ಮುಧೋಳ: ಬಾಗಲಕೋಟೆಯ ಏಕೈಕ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತೊಮ್ಮೆ ಸಂಕಷ್ಟದ ಸುಳಿಗೆ ಸಿಲುಕುವ ಸಾಧ್ಯತೆ ಇದ್ದು ಕಾರ್ಖಾನೆಯ ಹಾಲಿ ಅಧ್ಯಕ್ಷ ರಾಮಣ್ಣ ತಳೇವಾಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಕುಲಕರ್ಣಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ. ಸರ್ಕಾರ ಹಾಗೂ ಸ್ಥಳೀಯ ಶಾಸಕರ ಬದಲಾವಣೆಯಿ೦ದ ಕಾರ್ಖಾನೆ ಮುಂದುವರೆಸುವಲ್ಲಿ ಸಹಕಾರ ಸಿಗದೇ ಹೋಗಬಹುದು ಎಂಬ ಆತಂಕದಿಂದ ರಾಜೀನಾಮೆ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.
ಸದ್ಯ ಕಾರ್ಖಾನೆ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಸಂಬಂಧದಲ್ಲಿ ಕಾಣದ ಸಾಮರಸ್ಯ ಮತ್ತು ಇತ್ತೀಚಿನ ಮುಧೋಳ ಮೀಸಲು ಕ್ಷೇತ್ರದ ಚುನಾವಣೆಯಲ್ಲಿ ನಡೆದ ಬೆಳವಣಿಗೆಗಳು ಫಲಿತಾಂಶದ ನಂತರದಲ್ಲಿನ ಬೆಳವಣಿಗೆಗಳ ಕಾರಣಕ್ಕೆ ಕಾರ್ಖಾನೆ ಮುನ್ನಡೆಸುವಲ್ಲಿ ಸಮಸ್ಯೆ ಯಾಗಬಹುದು ಎಂದು ಹೇಳಿದರು.
ಸಕ್ಕರೆ ಕಾರ್ಖಾನೆಯಲ್ಲಿ ಇನ್ನು 84 ಸಾವಿರ ಕ್ವಿಂಟಲ್ ಸಕ್ಕರೆ ದಾಸ್ತಾನು ಇದ್ದು ಅಂದಾಜು 28 ಕೋಟಿ ಮೌಲ್ಯದಷ್ಟಿದ್ದು, ರೈತರ ಬಾಕಿ ಸಹ 26 ಕೋಟಿಯಷ್ಟು ಕೊಡಬೇಕಿದೆ ಎಂದು ಹೇಳಿದ ತಳೇವಾಡ ಸ್ಥಳೀಯವಾಗಿ ನಮ್ಮವರು ಶಾಸಕರು ಇಲ್ಲದೆ ಹೋಗಿರುವುದಕ್ಕೆ ಸಹಕಾರ ಸಿಗುವುದು ದುರ್ಲಬ ಎಂದು ಹೇಳಿದರು.