ಹಿಂಡನ್​ಬರ್ಗ್​ ವರದಿಯಿಂದ ಅದಾನಿ ಸಂಪತ್ತು ಕರಗಿರಿವುದೇಕೆ? ಮಾಡಿರೋ ತಪ್ಪಾದರೂ ಏನು?


ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಭಾರತದ ನಂಬರ್ ಒನ್ ಶ್ರಿಮಂತ ಎನಿಸಿಕೊಂಡಿದ್ದ ಗುಜರಾತ್ ಮೂಲದ ಉದ್ಯಮಿ ಗೌತಮ್ ಅದಾನಿ ಕೇವಲ ನಾಲ್ಕು ತಿಂಗಳ ಹಿಂದೆಯಷ್ಟೆ ವಿಶ್ವದ 2ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿದ್ದ ಅವರು ಆ ಸ್ಥಾನಕ್ಕೆ ಏರಿದ ಮೊದಲ ಭಾರತೀಯ ಮತ್ತು ಮೊದಲ ಏಷ್ಯನ್ ಎನಿಸಿಕೊಂಡಿದ್ದರು. ಆದರೆ ಜನವರಿ 24ರಿಂದ ಅದಾನಿ ಸಮೂಹದ ಷೇರುಗಳು ಸತತವಾಗಿ ಕುಸಿಯುವ ಮೂಲಕ ಸುಮಾರು 3.4 ಲಕ್ಷ ಕೋಟಿ ರೂಗಳಿಗೂ ಹೆಚ್ಚಿನ ನಷ್ಟಕ್ಕೆ ಒಳಗಾಗಿ, ಸದ್ಯ ವಿಶ್ವದ 7ನೇ ಶ್ರೀಮಂತನ ಸ್ಥಾನಕ್ಕೆ ಕುಸಿದಿದ್ದಾರೆ. ಇದಕ್ಕೆ ಕಾರಣ ಫೊರೆನ್ಸಿಕ್ ಫೈನಾನ್ಷಿಯಲ್ ರಿಸರ್ಚ್ ಎಕ್ಸ್‌ಪರ್ಟ್ ಎಂದು ಹೇಳಿಕೊಳ್ಳುವ ಹಿಂಡೆನ್‌ಬರ್ಗ್ ಫೌಂಡೇಷನ್‍ ಬಿಡುಗಡೆ ಮಾಡಿದ ವರದಿ. ಹಾಗಿದ್ದರೆ ಆ ವರದಿ ಏನು? ಅದಾನಿ ಸಾಮ್ರಾಜ್ಯ ಕುಸಿಯುತ್ತಿರುವುದೇಕೆ ಎಂಬುದನ್ನು ನೋಡೋಣ. ಮೂರು ವರ್ಷದಲ್ಲಿ ಸುಮಾರು 17 ಪಟ್ಟು ಸಂಪತ್ತಿನ ಹೆಚ್ಚಳ ಕಂಡಿದ್ದ ಅದಾನಿ! ಕೇವಲ ಮೂರು ವರ್ಷಗಳ ಹಿಂದೆ ಅಂದರೆ 2020ರ ಜನವರಿ ವೇಳೆಗೆ ಗೌತಮ್ ಅದಾನಿ ಹೊಂದಿದ್ದ ಸಂಪತ್ತಿನ ಮೌಲ್ಯ 71 ಸಾವಿರ ಕೋಟಿ ರೂಗಳಾಗಿತ್ತು. ಆನಂತರ ಅಪ್ಪಳಿಸಿದ ಕೋವಿಡ್ ಸಾಂಕ್ರಾಮಿಕ, ಲಾಕ್‌ಡೌನ್‌ ಹೊಡೆತದಿಂದ ಬಹುತೇಕ ಉದ್ಯಮಿಗಳು ನಷ್ಟ ಅನುಭವಿಸುತ್ತಿದ್ದರೆ ಅದಾನಿ ಆಸ್ತಿ ಮಾತ್ರ ಏರುಗತಿಯಲ್ಲಿಯೇ ಸಾಗುತ್ತಿತ್ತು. ಕೊನೆಗೆ 2022ರ ಸೆಪ್ಟಂಬರ್ ವೇಳೆಗೆ 11.73 ಲಕ್ಷ ಕೋಟಿ ರೂಗಳ ಒಡೆಯರಾಗಿ ಪೋರ್ಬ್ಸ್ ಪಟ್ಟಿಯಲ್ಲಿ ವಿಶ್ವದ 2ನೇ ಶ್ರೀಮಂತ ಸ್ಥಾನ ಪಡೆದಿದ್ದರು. ಕೇವಲ ಮೂರು ವರ್ಷಗಳಲ್ಲಿ 17 ಪಟ್ಟು ಆಸ್ತಿಯಲ್ಲಿ ಏರಿಕೆ ಕಂಡಿದ್ದು ಹೇಗೆ ಎಂಬ ಪ್ರಶ್ನೆಗಳೆದ್ದಿದ್ದವು. ಗುಜರಾತಿನವರೆ ಆದ ಪ್ರಧಾನಿ ನರೇಂದ್ರ ಮೋದಿಯವರು ದೊಡ್ಡ ಬಂಡವಾಳಿಗರ ಪರವಾಗಿ ನೀತಿಗಳನ್ನು ಜಾರಿಗೊಳಿಸಿದರು. ಆಳುವವರ ನಡುವಿನ ಸಖ್ಯದಿಂದಾಗಿ ಸರ್ಕಾರದ ನೀತಿ ನಿರ್ಧಾರಗಳು ಮುಂಚಿತವಾಗಿಯೇ ತಿಳಿಯುವ ಪರಿಣಾಮ ಅದಾನಿ ಸಮೂಹವು ಆಯಾ ಕ್ಷೇತ್ರದಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುತ್ತಿತ್ತು. ಹಾಗಾಗಿ ಬಂದರುಗಳು, ವಿಮಾನ ನಿಲ್ದಾಣಗಳು, ಕಲ್ಲಿದ್ದಲು ಗಣಿಗಳು ಸೇರಿದಂತೆ ಹಲವು ವಲಯಗಳಲ್ಲಿ ಪ್ರವೇಶ ಪಡೆದ ಅದಾನಿ ಲಾಭ ಕಂಡರು ಎಂಬ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೆ ಗೌತಮ್ ಅದಾನಿಯವರ ಸಹೋದರ ವಿನೋದ್ ಶಾಂತಿಲಾಲ್ ಅದಾನಿ ಶ್ರೀಮಂತ ಅನಿವಾಸಿ ಭಾರತೀಯ (NRI) ಎನಿಸಿದ್ದಾರೆ. ಇದೇ ಸಂದರ್ಭದಲ್ಲಿ ಧೈರ್ಯವಂತಿಕೆಗೆ ಹೆಸರಾದ ದೇಶದ ಖ್ಯಾತ ಟಿವಿ ಚಾನೆಲ್ ಎನ್‌ಡಿಟಿವಿಯನ್ನು ಸಹ ಅದಾನಿ ಸಮೂಹ ಖರೀದಿಸಿತ್ತು. ಸತತ ಲಾಭ ಗಳಿಸುತ್ತ ಮುನ್ನುಗ್ಗುತ್ತಿದ್ದ ಅದಾನಿ ಸಮೂಹ FPO ನಲ್ಲಿ ಹೂಡಿಕೆ ಮಾಡಿತ್ತು. ಅಂತಹ ಸಂದರ್ಭದಲ್ಲಿ ಬಿಡುಗಡೆಯಾದ ಹಿಂಡೆನ್‌ಬರ್ಗ್ ವರದಿ ಅದಾನಿ ಸಮೂಹವನ್ನು ತಲ್ಲಣಗೊಳಿಸಿದೆ. ಹಿಂಡೆನ್‌ಬರ್ಗ್ ವರದಿಯಲ್ಲೇನಿದೆ? ಅದಾನಿ ಸಮೂಹದ ಕಂಪನಿಗಳು ಸಾಲ ಪಡೆಯುವುದಕ್ಕಾಗಿ ಕೃತಕವಾಗಿ ತಮ್ಮ ಷೇರುಗಳ ಬೆಲೆ ಏರಿಸಿಕೊಂಡಿದೆ. ತಮ್ಮ ಷೇರುಗಳ ಬೆಲೆಯನ್ನು ಅಕ್ರಮವಾಗಿ ಏರಿಸಿ, ಅವುಗಳ ಮೌಲ್ಯ ಹೆಚ್ಚಿಸಿಕೊಂಡು ನಂತರ ಅವುಗಳನ್ನು ಅಡವಿಟ್ಟು ಸಾಲ ಪಡೆದಿವೆ. ಸಾಗರದಾಚೆಗಿನ ವ್ಯವಹಾರಗಳಲ್ಲಿ ತೆರಿಗೆ ವಂಚಿಸುವುದಕ್ಕಾಗಿ ದಶಕಗಳ ಕಾಲ ಲೆಕ್ಕಪತ್ರಗಳಲ್ಲಿ ವಂಚನೆ ನಡೆಸಿವೆ. ಆ ಮೂಲಕ ಅತಿ ಹೆಚ್ಚು ಸಾಲದ ಸುಳಿಗೆ ಸಿಲುಕಿದ್ದು, ಒಟ್ಟಾರೆ ಅದರ ಆರ್ಥಿಕ ತಳಪಾಯವೇ ಅಪಾಯದಲ್ಲಿದೆ ಎಂದು ಹಿಂಡೆನ್‌ಬರ್ಗ್ ವರದಿ ಆರೋಪಿಸಿದೆ.

“ನಾವು ಎರಡು ವರ್ಷದ ಸಂಶೋಧನೆಯ ವರದಿಯನ್ನು ಇಂದು ಬಹಿರಂಗಪಡಿಸುತ್ತಿದ್ದೇವೆ. 17.8 ಟ್ರಿಲಿಯನ್ (218 ಬಿಲಿಯನ್ ಅಮೆರಿಕನ್ ಡಾಲರ್) ಮೌಲ್ಯದ ವಹಿವಾಟು ನಡೆಸುವ ಭಾರತೀಯ ಅದಾನಿ ಸಮೂಹವು ದಶಕಗಳ ಕಾಲ ಸ್ಟಾಕ್ ತಿರುಚುವಿಕೆ ಮತ್ತು ಲೆಕ್ಕಪತ್ರ ವಂಚನೆ ಯೋಜನೆಯಲ್ಲಿ ತೊಡಗಿದೆ ಎಂಬುದಕ್ಕೆ ಪುರಾವೆಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ” ಎಂದು ಸರಣಿ ಟ್ವೀಟ್‌ಗಳನ್ನು ಹಿಂಡೆನ್‌ಬರ್ಗ್‌ ಅಧಿಕೃತ ಟ್ವಿಟರ್‌ನಲ್ಲಿ ಮಾಡಲಾಗಿದೆ. ಅದಾನಿ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಗೌತಮ್ ಅದಾನಿ ಸುಮಾರು 120 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಸಂಗ್ರಹಿಸಿದ್ದಾರೆ. ಕಳೆದ 3 ವರ್ಷಗಳಲ್ಲಿಯೇ 100 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿನ ಮೌಲ್ಯವನ್ನು ತಮ್ಮ 7 ಕಂಪನಿಗಳ ಸ್ಟಾಕ್ ಬೆಲೆ ಏರಿಸುವ ಮೂಲಕ ಗಳಿಸಿದ್ದಾರೆ. ಆ 7 ಲಿಸ್ಟೆಡ್‌ ಕಂಪನಿಗಳು ಈ ಅವಧಿಯಲ್ಲಿ ಸರಾಸರಿ ಶೇ. 