Lake Development: ಅಂದು ಪವಿತ್ರವಾದ ಕೆರೆ, ಇಂದು ಗಬ್ಬೆದ್ದು ನಾರುವ ಕೊಳಚೆ ಪ್ರದೇಶ


ಮುಧೋಳದ ಪರಮ ಪವಿತ್ರ ಶ್ರೀ ದತ್ತನ ಕೆರೆಯ ಕಥೆ ಮತ್ತು ವ್ಯಥೆ. ಕವಿಚಕ್ರವರ್ತಿ ರನ್ನ ನ ಜನ್ಮಭೂಮಿ ಬಾಗಲಕೋಟ ಜಿಲ್ಲೆಯ ಮುಧೋಳ ನನ್ನ ಜನ್ಮಭೂಮಿಯೂ ಹೌದು, ಕಳೆದ 44ವರ್ಷಗಳಿಂದ  ನಾನು ಮುಂಬಯಿಯಲ್ಲಿ ವಾಸಿಸುತ್ತಿದ್ದರೂ ನನ್ನೂರಿನ ಕುರಿತು ನನ್ನ ಮನ ಮಿಡಿಯುತ್ತಿರುತ್ತದೆ ಆದ್ದರಿಂದ ನಾನು ಆಗಾಗ ಮುಧೋಳಕ್ಕೆ ಭೇಟಿ ನೀಡುವದು ವಾಡಿಕೆ. 

ಅಂತೆಯೇ ಇತ್ತೀಚೆಗೆ ಗೆಳೆಯನ ಮನೆಯ ಗೃಹಪ್ರವೇಶದ ನಿಮಿತ್ತ ಸಪತ್ನಿಕವಾಗಿ ಮುಧೋಳಕ್ಕೆ ಹೋದಾಗ ಊರಿನ ದೇಗುಲಗಳ ದರ್ಶನಕ್ಕೆಂದು ಶ್ರೀ ದತ್ತನ ದೇವಸ್ಥಾನಕ್ಕೆ ಹೋದಾಗ ಶ್ರೀ ದತ್ತನ ಕೆರೆಯ ದೈನಾವಸ್ಥೆಯನ್ನು ಕಂಡು ಕರಳು ಚುರ್ರಕ್ ಎಂದಿತಲ್ಲದೆ ಹಲವು ದಶಕಗಳ ಹಿಂದಿನ ಕೆರೆಯ ಪಾವಿತ್ರತೆ  ಹಾಗೂ ಸೌಂದರ್ಯದ ಕುರಿತು ಮೆಲುಕು ಹಾಕತೊಡಗಿದೆ.
ಹಾಗೆ ನೋಡಿದರೆ ನಮ್ಮ ಮುಧೋಳ ಘಟಪ್ರಭೇಯ ತೋಳ್ತತ್ತೇಕ್ಕೆಯಲ್ಲಿ ಬೇಳೆದ,  ಸಮೃದ್ಧ ನೀರಿಗೆ ಹೆಸರಾದ ನಿಸರ್ಗ ದೇವತೆಯ ವರದಾನ ಲಭಿಸಿದ ಗುಡಿದೇಗುಲಗಳ ನಾಡು.

ಜನ ಮನದ ನಾಡಿ ಮಿಡಿತವನ್ನು ಅರಿತ  ಅಂದು ಮುಧೋಳ ಸಂಸ್ಥಾನವನ್ನು ಆಳಿದ  ಘೋರ್ಪಡೆ ಮಹಾರಾಜರು ನಗರದಲ್ಲಿ ಅನೇಕ ಗುಡಿದೇಗುಲಗುಗಳನ್ನು ನಿರ್ಮಿಸುವ ಮೂಲಕ  ಧರ್ಮರಕ್ಷಕರಾಗಿ, ಅನೇಕ ಕೆರೆ ಭಾವಿಗಳನ್ನು ನಿರ್ಮಿಸಿ ಅಂದಿನ ಕಾಲದ ಭಗಿರಥ ಎನಿಸಿಕೊಂಡವರು.

