ಬದಾಮಿ: ಸಿಡಿಲಿನ ಹೊಡೆತಕ್ಕೆ ಮನೆಯ ಮಣ್ಣಿನ ಮೇಲ್ಚಾವಣಿ ಕುಸಿದು ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ನಡೆದಿದೆ.
ಗುರುವಾರ ರಾತ್ರಿ 11.30ರ ಸುಮಾರಿಗೆ ಜೋರಾಗಿ ಸಿಡಿಲು ಬಡಿದು, ಮನೆಯ ಚಾವಣಿ ಒಮ್ಮಿಂದೊಮ್ಮೆಗೇ ಉದುರಿಬಿದ್ದು, ಯಂಕುಬಾಯಿ ಕುಲಕರ್ಣಿ (79), ಶಾರದಾ ಪತ್ತಾರ (61) ಪ್ರಾಣ ಕಳೆದುಕೊಂಡರು.
ಈ ಮಹಿಳೆಯರಿಬ್ಬರೂ ಅಕ್ಕಪಕ್ಕದ ಮನೆಯವರಾಗಿದ್ದು, ರಾತ್ರಿ ಒಂದೇ ಮನೆಯಲ್ಲಿ ಮಲಗುತ್ತಿದ್ದರು. ಶಾರದಾ ಪತ್ತಾರ ಅವರಿಗೆ ಬೇರೆ ಮನೆ ಇದ್ದರೂ ದಿನಂಪ್ರತಿ ಯಂಕುಬಾಯಿ ಕುಲಕರ್ಣಿ ಅವರ ಮನೆಗೇ ಬರುತ್ತಿದ್ದರು ಎನ್ನಲಾಗಿದೆ. ಆಗಲೇ ದುರಂತ ನಡೆದು ಇಬ್ಬರೂ ಮೃತಪಟ್ಟಿದ್ದಾರೆ.
ಗುರುವಾರ ರಾತ್ರಿ ಈ ಭಾಗದಲ್ಲಿ ಸಿಡಿಲು ಗುಡುಗಿನ ಅಬ್ಬರವಿತ್ತು. ಮಳೆಯೂ ಜೋರಾಗಿ ಬಿದ್ದಿತ್ತು. ಈ ವೇಳೆ ಮಣ್ಣಿನಿಂದ ಮಾಡಿದ ಮೇಲ್ಚಾವಣಿ ಸಿಡಿಲಿಗೆ ತತ್ತರಿಸಿ ಕುಸಿದುಬಿದ್ದಿದೆ. ಮೇಲ್ಚಾವಣಿಯ ಮಣ್ಣು ಮತ್ತು ಕಲ್ಲು ಕೆಳಗೆ ಮಲಗಿದ್ದ ಯಂಕುಬಾಯಿ ಮತ್ತು ಶಾರದಾ ಅವ್ರ ಮೇಲೆ ಬಿದ್ದಿದೆ. ಪರಿಣಾಮವಾಗಿ ಅವರು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕೂಡಲೇ ಸ್ಥಳೀಯರು ಧಾವಿಸಿ ರಕ್ಷಣೆಗೆ ಪ್ರಯತ್ನ ನಡೆಸಿದರು. ಕೊನೆಗೆ ಅಗ್ನಿಶಾಮಕ ದಳ ಸಿಬ್ಬಂದಿಗಳ ಸಹಾಯದಿಂದ ಶವಗಳನ್ನು ಹೊರತೆಗೆಯಲಾಗಿದೆ.
ಬಾದಾಮಿ ತಾಲೂಕು ಆಸ್ಪತ್ರೆಯಲ್ಲಿ ಮೃತ ಮಹಿಳೆಯರ ಶವ ಪರೀಕ್ಷೆ ನಡೆದಿದ್ದು, ಕುಟುಂಬದವರಿಗೆ ಬಿಟ್ಟುಕೊಡಲಾಗಿದೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.