819 ಏರಿಕೆ ಕಂಡಿವೆ ಎಂದು ವರದಿ ತಿಳಿಸಿದೆ. ಅದಾನಿ ಸಮೂಹದ ನಿರ್ಧಾರ ತೆಗೆದುಕೊಳ್ಳುವ ಪ್ರಮುಖ 22 ಜನರಲ್ಲಿ 8 ಜನರು ಅದಾನಿ ಕುಟುಂಬದವರೆ ಆಗಿದ್ದಾರೆ. ಸಾಗರದಾಚೆಗಿನ ತೆರಿಗೆ ಸ್ವರ್ಗ ಎಂದು ಕರೆಸಿಕೊಳ್ಳುವ ಮಾರಿಷಸ್, ಯುಎಇ, ಕೆರಿಬಿಯನ್ ದ್ವೀಪಗಳು ಸೇರಿದಂತೆ ದೇಶಗಳಲ್ಲಿ ಹಲವಾರು ಶೆಲ್ ಕಂಪನಿಗಳನ್ನು ತೆರೆಯುವಲ್ಲಿ ಅದಾನಿ ಕುಟುಂಬ ನಿರತವಾಗಿದೆ. ಆ ಮೂಲಕ ಮನಿ ಲಾಂಡರಿಂಗ್, ತೆರಿಗೆದಾರರ ಹಣ ಕಬಳಿಕೆ ಮತ್ತು ಅಂದಾಜು 17 ಬಿಲಿಯನ್ ಅಮೆರಿಕನ್ ಡಾಲರ್ ಭ್ರಷ್ಟಾಚಾರ ನಡೆಸಿದ್ದಾರೆ. ಈ ಪ್ರಯತ್ನದಲ್ಲಿ ಕಾನೂನುಬಾಹಿರ ವಜ್ರದ ರಫ್ತು / ಆಮದು ಪ್ರಕರಣದಲ್ಲಿ ಅದಾನಿ ಸಹೋದರ ರಾಜೇಶ್ ಅದಾನಿ ಆರೋಪಿಯಾಗಿದ್ದು, ಅವರನ್ನು 2004-05ರಲ್ಲಿ ಎರಡು ಬಾರಿ ಬಂಧಿಸಲಾಗಿತ್ತು. ಆದರೆ ನಂತರ ಅವರನ್ನು ಅದಾನಿ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿ ಬಡ್ತಿ ನೀಡಲಾಯಿತು. ಅದೇ ರೀತಿ ಅದಾನಿ ಅವರ ಸೋದರ ಮಾವ ಸಮೀರ್ ವೋರಾ ಮತ್ತು ಅದಾನಿಯವರ ಹಿರಿಯ ಸಹೋದರ ವಿನೋದ್ ಅದಾನಿ ಸಹ ಆಯಕಟ್ಟಿನ ಜಾಗದಲ್ಲಿ ಕುಳಿತಿದ್ದು ಅಕ್ರಮ ವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ. ನಮ್ಮ ಸಂಶೋಧನೆಯು ಅದಾನಿ ಗ್ರೂಪ್‌ನ ಮಾಜಿ ಹಿರಿಯ ಅಧಿಕಾರಿಗಳು ಸೇರಿದಂತೆ ಹತ್ತಾರು ವ್ಯಕ್ತಿಗಳ ಸಂದರ್ಶನ, ಸಾವಿರಾರು ದಾಖಲೆಗಳ ಪರಿಶೀಲನೆ ಮತ್ತು ಹಲವು ದೇಶಗಳ ಭೇಟಿಯನ್ನು ಆಧರಿಸಿದೆ ಎಂದು ಹಿಂಡೆನ್‌ಬರ್ಗ್ ಹೇಳಿದೆ. ಅತ್ತ ಹಿಂಡೆನ್‌ಬರ್ಗ್‌ ವರದಿ ಹೊರಬೀಳುತ್ತಲೇ ಇತ್ತ ಅದಾನಿ ಗ್ರೂಪ್‌ನ ಷೇರುಗಳು ಕುಸಿಯಲಾರಂಭಿಸಿದ್ದವು. ಬುಧವಾರ ಸಂಜೆ ವೇಳೆಗೆ ಅದಾನಿ ಸುಮಾರು 46 ಸಾವಿರ ಕೋಟಿ ರೂಗಳ ನಷ್ಟಕ್ಕೆ ಒಳಗಾಗಿದ್ದರು. ಹಾಗಾಗಿ ಹಿಂಡೆನ್‌ಬರ್ಗ್‌ ವರದಿಯು ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿ ಕಾನೂನು ಕ್ರಮ ಜರುಗಿಸುವುದಾಗಿ ಅದಾನಿ ಪರ ವಕೀಲರು ಬೆದರಿಕೆಯೊಡ್ಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಹಿಂಡೆನ್‌ಬರ್ಗ್ “ಅದಾನಿ ಸಮೂಹದ ಕುರಿತ ವರದಿ ಬಿಡುಗಡೆ ಮಾಡಿ 36 ಗಂಟೆಗಳು ಕಳೆದಿವೆ. ಈವರೆಗೆ ಅದಾನಿ ಒಂದೇ ಒಂದು ವಿಷಯವನ್ನು ಪ್ರಸ್ತಾಪಿಸಿಲ್ಲ. ವರದಿಯ ಕೊನೆಯಲ್ಲಿ 88 ಪ್ರಶ್ನೆಗಳನ್ನು ಕೇಳಿದ್ದೆವು, ಅದಾನಿ ಯಾವುದೇ ಪ್ರಶ್ನೆಗೂ ಸಹ ಉತ್ತರ ನೀಡಿಲ್ಲ. ನಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಬೆದರಿಕೆಗಳನ್ನು ಆಶ್ರಯಿಸುತ್ತಿದ್ದಾರೆ” ಎಂದು ಹೇಳಿತ್ತು. “ನಮ್ಮ ವರದಿಯ ವಿರುದ್ಧ ಪರಿಹಾರ ಮತ್ತು ದಂಡನಾತ್ಮಕ ಕ್ರಮಕ್ಕೆ ಮುಂದಾಗುವುದಾಗಿ ಅದಾನಿ ಸಮೂಹ ಮಾಧ್ಯಮಗಳಿಗೆ ಹೇಳಿಕೆ ನೀಡಿದೆ. ಅಮೆರಿಕ ಮತ್ತು ಭಾರತೀಯ ಕಾನೂನುಗಳ ಅಡಿ ಹೋರಾಟ ನಡೆಸುವುದಾಗಿ ಅದಾನಿ ಸಮೂಹ ಹೇಳಿದೆ. ಈ ಕಾನೂನು ಹೋರಾಟವನ್ನು ನಾವು ಸ್ವಾಗತಿಸುತ್ತೇವೆ. ನಾವು ನಮ್ಮ ವರದಿಗೆ ಬದ್ಧರಾಗಿರುತ್ತೇವೆ ಮತ್ತು ನಮ್ಮ ವಿರುದ್ಧ ಯಾವುದೇ ಕಾನೂನು ಕ್ರಮವು ಅರ್ಹವಲ್ಲ ಎಂದು ನಂಬುತ್ತೇವೆ. ಅದಾನಿ ಈ ವಿಚಾರದಲ್ಲಿ ಗಂಭೀರವಾಗಿದ್ದರೆ, ನಾವು ಕಾರ್ಯನಿರ್ವಹಿಸುವ ಅಮೆರಿಕದಲ್ಲಿಯೂ ಮೊಕದ್ದಮೆ ಹೂಡಬೇಕು” ಎಂದು ಸವಾಲು ಹಾಕಿದೆ. 16 ಪ್ರತಿಶತದಷ್ಟು ಕರಗಿದ ಅದಾನಿ ಆಸ್ತಿ ಇನ್ನು ಶುಕ್ರವಾರ ಷೇರು ಮಾರುಕಟ್ಟೆ ಆರಂಭವಾಗುತ್ತಲೇ ಅದಾನಿ ಸಮೂಹದ ಕಂಪನಿಗಳು ಷೇರುಗಳ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ. ಆ ಮೂಲಕ ಅದಾನಿ ನಿವ್ವಳ ಮೌಲ್ಯವು 16 ಪ್ರತಿಶತದಷ್ಟು ಕರಗಿಹೋಗಿದೆ. ಪ್ರಮುಖ ಏಳು ಕಂಪನಿಗಳ ಷೇರು ಬೆಲೆಗಳು ಕುಸಿತ ಕಂಡಿವೆ. ಅದಾನಿ ಟೋಟಲ್ ಗ್ಯಾಸ್‌ನ ಷೇರುಗಳು ಶೇ. 19.65% ನಷ್ಟು ಕುಸಿದರೆ, ಅದಾನಿ ಟ್ರಾನ್ಸ್‌ಮಿಷನ್ ಶೇಕಡಾ 19 ಕ್ಕಿಂತ ಹೆಚ್ಚು ಕುಸಿದಿದೆ. ಅದಾನಿ ಗ್ರೀನ್ ಎನರ್ಜಿ ಶೇಕಡಾ 15.50 ರಷ್ಟು ಕುಸಿದರೆ, ಅದಾನಿ ಪೋರ್ಟ್ಸ್ ಶೇ.5.31ರಷ್ಟು ಕುಸಿತ ಕಂಡಿದೆ. ಅದಾನಿ ಪವರ್ ಮತ್ತು ಅದಾನಿ ವಿಲ್ಮಾರ್ ಶೇರುಗಳು ತಲಾ ಶೇ.5ರಷ್ಟು ಕುಸಿದಿವೆ. ಅದಾನಿ ಸಮೂಹದ ಪ್ರಮುಖ ಕಂಪನಿ ಅದಾನಿ ಎಂಟರ್‌ಪ್ರೈಸಸ್ ಶೇಕಡಾ 6.19 ರಷ್ಟು ಕುಸಿದಿದೆ. ಅದಾನಿಗಷ್ಟೇ ಸಮಸ್ಯೆಯಲ್ಲ ಈ ಬೆಳವಣಿಗೆಯು ಅದಾನಿ ಕಂಪನಿ ಲಾಭ ನಷ್ಟಕ್ಕೆ ಮಾತ್ರ ಸಂಬಂಧಿಸಿಲ್ಲ. ಬದಲಿಗೆ ಭಾರತದ ಆರ್ಥಿಕತೆ ಮತ್ತು ಬ್ಯಾಂಕುಗಳ ಹಿನ್ನಡೆಗೂ ಹೆಣೆದುಕೊಂಡಿದೆ. ಹಾಗಾಗಿ ಸದ್ಯದ ವರದಿಯ ಬಹಿರಂಗದಿಂದ ಕೇವಲ ಅದಾನಿ ಕಂಪನಿಗಳು ಮಾತ್ರವಲ್ಲದೆ ಅವುಗಳಿಗೆ ಹೊಂದಿಕೊಂಡಿದ್ದ ಭಾರತೀಯ ಬ್ಯಾಂಕುಗಳು ಮತ್ತು ಎಲ್‌ಐಸಿ ಷೇರುಗಳು ಸಹ ಕುಸಿತ ಕಂಡಿವೆ. NSE ಬ್ಯಾಂಕ್ ನಿಫ್ಟಿ ಸೂಚ್ಯಂಕವು ಹಿಂದಿನ ಅವಧಿಯ ಕುಸಿತವನ್ನು ಮತ್ತಷ್ಟು ವಿಸ್ತರಿಸಿದೆ. ಬ್ಯಾಂಕ್ ಆಫ್ ಬರೋಡಾ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ಅತಿ ಹೆಚ್ಚು ಕುಸಿತ ಕಂಡಿವೆ. “ಮಾರುಕಟ್ಟೆಯಲ್ಲಿ ನಕಾರಾತ್ಮಕ ಭಾವನೆಯು ಚಾಲ್ತಿಯಲ್ಲಿದೆ, ಇದು ಬ್ಯಾಂಕ್ ಷೇರುಗಳ ಮೇಲೆ ಪ್ರಭಾವ ಬೀರುತ್ತಿದೆ” ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ. ಇದು ಮತ್ತಷ್ಟು ಮುಂದುವರೆಯಲಿದ್ದು ಈಗಾಗಲೇ ಆರ್ಥಿಕ ಕುಸಿತದ ಹಾದಿಯಲ್ಲಿರುವ ಭಾರತದ ಹಣಕಾಸು ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಲಿದೆ. ಅದು ದೇಶದ ಪ್ರತಿಯೊಬ್ಬರನ್ನು ಬಾಧಿಸಲಿದೆ. ಗಟ್ಟಿ ತಳಪಾಯವಿಲ್ಲದ ಸಾಲದ ಮೇಲಿನ ಸಾಮ್ರಾಜ್ಯ ಕುಸಿಯದಿರುವುದೆ? ಸರಕುಗಳ ವ್ಯಾಪಾರದೊಂದಿಗೆ 1980 ರ ದಶಕದ ಉತ್ತರಾರ್ಧದಲ್ಲಿ ಅದಾನಿ ಗ್ರೂಪ್‌ ಪ್ರಾರಂಭವಾಯಿತು. ನಂತರ ಗಣಿಗಳು, ಬಂದರುಗಳು ಮತ್ತು ವಿದ್ಯುತ್ ಸ್ಥಾವರಗಳು, ವಿಮಾನ ನಿಲ್ದಾಣಗಳು, ಡೇಟಾ ಕೇಂದ್ರಗಳು ಮತ್ತು ರಕ್ಷಣಾ ಕ್ಷೇತ್ರದಲ್ಲೂ ಅದಾನಿ ಗ್ರೂಪ್ ಹೂಡಿಕೆ ಮಾಡಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಅದಾನಿ ಸಮೂಹವು ಕಳೆದ ಕೆಲವು ವರ್ಷಗಳಿಂದ ಆಕ್ರಮಣಕಾರಿಯಾಗಿ ತನ್ನ ವ್ಯಾಪಾರದ ಸಾಮ್ರಾಜ್ಯವನ್ನು ವಿಸ್ತರಣೆ ಮಾಡಿದೆ. ದೇಶದ ಪ್ರಮುಖ ಸುದ್ದಿ ಮಾಧ್ಯಮವಾದ ಎನ್‌ಡಿಟಿವಿ ಮತ್ತು ಕ್ರೆಡಿಟ್ಸೈಟ್‌ ಅನ್ನು ಸ್ವಾಧೀನಪಡಿಸಿಕೊಳ್ಳಲು ಅದಾನಿ ಗ್ರೂಪ್ ಇತ್ತೀಚೆಗೆ ಆಕ್ರಮಣಕಾರಿ ಕ್ರಮವನ್ನು ಕೈಗೊಂಡಿತ್ತು. ಅದಾನಿ ಸಮೂಹವು ತನ್ನೆಲ್ಲ ಆರ್ಥಿಕ ಚಟುವಟಿಕೆಗಳನ್ನು ಷೇರುಗಳ ಹೆಚ್ಚಿನ ಮೌಲ್ಯ ತೋರಿಸಿ, ದೊಡ್ಡ ಮಟ್ಟದಲ್ಲಿ ಸಾಲ ಪಡೆದು ನಡೆಸುತ್ತಿತ್ತೆ ಹೊರತು ತನ್ನ ಸ್ವಂತ ಬಲದಿಂದಲ್ಲ. ಹಾಗಾಗಿ ದಿಢೀರ್ ಕುಸಿತವನ್ನು ತಾಳುವ ಶಕ್ತಿ ಆ ಕಂಪನಿಗಿಲ್ಲ. ಈಗಾಗಲೇ ಸುಮಾರು 2.5 ಲಕ್ಷ ಕೋಟಿಯಷ್ಟು ಸಾಲ ಪಡೆದಿರುವ ಅದಾನಿಗೆ ಮತ್ತಷ್ಟು ಸಾಲ ಕೊಡುವ ಪರಿಸ್ಥಿತಿಯಲ್ಲಿ ದೇಶದ ಬ್ಯಾಂಕುಗಳಿಲ್ಲ. ಇವೆಲ್ಲವೂ ಸಂಕಷ್ಟವನ್ನು ಹೆಚ್ಚು ಮಾಡುತ್ತಿವೆಯೆ ಹೊರತು ಪರಿಹಾರ ಸೂಚಿಸುವುದಿಲ್ಲ. ಅದಾನಿ ಸಮೂಹವು ಪ್ರತಿ ನಿತ್ಯ ತನ್ನ ಆರ್ಥಿಕ ವ್ಯವಹಾರಗಳನ್ನು ಮತ್ತಷ್ಟು ವಿಸ್ತರಿಸಲು ಬಯಸುತ್ತಿತ್ತು. ಆದರೆ ಅದರ ತೀರದ ದಾಹಕ್ಕೆ ದೇಶದ ಸಾರ್ವಜನಿಕ ವಲಯದ ವಿಮಾನ ನಿಲ್ದಾಣಗಳು, ಬಂದರುಗಳು, ಗಣಿಗಳು ಬಲಿಯಾಗಿದ್ದವು. ಈಗ ಕುಸಿತದ ಸುಳಿಗೆ ಸಿಲುಕಿರುವ ಅದಾನಿ ಸಮೂಹವು ತಾನು ಕುಸಿಯುವುದಲ್ಲದೆ, ದೇಶವನ್ನು ಕುಸಿಯುವಂತೆ ಮಾಡುವ ಪರಿಸ್ಥಿತಿಗೆ ತಂದಿದೆ.

