನು ತೆರೆಬಂಡಿ ಅಂತ ಕರೆಯಲಾಗುತ್ತದೆ.
ಇಂತಹ ಬಂಡಿ ಎಳೆದುಕೊಂಡು ಹೋಗುವ ಎತ್ತುಗಳ ಸಾಹಸ ನಿಜಕ್ಕೂ ಅಬ್ಬಾ ಎನ್ನುವಂತಿತ್ತು. ವರ್ಷವಿಡೀ ದುಡಿದ ರೈತರು ಈ ಸ್ಪರ್ಧೆಯನ್ನು ನೋಡಿ ಖುಷಿಪಟ್ಟರು, ಎತ್ತುಗಳು ಓಡೋದಕ್ಕೆ ಶುರುಮಾಡಿದರೆ ರೈತರು ಕೇಕೆ ಹಾಕಿ ಶಿಳ್ಳೆ ಹೊಡೆದು ಹರ್ಷ ಪಟ್ಟರು. ಸತತವಾಗಿ ಹೊಲದಲ್ಲಿ ಕೆಲಸ ಮಾಡಿ ದಣಿದ ರೈತರು ಈ ಗ್ರಾಮೀಣ ಕ್ರೀಡೆ ನೋಡಿ ಮನಸಾರೆ ಖುಷಿಪಟ್ಟಿದ್ದು, ಇದು ನಮಗೆಲ್ಲ ಮನರಂಜನೆ ಅಂತಾರೆ.
ಮಹಾಲಿಂಗಪುರ ಪಟ್ಟಣದಲ್ಲಿ ಈ ತೆರೆಬಂಡಿ ಸ್ಪರ್ಧೆಗೆ ಐವತ್ತು ವರ್ಷಗಳ ಇತಿಹಾಸವಿದೆ. ಆದ್ದರಿಂದ ಇದನ್ನು ಇವರು ಐವತ್ತು ವರ್ಷದ ಪ್ರಯುಕ್ತ "ತೆರೆಬಂಡಿ ವೈಭವ" ಎಂದು ನಾಲ್ಕು ದಿನಗಳ ಕಾಲ ಆಚರಿಸುತ್ತಿದ್ದಾರೆ. ಬಸವೇಶ್ವರ ಜಾತ್ರಾ ಕಮೀಟಿಯಿಂದ ಆಯೋಜಿಸಿದ ಅಂತಾರಾಜ್ಯ ತೆರೆಬಂಡಿ ಸ್ಪರ್ಧೆ ಇದಾಗಿದೆ.
ಬಾಗಲಕೋಟೆ, ಬೆಳಗಾವಿ, ವಿಜಯಪುರ, ಮಹಾರಾಷ್ಟ್ರ, ಆಂದ್ರ ಭಾಗದಿಂದಲೂ ಎತ್ತುಗಳು ಭಾಗಿಯಾಗಿದ್ವು. ಇನ್ನು ಸ್ಪರ್ಧೆಯಲ್ಲಿ ಭಾಗವಹಿಸಿದ ಎತ್ತುಗಳನ್ನು ನೋಡೋದೆ ಕಣ್ಣಿಗೆ ಹಬ್ಬವೆನ್ನುವಂತಿತ್ತು, ಯಾಕಂದ್ರೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎತ್ತುಗಳು ಸಾಮಾನ್ಯ ಎತ್ತುಗಳಾಗಿರಲಿಲ್ಲ. ಪಕ್ಕಾ ಮದಿಸಿದ ಆನೆಯಂತೆ ಕೊಬ್ಬಿದ ಎತ್ತುಗಳಾಗಿದ್ದು, ಒಂದೊಂದು ಜೋಡಿ ಬೆಲೆ 5 ರಿಂದ12ಲಕ್ಷ ರೂ ಹೋರಿಗಳು ಇದ್ದವು.
ಅವುಗಳು ಚಕ್ಕಡಿ ಬಂಡಿ ಎಳೆಯುವ ಸಾಹಸ ನೋಡುಗರ ಮೈನವರೆಳಿಸುವಂತ್ತಿತ್ತು. ಸ್ಪರ್ಧೆಯಲ್ಲಿ ವಿಶೇಷ ಬಹುಮಾನಗಳನ್ನು ಕೂಡ ನಿಗಧಿಮಾಡಲಾಗಿತ್ತು. ಒಂದು ನಿಮಿಷದಲ್ಲಿ ಯಾವ ಜೋಡಿ ಅತಿ ಹೆಚ್ಚು ದೂರ ಓಡುತ್ತದೊ ಆ ಪ್ರಕಾರ ಬಹುಮಾನ ನಿಗದಿ ಮಾಡಲಾಗಿತ್ತು.
ಮೊದಲ ಬಹುಮಾನ ಕ್ವಿಡ್ ಕಾರು, ಎರಡನೇ ಬಹುಮಾನ ರಾಯಲ್ ಎನ್ ಫೀಲ್ಡ್,ಮೂರನೇ ಬಹುಮಾನ ಪಲ್ಸಾರ್ ಎನ್ ಎಸ್ 200, 4ನೇ ಬಹುಮಾನ ಪಲ್ಸಾರ್ ಎನ್ ಎಸ್ 125, ಬೆಳ್ಳಿ ಗದೆಗಳು ಸೇರಿ ಒಟ್ಟು 12 ಬಹುಮಾನಗಳನ್ನು ನಿಗಧಿ ಮಾಡಲಾಗಿದೆ. ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸುವ ಉದ್ದೇಶದಿಂದ ತೆರೆಬಂಡಿ ಓಟ ಆಯೋಜಿಸಲಾಗಿತ್ತು.
ಒಟ್ಟಾರೆ ಗ್ರಾಮೀಣ ಕ್ರೀಡೆ ನಶಿಸುವ ವೇಳೆ ನಡೆದ ತೆರೆದ ಬಂಡಿ ಸ್ಪರ್ಧೆ, ಎಲ್ಲ ರೈತರ ಖುಷಿಯನ್ನು ಇಮ್ಮಡಿಗೊಳಿಸಿತ್ತು. ತೆರೆದ ಬಂಡಿ ಸ್ಪರ್ಧೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದು ಇಂತಹ ಸ್ಪರ್ಧೆ ಇನ್ನು ಹೆಚ್ಚು ಕಾಲ ಉಳಿಯಲಿ, ಬೆಳೆಯಲಿ ಎಂಬುದು ಎಲ್ಲರ ಆಶಯ.