ಕ್ರಮೇಣ ಕಾಲ ಬದಲಾಯಿತು ಆಳ ಅರಸರ ಅರಸೋತ್ತಿಗೆ ಹೋಗಿ ಪ್ರಜೆಗಳದ್ದೆ ಅರಸೋತ್ತಿಗೆ ಪ್ರಾರಂಭವಾಯಿತಾದರೂ ಮುಧೋಳದ ಮಹಾರಾಜರು ಕಟ್ಟಿಸಿದ ಹಲವು ಕೆರೆಗಳನ್ನು ನುಂಗಿ ಹಾಕಿದರೆ ಹಲವು ಕೆರೆಗಳ ವಿನಾಶಕ್ಕೆ ನಾಂದಿ ಹಾಡಿದರು ಅದರಲ್ಲಿಇಂದು ನಗರ ಸಭೆ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯತೆಯಿಂದ ಒಂದು ಕಾಲದ ಸಮೃದ್ಧ ನೀರಿಗೆ ಹೆಸರಾಗಿ ಇಂದು ಕೊಳಚೆ ಪ್ರದೇಶವಾಗಿರುವ ದತ್ತನ ಕೆರೆಯೂ ಒಂದು.

ವಿಶಾಲವಾದ ವಟವೃಕ್ಷದ ನೆರಳಿನಲ್ಲಿ ಗುರು ಶ್ರೀ ದತ್ತರ ಸಾನಿಧ್ಯದಲ್ಲಿಯ ಈ  ಅತ್ಯಂತ ಸಂದರವಾದ ಕೆರೆಗೆ ಘಟಪ್ರಭಾ ನದಿಗೆ ಕಾಲುವೆಯ ಮುಖಾಂತರ ಸಂಪರ್ಕ ಇದ್ದುದರಿಂದ ಈ ಕೆರೆಯಲ್ಲಿ ವಿಪುಲವಾದ ನೀರಿನ ಸಂಗ್ರಹವಾಗುತ್ತಿತ್ತು ಅಷ್ಟೇ ಅಲ್ಲ ಕೆರೆಯ ಸಂಪರ್ಕ ನಗರದ ಹಲವು ಪುರಾತನ ಭಾವಿಗಳಿಗೂ ಇದ್ದುದರಿಂದ ಕೆರೆಯ ನೀರು ಭಾವಿಗಳಿಗೂ ತಲುಪುತಿತ್ತು. ನಗರದ ಜನತೆ ಕುಡಿಯುವ ನೀರಿಗಾಗಿ ಕೆರೆಯ ನೀರನ್ನೆ ಉಪಯೋಗಿಸುತ್ತಿದ್ದರು.

ಅಷ್ಟೇ ಅಲ್ಲ ಶ್ರೀ ದತ್ತನ ದರ್ಶನಕ್ಕೆ ಭಕ್ತರು ಬಂದಾಗ ದೇಗುಲದ ಬಾಗಿಲು ಮುಚ್ಚಿದ್ದರೆ ಭಕ್ತರು ಕೆರೆಯ ನೀರನ್ನೆ ಶ್ರೀ ದತ್ತಾತ್ರೇಯನ ಪವಿತ್ರ ತೀರ್ಥ ಎಂದು ಭಾವಿಸಿ ಸೇವೆಸುತ್ತಿದ್ದರು.