ಕಳೆದ ನಾಲ್ಕು ದಿನಗಳಲ್ಲಿ ದಿಢೀರ್ ಪ್ರಚಲಿತಕ್ಕೆ ಬಂದ ಅಮೆರಿಕದ ಕಂಪನಿಯ ಹೆಸರು ಹಿಂಡೆನ್‌ಬರ್ಗ್ ರಿಸರ್ಚ್. ಭಾರತದ ನಂಬರ್ ಒನ್ ಶ್ರೀಮಂತ ಗೌತಮ್ ಅದಾನಿಯವರ ಹಣಕಾಸು ಅಕ್ರಮಗಳನ್ನು ಬಯಲಿಗೆಳೆಯುವ ವರದಿ ಪ್ರಕಟಿಸುವ ಮೂಲಕ ಅದು ಸದ್ಯ ಟ್ರೆಂಡಿಂಗ್‌ನಲ್ಲಿದೆ. ಇತ್ತ ಆ ಒಂದು ವರದಿಯಿಂದ ಅದಾನಿ ಕಂಪನಿಯ ಷೇರುಗಳೆಲ್ಲ ಪ್ರಪಾತಕ್ಕೆ ಕುಸಿಯುತ್ತಿದ್ದು, ಈ ನಾಲ್ಕು ದಿನದಲ್ಲಿ ಕನಿಷ್ಟ 4 ಲಕ್ಷ ಕೋಟಿ ರೂಗಳಿಗೂ ಹೆಚ್ಚಿನ ನಷ್ಟಕ್ಕೆ ಒಳಗಾಗಿದ್ದಾರೆ. ಅಷ್ಟು ಮಾತ್ರವಲ್ಲದೆ ಎಸ್‌ಬಿಐ, ಎಲ್‌ಐಸಿಯಂತಹ ಸಾರ್ವಜನಿಕ ವಲಯದ ಸಂಸ್ಥೆಗಳ ಷೇರು ಮೌಲ್ಯಗಳು ಕುಸಿಯುತ್ತಿದ್ದು, ಇಡೀ ಭಾರತದ ಆರ್ಥಿಕತೆ ಅಪಾಯದಲ್ಲಿದೆ. ಇಂತಹ ಸಮಯದಲ್ಲಿ ಹಿಂಡೆನ್‌ಬರ್ಗ್ ಕಂಪನಿಯನ್ನು ‘ಶಾರ್ಟ್ ಸೆಲ್ಲಿಂಗ್’ ಕಂಪನಿ ಎಂದು ಸಂಭೋದಿಸಲಾಗುತ್ತಿದೆ. ಅದು ಅದಾನಿಗೆ ಶಾರ್ಟ್ ಸೆಲ್ಲಿಂಗ್ ಮಾಡುವ ಮೂಲಕ ಮಿಲಿಯನ್‌ ಡಾಲರ್‌ಗಟ್ಟಲೇ ಹಣ ಸಂಪಾದಿಸಿದೆ ಎಂದು ವರದಿಯಾಗಿದೆ. ಆಗಿದ್ದರೆ ಶಾರ್ಟ್‌ ಸೆಲ್ಲಿಂಗ್ ಎಂದರೇನು? ಆ ಕಂಪನಿಯ ಹಿನ್ನೆಲೆಯೇನು ಎಂಬುದನ್ನು ನೋಡೋಣ.

ಹಿಂಡೆನ್‌ಬರ್ಗ್ ಹಿನ್ನೆಲೆ
2017ರಲ್ಲಿ ನಾಥನ್ ಆಂಡರ್ಸನ್ ಎಂಬುವವರು ಸ್ಥಾಪಿಸಿದ ಹಿಂಡೆನ್‌ಬರ್ಗ್ ರಿಸರ್ಚ್ ತನ್ನನ್ನು ಸಂಶೋಧನಾ ಮತ್ತು ತನಿಖಾ ಸಂಸ್ಥೆ ಎಂದು ಕರೆದುಕೊಂಡಿದೆ. ಸ್ಟಾಕ್‌ ಮಾರ್ಕೆಟ್‌ನಲ್ಲಿ ತಪ್ಪಿಸಬಹುದಾದ ಆರ್ಥಿಕ ಅವಘಡಗಳನ್ನು ಗುರುತಿಸುವುದು, ಸಂತ್ರಸ್ತರನ್ನು ರಕ್ಷಿಸುವುದು ತನ್ನ ಕೆಲಸ ಎಂದು ಹೇಳಿಕೊಂಡಿದೆ. ಕೇವಲ ಬೆರಳೆಣಿಕೆಯ ಸಿಬ್ಬಂದಿಗಳನ್ನು ಹೊಂದಿರುವ ಈ ಸಂಸ್ಥೆಯು ದೈತ್ಯ ಕಂಪನಿಗಳ ಕುರಿತಾದ ಆಳವಾದ ಸಂಶೋಧನೆ ಮಾಡುವುದರಲ್ಲಿ ಪಳಗಿದ ಕೈ ಎನಿಸಿಕೊಂಡಿದೆ. ಆರ್ಥಿಕ ಅವ್ಯವಹಾರಗಳನ್ನು ಬಯಲಿಗೆಳೆಯುವುದು, ವರದಿಗಳನ್ನು ಬಿಡುಗಡೆ ಮಾಡುವ ವಿಶಲ್ ಬ್ಲೋಯರ್ ಕೆಲಸ ಮಾಡುತ್ತಲೇ ಅದು ‘ಶಾರ್ಟ್ ಸೆಲ್ಲರ್ ಆಕ್ಟಿವಿಸಂ’ ಅನ್ನು ಮಾಡುತ್ತಾ ಬಂದಿದೆ. ಅದಾನಿ ಕಂಪನಿಯ ವಿರುದ್ಧ ಸಹ ಅದು ಶಾರ್ಟ್ ಸೆಲ್ಲಿಂಗ್ ಮಾಡಿದೆ ಎಂದು ತನ್ನ ವರದಿಯಲ್ಲಿ ಹೇಳಿಕೊಂಡಿದೆ.

