ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ನೀರನ್ನು ಎತ್ತಿಕೊಂಡು ನೀರಾವರಿಗೆ ಬಳಸಿಕೊಳ್ಳಲು ನೀಡಿರುವ ಪರವಾನಿಗೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ನೀರು ಎತ್ತುತ್ತಿರುವುದನ್ನು ಸ್ಥಗಿತಗೊಳಿಸಿ ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಮುಖ್ಯ ಅಭಿಯಂತರ ಎಚ್.ಸುರೇಶ ಆದೇಶ ಹೊರಡಿಸಿದ್ದಾರೆ.
ಜಲಾಶಯದಲ್ಲಿ ಇರುವ ನೀರನ್ನು ಕುಡಿಯುವ ನೀರು ಹಾಗೂ ಇತರ ತುರ್ತು ಅವಶ್ಯಕತೆಗಳ ಸಲುವಾಗಿ ಹಾಗೂ ಮುಂಬರುವ 2023 ರ ಜೂನ್ ಅಂತ್ಯದವರೆಗೆ ಆಲಮಟ್ಟಿ ಜಲಾಶಯ ಅವಲಂಬಿತ ನಗರ ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯುವ ನೀರನ್ನು ಕಾಯ್ದಿರಿಸಬೇಕಾಗಿದೆ. ಆಲಮಟ್ಟಿ ಜಲಾಶಯದಲ್ಲಿ ಹಿನ್ನೀರನ್ನು ರೈತರು ಪಂಪುಗಳ ಮೂಲಕ ಕೃಷಿಗೆ ಬಳಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ನಿತ್ಯ ಜಲಾಶಯದಲ್ಲಿ 700 ರಿಂದ 1025 ಕ್ಯೂಸೆಕ್ ದರದಲ್ಲಿ ನೀರಿನ ಕೊರತೆಯಾಗುವುದನ್ನು ಪರಿಗಣಿಸಿ ಮುಂಬರುವ ಜೂನ್ 2023ರ ಅಂತ್ಯದವರೆಗೆ ಆಲಮಟ್ಟಿ ಜಲಾಶಯದ ನೀರನ್ನು ಕುಡಿಯುವ ನೀರಿಗಾಗಿ ಸಂಗ್ರಹಿಸುವ ಅವಶ್ಯಕತೆ ಇರುವುದರಿಂದ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಪಂಪುಗಳ ಮೂಲಕ ನೀರು ಎತ್ತುತ್ತಿರುವುದನ್ನು ಸ್ಥಗಿತಗೊಳಿಸಲು ಹಾಗೂ ನೀರು ಎತ್ತುವುದಕ್ಕಾಗಿ ರೈತರು ಸಲ್ಲಿಸುವ ಪ್ರಸ್ತಾವನೆಗಳನ್ನು ಅನುಮೋದನೆ ನೀಡದಿರಲು ತೀರ್ಮಾನಿಸಿರುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.