ಕಾಲ ಬದಲಾಯಿತು 2000ನೇ ಇಸವಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ಇದ್ದಾಗ್ಯೂ ಪುರಸಭೆಯಲ್ಲಿ ಜನತಾ ಪರಿವಾರದ್ದೆ ಸರಕಾರ, ರಾಮಕೃಷ್ಣ ಹೆಗಡೆ ಅವರ ಅಪಾರವಾದ ಅಭಿಮಾನಿಬಳಗವೇ ಮುಧೋಳದಲ್ಲಿತ್ತು. ಅಂದು ಅವರು ಉದ್ಘಾಟಿಸಿದ  ಕೆರೆಯ ಶುದ್ದಿಕರಣ ಹಾಗೂ ಪರಿಸರದಲ್ಲಿ ಉದ್ಯಾನವನ, ಕೆರೆಯಲ್ಲಿ ಬೋಟೀಂಗ್ ವ್ಯವಸ್ಥೆ ಹಾಗೂ ಮಕ್ಕಳಿಗೆ  ಕುದುರೆ ಸವಾರಿ ಮಾಡಿಸಿದ್ದ ಅಂದಿನ ಪುರಸಭೆ ನಂತರದ ದಿನಗಳಲ್ಲಿ  ವ್ಯವಸ್ಥಿತವಾಗಿ ನೋಡಿ ಕೊಳ್ಳುವಲ್ಲಿ ವಿಫಲವಾಗಿದ್ದೆ ಇಂದು ಈ ದತ್ತನ ಕೆರೆಯ ವಿನಾಶಕ್ಕೆ ಕಾರಣವಾಯಿತು ಅಂದರೆ ತಪ್ಪಾಗಲಾರದು.

ದತ್ತನ ಕೆರೆಯ ಪರಿಸರದ ವ್ಯಾಪಕವಾಗಿ ನಡೆದ ಒತ್ತುವರಿ, ಅನಧಿಕೃತ ಕಟ್ಟಡಗಳ ನಿರ್ಮಾಣ ಹಾಗೂ ಮನೆಗಳ ಕೊಳಚೆ ನೀರು ನೇರವಾಗಿ ಕೆರೆಗೆ ಸೇರತೋಡಗಿದ್ದರಿಂದ ಕೆರೆಯ ಪವಿತ್ರ ನೀರು ಕಲ್ಮಶಗೊಂಡು ಕೊಳಚೆ ಪ್ರದೇಶವಾಗಿ ಮಾರ್ಪಾಟಾಗಿದ್ದು ಸ್ಥಳೀಯ ನಗರ ಸಭೆ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯತೆಯೇ ಕಾರಣವಾಗಿದೆ.
ಅಂದಹಾಗೆ ಈ ಕೆರೆಯ ಶುದ್ದಿಕರಣ ಕಾರ್ಯದ ಕುರಿತು ಅನೇಕ ಸಲ ರಾಜಕೀಯ ಮುಖಂಡರು ಹಾಗೂ ನಗರ ಸಭೆಯವರು ಭೂಮಿ ಪೂಜೆ ನಡೆಸಿ ಮಾಧ್ಯಮಗಳಲ್ಲಿ ಪೋಜು ನೀಡಿದ್ದಾರೆ ಆದರೆ ಕಾರ್ಯ ಮಾತ್ರ ಶೂನ್ಯ .

ಆದರೆ ಒಂದು ಸಮಾಧಾನಕರ ಸಂಗತಿ ಎಂದರೆ  ಈ ಹಿಂದೆ ನಗರದ ಬಿಜೆಪಿಯ ಯುವಕರು ಈ ಕೆರೆಯ ಸ್ವಚ್ಛತೆಗಾಗಿ ಅಪಾರವಾಗಿ ಶ್ರಮಿಸಿದ್ದು ಪ್ರಶಂಸನೀಯ.