ಏನಿದು ಶಾರ್ಟ್ ಸೆಲ್ಲಿಂಗ್?
ಶಾರ್ಟ್ ಸೆಲ್ಲಿಂಗ್ ಎನ್ನುವುದು ಒಂದು ಮಾರುಕಟ್ಟೆ ತಂತ್ರವಾಗಿದ್ದು ಭಾರತ ಮತ್ತು ಅಮೆರಿಕದಲ್ಲಿ ಕಾನೂನುಬದ್ಧವಾಗಿ ಯಾರು ಬೇಕಾದರೂ ಮಾಡಬಹುದಾಗಿದೆ. ಅಂದರೆ ಕೆಲವು ಕಂಪನಿಗಳ ಷೇರುಗಳ ಬೆಲೆ ಕುಸಿಯುತ್ತವೆ ಎಂದು ಅಧ್ಯಯನ, ಸಂಶೋಧನೆ ನಡೆಸುವುದು. ತನ್ನದಲ್ಲದ ಆ ಷೇರುಗಳನ್ನು ದಲ್ಲಾಳಿಗಳ ಮೂಲಕ ಎರವಲು ಪಡೆದು ಸದ್ಯದ ಬೆಲೆಗೆ ಮಾರುವುದು. ನಂತರ ಅವುಗಳ ಬೆಲೆ ಕುಸಿದಾಗ ಕಡಿಮೆ ಬೆಲೆಗೆ ಕೊಂಡು ದಲ್ಲಾಳಿಗಳಿಗೆ ಹಿಂದಿರುಗಿಸುವ ಮೂಲಕ ಲಾಭ ಗಳಿಸುವುದನ್ನು ಶಾರ್ಟ್ ಸೆಲ್ಲಿಂಗ್ ಎನ್ನಲಾಗುತ್ತದೆ. ಉದಾಹರಣೆಯ ಮೂಲಕ ನೋಡುವುದಾದರೆ ಅಆ ಎಂಬ ಕಂಪನಿಯ ಷೇರುಗಳು 1000 ರೂಗೆ ಮಾರಾಟವಾಗುತ್ತಿರುತ್ತವೆ. ವ್ಯಕ್ತಿ ಅಥವಾ ಸಂಸ್ಥೆಯೊಂದು ಆ ಕಂಪನಿಯ ಕುರಿತು ಸಾಕಷ್ಟು ಅಧ್ಯಯನ ನಡೆಸಿ ಮುಂದಿನ ದಿನಗಳಲ್ಲಿ ಅದರ ಷೇರುಗಳ ಬೆಲೆ ಕುಸಿಯುತ್ತದೆ ಎಂದು ಅಂದಾಜಿಸುತ್ತಾರೆ. ಆಗ ಆ ಕಂಪನಿಯ 1000 ರೂ ಬೆಲೆಯ 100 ಷೇರುಗಳನ್ನು ಬ್ರೋಕರ್‌ಗಳ ಮೂಲಕ ಎರವಲು ಪಡೆದು ಮಾರಿ 1 ಲಕ್ಷ ರೂ ಗಳಿಸುತ್ತಾರೆ. ಆನಂತರ ಆ ಕಂಪನಿಯ ಷೇರುಗಳ ಬೆಲೆ 600 ರೂಗಳಿಗೆ ಕುಸಿದ ಸಂದರ್ಭದಲ್ಲಿ ತಾವೇ 60,000 ರೂಗಳಿಗೆ 100 ಷೇರುಗಳನ್ನು ಖರೀದಿಸಿ ದಲ್ಲಾಳಿಗೆ ಹಿಂದಿರುಗಿಸುತ್ತಾರೆ. ಆಗ ಅವರಿಗೆ 40,000 ರೂ ಲಾಭವಾಗುತ್ತದೆ. ಇದನ್ನು ಶಾರ್ಟಿಂಗ್ ಎನ್ನುತ್ತಾರೆ.

