ಬೀಳಗಿ: ಅಪ್ರಾಪ್ತ ಬಾಲಕನಿಗೆ ಮೋಟಾರ್ ಸೈಕಲ್ ಚಲಾಯಿಸಲು ಕೊಟ್ಟಿದ್ದಕ್ಕೆ ವಾಹನ ಮಾಲಿಕನಿಗೆ ಕಿರಿಯ ದಿವಾಣಿ ನ್ಯಾಯಾಧೀಶ ಜಿನ್ನಪ್ಪ ಚೌಗಲಾ 2 ತಿಂಳು ಜೈಲು ಶಿಕ್ಷೆ ಅಥವಾ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ತಾಲೂಕಿನ ಬಿಸನಾಳ ಗ್ರಾಮದ ರಸೂಲಸಾಬ್ ಮೋದಿನಸಾಬ ಜಮಾದಾರ ಎಂಬ ಆರೋಪಿಯು ಅಪ್ರಾಪ್ತ ಬಾಲಕನಿಗೆ ತನ್ನ ಮೋಟಾರ್ ಸೈಕಲ್ ನಂ. ಕೆಎ 29 ವಿ 7826 ಇದನ್ನು ಚಲಾಯಿಸಲು ಕೊಟ್ಟಿದ್ದು, ಈ ಕುರಿತು 4 ಜೂನ್ 2021 ರಂದು ಬೀಳಗಿ ಮುಧೋಳ ರಸ್ತೆಯ ಮೇಲೆ ಅಮಲಝರಿ ಗ್ರಾಮದ ಹತ್ತಿರ ರಸ್ತೆ ಅಪಘಾತವಾಗಿದ್ದು, ಈ ಕುರಿತು ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖಾಧಿಕಾರಿಗಳು ತನಿಖೆ ಕೈಗೊಂಡು ಸಾಕ್ಷಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಯಿಸಿದ ಕಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರು ಆರೋಪಿ ಬಿಸನಾಳ ಗ್ರಾಮದ ರಸೂಲಸಾಬ ಮೋದಿನಸಾಬ ಜಮಾದಾರ ಅಪ್ರಾಪ್ತ ಬಾಲಕನಿಗೆ ಮೋಟಾರ್ ಸೈಕಲ್ ನಡೆಯಿಸಲು ಕೊಟ್ಟದ್ದು ಸಾಭೀತಾಗಿದೆ.
ಇದರಿಂದ ಆರೋಪಿತನಿಗೆ ಶನಿವಾರ ನಡೆದ ಲೋಕ ಅದಾಲತ್‌ದಲ್ಲಿ 2 ತಿಂಗಳ ಜೈಲು ಶಿಕ್ಷೆ ಅಥವಾ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಮಹಾಂತೇಶ ರಾಮಪ್ಪ ಕುದರಿ ಹಾಜರಿದ್ದರು.