ರಾಜ್ಯದಲ್ಲಿ ಯಾವದೆ ಪಕ್ಷದ ಸರಕಾರ ಬರಲಿ ನಮ್ಮ ಮುಧೋಳ ಕ್ಷೇತ್ರಕ್ಕೆ ಕೆಂಪು ಗೂಟದ ಗಾಡಿ ಫಿಕ್ಸ ಆದರೂ ಈ  ಜನಪ್ರತಿನಿಧಿಗಳು ಈ ಕೆರೆಯ ವಿಷಯವನ್ನು ಎಕೆ ಗಂಭೀರವಾಗಿ ಪರಿಗಣಿಸಲಿಲ್ಲಾ? ಎಂಬುವದೆ ಪ್ರಶ್ನೆಯಾಗಿದೆ. ಈ ಕೆರೆಯ ವಿನಾಶಕ್ಕೆ ನಮ್ಮ ಮುಧೋಳ ಜನತೆಯ ನಮಗ್ಯಾಕ ಬೇಕರೀ ಪ್ರವೃತ್ತಿಯ ಒಂದು ಪ್ರಮುಖ  ಕಾರಣವಾಗಿದ್ದು, ನಮ್ಮ ಕಾಲಡಿಯಲ್ಲಿಯೇ ವಿಪುಲವಾದ ಜಲರಾಶಿ ಇದ್ದರೂ ಕುಡಿಯುವ ನೀರಿಗಾಗಿ ಪರದಾಡು ಪ್ರಸಂಗ ಬಂದಿದ್ದು, ಇದೆ ರೀತಿ ನಿರ್ಲಕ್ಷ್ಯಮನೋಭಾವನೆ ಮುಂದುವರೆದರೆ ಹನಿ ಹನಿ ನೀರಿಗಾಗಿ ಪರದಾಡುವ ಪ್ರಸಂಗ ಬರಬಹುದಾಗಿದೆ.

ಕೆರೆಗಳ ಸಂರಕ್ಷಣೆ ಹಾಗೂ ಕೆರೆಗಳಲ್ಲಿ ನೀರು ತುಂಬುವ ರಾಜ್ಯ ಸರಕಾರದ ಅನೇಕ ಯೋಜನೆಗಳು ಇವೆ ಎಂದು ಕೇಳಿದ್ದೇನೆ ,ಆ ಯೋಜನೆಗಳಿಗೆ ದತ್ತನ ಕೆರೆ ಅನ್ವಯಿಸುವದಿಲ್ಲವೇ?

ಅಂದು ನಗರದಲ್ಲಿ ಆರು ಕೆರೆಗಳು ಇದ್ದವು ಆದರೆ ಈಗ ಕೇವಲ ಮೂರು ಕೆರೆಗಳು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದು ಮುಧೋಳ ಜನತೆಯ ನಮಗ್ಯಾಕ ಬೇಕರೀ ಪ್ರವೃತ್ತಿ  ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಮನೋಭಾವನೆ ಮುಂದುವರೆದರೆ ಅಸ್ತಿತ್ವದಲ್ಲಿದ್ದ ಮೂರು ಕೆರೆಗಳು ಒತ್ತುವರಿಯಾಗಿ ಆ ಸ್ಥಳದಲ್ಲಿ ಬೃಹತ್ ಕಟ್ಟಡಗಳು ನಿರ್ಮಾಣವಾದರೆ ಆಶ್ಚರ್ಯ ಪಡಬೇಕಾಗಿಲ್ಲಾ. 
ಮುಧೋಳದ ಮಹಾಜನತೇಯೇ ಈಗಲಾದರೂ ಎಚ್ಚರವಾಗಿರಿ, ನಿಮಗಾಗಿ ಅಲ್ಲವಾದರೂ ನಿಮ್ಮ ಮುಂದಿದೆ ಪೀಳಿಗೆಗಾಗಿಯಾದರೂ ಜಾಗೃತರಾಗಿ ನಗರದ ಕೆರೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕಾರ್ಯ ಮಾಡಿ ಇಲ್ಲದಿದ್ದರೆ ನಿಮ್ಮ ಮುಂದಿನ ಪೀಳಿಗೆಗೆ ಹನಿ ನೀರಿಗಾಗಿ ಪರದಾಡುವ ಪ್ರಸಂಗ ಬಂದರೆ ನಿಮಗೆ ಹಿಡಿ ಶಾಪ ಹಾಕದೇ ಇರಲಾರದು.

ಗುರುರಾಜ್ ಪೋತನಿಸ್✍️

ಕೆಳಗಿನ ವಿಡಿಯೋದಲ್ಲಿ ದತ್ತ ಕೆರೆಯ ಸದ್ಯದ ಸ್ಥಿತಿಯನ್ನು ನೋಡಬಹುದು

ನವೀನ ಹಳೆಯದು