ಮುಧೋಳ: ಜನವರಿ 18, 1981 ರಂದು ವೇದಮೂರ್ತಿ ಉತ್ತೂರು ಶ್ರೀ ಬಸಯ್ಯ ಅಜ್ಜನವರ ಅಮೃತ ಹಸ್ತದಿಂದ ಡಾ. ರಾಜಕುಮಾರ್ ಅಭಿನಯದ ಶ್ರೀನಿವಾಸ ಕಲ್ಯಾಣ ಚಲನಚಿತ್ರದಿಂದ ಪ್ರಾರಂಭವಾದ ಚಿತ್ರಮಂದಿರ, ಸತತ ನಾಲ್ಕು ದಶಕಗಳ ಕಾಲ ನಮ್ಮ ಮುಧೋಳ ತಾಲೂಕಿನ ಜನರನ್ನು ಮನರಂಜಿಸುತ್ತಾ ಬಂದಿದ್ದ ಈ ಚಿತ್ರಮಂದಿರವು ಇನ್ನು ಕೆಲವೇ ದಿನಗಳಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಮಲ್ಟಿಪ್ಲೆಕ್ಸ್ (Multiplex) ಆಗಿ ಪರಿವರ್ತನೆ ಹೊಂದಲಿದೆ.
ನಗರದ ಐಕಾನಿಕ್ ಚಿತ್ರಮಂದಿರ ಎನಿಸಿಕೊಂಡಿದ್ದ, ಹತ್ತಾರು ಜನರಿಗೆ ಉದ್ಯೋಗ ಕೊಟ್ಟಂತಹ ಈ ಚಿತ್ರಮಂದಿರ ಹೆಚ್ಚಿನ ನಿರ್ವಹಣೆಯನ್ನು ನಿಭಾಯಿಸಲು ಸಾಧ್ಯವಾಗದೆ, ಏಕ-ಪರದೆಯ (single screen) ಸಿನೆಮಾ ಹಾಲ್ ಶಾಶ್ವತ ಮುಚ್ಚುವಿಕೆಗೆ ಆಶ್ರಯಿಸಿದೆ.
ಅತ್ಯಂತ ಸಾಂಪ್ರದಾಯಿಕ ಚಲನಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಈ ಚಿತ್ರಮಂದಿರ ನಗರದ ಜನತೆಯ ಪ್ರೀತಿಗೆ ಪಾತ್ರವಾಗಿತ್ತು, ಈ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಅದೆಷ್ಟೋ ಚಿತ್ರಗಳು ಸೂಪರ್ ಹಿಟ್ ಆಗಿವೆ, ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್ ಹಾಗೂ ಅನಂತ್ ಕುಮಾರ್ ಅವರು ನಟಿಸಿದ ಚಿತ್ರಗಳು ಈ ಚಿತ್ರಮಂದಿರದಲ್ಲಿ ಅತಿ ಹೆಚ್ಚು ಪ್ರದರ್ಶನ ಕಾಣುತ್ತಿದ್ದವು.
ಅದರಲ್ಲೂ ಡಾ. ವಿಷ್ಣುವರ್ಧನ್ ಅವರು ನಟಿಸಿದ ಯಜಮಾನ ಚಿತ್ರವನ್ನು ರಾತ್ರಿಯುದ್ದಕ್ಕೂ ಟಿಕೆಟ್ ಗಾಗಿ ಕಾದು, ಟ್ಯಾಕ್ಟರ್, ಎತ್ತಿನಗಾಡಿಯಲ್ಲಿ ಬಂದು ನೋಡಿದಂತಹ ಉದಾಹರಣೆ ನಮ್ಮ ಕಣ್ಣಮುಂದೆಯೇ ಇದೆ. ನಾನು ಈ ಚಿತ್ರಮಂದಿರದಲ್ಲಿ ಇತ್ತೀಚೆಗೆ ನೋಡಿದ ಸಿನೆಮಾ ಪುನೀತ್ ಅಭಿನಯದ ಜೇಮ್ಸ್.
ಚಿತ್ರಮಂದಿರದ ಮಾಲೀಕರಾದ ಶ್ರೀ ಕತ್ತಿ ಅವರು ಹೊಸ ಆಲೋಚನೆಯೊಂದಿಗೆ ಚಿತ್ರಮಂದಿರವನ್ನು ಕೆಡವಿ ಎರಡು ಪರದೆಯ ಮಲ್ಟಿಪ್ಲೆಕ್ಸ್‌ನೊಂದಿಗೆ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿ, ಮತ್ತೆ ಮುಧೋಳ ಜನತೆಯನ್ನು ಮನರಂಜಿಸಲು ಅನುವು ಮಾಡುತ್ತಿರುವ ಇವರುಗಳಿಗೆ ಶುಭವಾಗಲಿ.