ಇದೊಂದು ಜೂಜಿನಂತಿರುತ್ತದೆ ಮತ್ತು ಇಂತಿಷ್ಟು ಸಮಯದಲ್ಲಿ ದಲ್ಲಾಳಿಗೆ ಷೇರುಗಳನ್ನು ಮರಳಿ ನೀಡುವ ಒಪ್ಪಂದವಾಗಿತ್ತದೆ. ಒಂದು ವೇಳೆ ಅವರ ಅಂದಾಜು ತಪ್ಪಿ ಆ ಕಂಪನಿಯ ಷೇರಿನ ಬೆಲೆ ಕುಸಿಯುವ ಬದಲು 1,400 ರೂ ಏರಿಕೆಯಾದಲ್ಲಿ ಶಾರ್ಟ್ ಮಾಡಿದ ವ್ಯಕ್ತಿ ಅಥವಾ ಸಂಸ್ಥೆ ತನ್ನ ಕೈಯಿಂದಲೇ 40,000 ದುಡ್ಡು ಹಾಕಿ ಷೇರುಗಳನ್ನು ಕೊಳ್ಳುವ ಮೂಲಕ ನಷ್ಟಕ್ಕೆ ಸಿಲುಕುವ ಸಂದರ್ಭವೂ ಎದುರಾಗಬಹುದಾಗಿದೆ. ಪ್ರಸ್ತುತ ಹಿಂಡೆನ್‌ಬರ್ಗ್ ಅದಾನಿ ಕಂಪನಿಗೆ ಮಾಡಿರುವುದು ಇದೇ ಶಾರ್ಟಿಂಗ್ ಆಗಿದೆ. ಎರಡು ವರ್ಷಗಳ ಕಾಲ ಸತತ ಅಧ್ಯಯನ ಮಾಡಿದ ಅದು ಅದಾನಿ ಕಂಪನಿಯ ಅಕ್ರಮಗಳ ಕುರಿತು ದಾಖಲೆಗಳನ್ನು ಶೇಖರಿಸಿಟ್ಟುಕೊಂಡಿತ್ತು. ಆನಂತರ ಷೇರು ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಮೂಲಕ ಲಕ್ಷಾಂತರ ಷೇರುಗಳನ್ನು ಎರವಲು ಪಡೆದು ಮಾರಾಟ ಮಾಡಿ ಹಣ ಸಂಗ್ರಹಿಸಿಟ್ಟುಕೊಂಡಿದೆ. ಜನವರಿ 24 ರಂದು ವರದಿ ಬಿಡುಗಡೆ ಮಾಡಿದ ನಂತರ ಪ್ರಪಂಚದಾದ್ಯಂತ ಅದು ಸುದ್ದಿಯಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ಅದಾನಿ ಬಹುತೇಕ ಸಾಲದ ಮೇಲೆಯೇ ಸಾಮ್ರಾಜ್ಯ ಕಟ್ಟಿದ್ದು ಅದರ ಅಡಿಪಾಯವೇ ಅಲ್ಲಾಡುತ್ತಿದೆ ಎಂಬ ಕಥನ ಬಿತ್ತರಿಸಲಾಯಿತು. ಇದರಿಂದ ಭಯಗೊಂಡ ಲಕ್ಷಾಂತರ ಜನ ಏಕಕಾಲದಲ್ಲಿ ಅದಾನಿ ಕಂಪನಿಯ ತಮ್ಮ ಷೇರುಗಳನ್ನು ಮಾರಲು ಮುಂದಾದರು. ಆಗ ಸಹಜವಾಗಿ ಅವುಗಳ ಬೆಲೆ ಕುಸಿಯುತ್ತಾ ಹೋಯಿತು. ಸುಮಾರು ಶೇ. 20%ಗೂ ಹೆಚ್ಚಿನ ಷೇರು ಬೆಲೆಗಳು ಕುಸಿಯುತ್ತಿರುವುದರಿಂದ ಅದೆಲ್ಲವೂ ಹಿಂಡೆನ್‌ಬರ್ಗ್‌ ಕಂಪನಿಗೆ ಲಾಭವಾಗುತ್ತಿದೆ. ಏಕೆಂದರೆ ಹೆಚ್ಚು ಬೆಲೆಗೆ ಮಾರಿರುವ ಅದು ಕಡಿಮೆ ಬೆಲೆ ಕೊಂಡು ದಲ್ಲಾಳಿಗೆ ಹಿಂದಿರುಗಿಸುತ್ತದೆ. ಅಂದರೆ ಅದಾನಿ ಷೇರುಗಳ ಬೆಲೆ ಕುಸಿದಷ್ಟು ಅದರ ಲಾಭ ಹಿಂಡೆನ್‌ಬರ್ಗ್‌ಗೆ ದಕ್ಕುತ್ತಿದೆ. ಹೆಚ್ಚಿನ ಬೆಲೆಗೆ ಮಾರಾಟ ಮತ್ತು ಕಡಿಮೆ ಬೆಲೆ ಕೊಳ್ಳುವುದು ನಡೆಯುತ್ತಿದೆ.

ಇದೇ ಮೊದಲಲ್ಲ
ಬ್ಲೂಮ್‌ಬರ್ಗ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಹಿಂಡೆನ್‌ಬರ್ಗ್ 2020 ರಿಂದ ಈ ರೀತಿಯಲ್ಲಿ ಸುಮಾರು 30 ಕಂಪನಿಗಳನ್ನು ಗುರಿಯಾಗಿಸಿಕೊಂಡು ಶಾರ್ಟಿಂಗ್ ಮಾಡಿದೆ. ಅದು ತನಿಖೆಗಳನ್ನು ಸಾರ್ವಜನಿಕಗೊಳಿಸಿದ ಮರುದಿನವೇ ಆಯಾ ಕಂಪನಿಗಳು ಸರಾಸರಿಯಾಗಿ ತಮ್ಮ ಮೌಲ್ಯದ ಸುಮಾರು 15 ಪ್ರತಿಶತವನ್ನು ಕಳೆದುಕೊಂಡಿವೆ. ಅಂದರೆ ಅವುಗಳಲ್ಲೆಲ್ಲ ಅದು ಲಾಭ ಗಳಿಸಿದೆ. ಟೆಸ್ಲಾ, ಟ್ವಿಟರ್‌ನಂತಹ ಕಂಪನಿಗಳ ಮೇಲೆ ಸಹ ಅದು ಶಾರ್ಟಿಂಗ್ ಮಾಡಿ ಲಾಭ ಗಳಿಸಿದೆ ಎನ್ನಲಾಗಿದೆ. ನಿಕೋಲಾ ಎಂಬ ಕಂಪನಿಯ ಮೇಲೆ ಹಿಂಡೆನ್‌ಬರ್ಗ್ ಶಾರ್ಟಿಂಗ್ ಮಾಡಿತ್ತು. ಹಾಗಾಗಿ ಸುಮಾರು 34 ಬಿಲಿಯನ್ ಅಮೆರಿಕನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದ್ದ ನಿಕೋಲಾ ಕಂಪನಿಯು ಸದ್ಯ 1.3 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಕುಸಿದಿದೆ ಎಂದರೆ ಹಿಂಡೆನ್‌ಬರ್ಗ್ ಕಂಪನಿಯ ಸಂಶೋಧನೆಗಳು, ತಂತ್ರಗಳು ಎಷ್ಟು ಕರಾರುವಕ್ಕಾರಿಗುತ್ತವೆ ಎಂಬುದಕ್ಕೆ ಉದಾಹರಣೆಯಾಗಿದೆ.
ನವೀನ ಹಳೆಯದು