ಉತ್ತರ ಕರ್ನಾಟಕದಲ್ಲಿ ಬರುವ ಗ್ರಾಮೀಣ ಹಬ್ಬಗಳಲ್ಲಿ ವಿಶೇಷತೆ ಹಾಗೂ ವೈಶಿಷ್ಟತೆ ಹೊಂದಿರುವ ಗುಳ್ಳವ್ವನ ಹಬ್ಬ ಮಂಗಳವಾರದಿಂದ ಪ್ರಾರಂಭಗೊಳ್ಳಲಿದೆ.
ಸಂಸ್ಕೃತಿಯ ಸಂಕೇತವಾಗಿರುವ ಹಬ್ಬ. ಅದರಲ್ಲೂ ಹೆಣ್ಣು ಮಕ್ಕಳ ಅಚ್ಚು ಮೆಚ್ಚಿನ ಹಬ್ಬವಾಗಿದೆ. ಆಷಾಡ ಮಾಸದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಗುಳ್ಳವ್ವನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಗುಳ್ಳವ್ವ, ಗುಳಕವ್ವ, ಗೋಲಕವ್ವ ಎಂಬ ವಿವಿಧ ಹೆಸರಿನಿಂದ ಕರೆಸಿಕೊಳ್ಳುವ ಗುಳ್ಳವ್ವ ಜನಪದರ ದೇವತೆಯಾಗಿದ್ದಾಳೆ. ಗುಳ್ಳವ್ವ ಆಷಾಢದ ಮೊದಲನೆ ಮಂಗಳವಾರದಿಂದ ಸುಮಾರು ಒಂದು ತಿಂಗಳಕಾಲ (4 ವಾರ) ಪ್ರತಿ ಮಂಗಳವಾರ ಮಣ್ಣಿನಿಂದ ಮಾಡಿದ ಗುಳ್ಳವ್ವನ ತಂದು ಶೃಂಗಾರ ಮಾಡಿ ಪೂಜೆ ಮಾಡುತ್ತಾರೆ.
ಅಂದು ಸಂಜೆ ಚಿಕ್ಕ ಮಕ್ಕಳು ಆರತಿ ತೆಗೆದುಕೊಂಡು ಮನೆ ಮನೆಗೆ ಹೋಗಿ ಗುಳ್ಳವನ ಹಾಡುಗಳನ್ನು ಹಾಡಿ ಆರತಿ ಎತ್ತುತ್ತಾರೆ. ಮರುದಿನ (ಬುಧವಾರ) ಮನೆಗಳಲ್ಲಿ ಹಲವಾರು ಬಗೆಯ ಭಕ್ಷ
ಭೋಜನಗಳನ್ನು ತಯಾರಿಸಿಕೊಂಡು ತೋಟ, ಉದ್ಯಾನವನ, ದೇವಸ್ಥಾನ, ನದಿ ಹಾಗೂ ಕೆರೆಯ ದಡಗಳಲ್ಲಿ ಹೋಗಿ
ಊಟ ಮಾಡಿ ಸಂಜೆವರೆಗೆ ಹರಟೆ ಹೊಡೆದು ಕಾಲಕಳೆಯುವ ಸಂಪ್ರದಾಯ ಈಗಲೂ ಗ್ರಾಮೀಣ ಪ್ರದೇಶದಲ್ಲಿ ಕಂಡು ಬರುತ್ತಿದೆ.
ಗುಳ್ಳವ್ವ ಫಲವತ್ತತೆಯ ದೇವತೆ, ಆಷಾಡ ಮಾಸದಲ್ಲಿ ಆಕೆಯ ಪೂಜೆ ಮಾಡುವುದರಿಂದ ಮಳೆ, ಬೆಳೆ ಸಮೃದ್ಧಿಯಾಗಿ ಬದುಕು ಸುಖಮಯವಾಗುತ್ತದೆ ಎಂಬ ನಂಬಿಕೆ ಜನಪದರದು. ಜನಪದದ ದೈವ ಮತ್ತು ಧರ್ಮ ಎರಡು ನಂಬಿಕೆಯೇ. ಆದ್ದರಿಂದ ಮಣ್ಣಿನಿಂದ ಗುಳ್ಳವ್ವನ ಮೂರ್ತಿ ಮಾಡುತ್ತಾರೆ.
ಆಕೆ ಅಮೂರ್ತ ದೇವತೆ. ಭೂಮಿ ಗೋಲಾಗಿರುವುದರಿಂದ ಆಕೆಗೆ ಗೋಲವ್ವ ಹೆಸರಿನಿಂದ ಕರೆಯುತ್ತಿದ್ದರು ಅದು ಬರ ಬರುತ್ತಾ ಗುಳ್ಳವ ಎಂದು ಆಗಿದ್ದು, ಇಡೀ ಜಗತ್ತಿನ ಫಲವತ್ತತೆಯ ನಂಬಿಕೆ ಗುಳ್ಳವ ದೇವತೆ.’