ಮುಧೋಳ: ನಷ್ಟ ಹಾಗೂ ಸಾಲದ ಸುಳಿಯಲ್ಲಿರುವ ರನ್ನ ಕಾರ್ಖಾನೆಗೆ ಆಡಳಿತ ಮಂಡಳಿ ರಾಜೀನಾಮೆ ನೀಡಿದ ಹಿನ್ನೆಲೆ. ಜಮಖಂಡಿ ಉಪವಿಭಾಗಾಧಿಕಾರಿ ಅಶೋಕ ಕಾನಗೌಂಡ ಅವರನ್ನು 6 ತಿಂಗಳ ಅವಧಿಗೆ ವಿಶೇಷ ಅಧಿಕಾರಿಯನ್ನಾಗಿ ಕಬ್ಬು ಅಭಿವೃದ್ಧಿ ಆಯುಕ್ತರಾದ ಶ್ರೀ ಶಿವಾನಂದ ಕಲಕೇರಿ ಆದೇಶಿಸಿದ್ದಾರೆ’ ಎಂದು ಅಬಕಾರಿ ಸಚಿವ ಹಾಗೂ ಮುಧೋಳ ಶಾಸಕ ಆರ್.ಬಿ.ತಿಮ್ಮಾಪುರ ತಿಳಿಸಿದ್ದಾರೆ.
ಮುಧೋಳ ತಾಲ್ಲೂಕಿನ ತಿಮ್ಮಾಪುರ ಗ್ರಾಮದಲ್ಲಿರುವ ರನ್ನ ಕಾರ್ಖಾನೆಯಲ್ಲಿ ಮಂಗಳವಾರ ಸಂಜೆ ಕಾರ್ಮಿಕರ ಹಾಗೂ ಅಧಿಕಾರಿಗಳ ಸಭೆ ನಡೆಸಿ ಸಚಿವರು ಮಾತನಾಡಿದರು.
2022-23 ಸಾಲಿನಲ್ಲಿ 4,02,084 ಟನ್ ಕಬ್ಬು ನುರಿಸಿ 4,43,150 ಕ್ವಿಂಟಲ್ ಸಕ್ಕರೆ ಉತ್ಪಾದನೆ ಮಾಡಲಾಗಿದೆ. ಕಾರ್ಖಾನೆಯಲ್ಲಿರುವ ಸಕ್ಕರೆಯನ್ನು ಎರಡು ದಿನದಲ್ಲಿ ಟೆಂಡರ್ ಮೂಲಕ ಮಾರಾಟ ಮಾಡಿ ರೈತರ ಕಬ್ಬಿನ ಬಾಕಿ ಹಣ ಸಂದಾಯ ಮಾಡಲಾಗುವುದು ಎಂದು ಸಚಿವರು ವಿವರಿಸಿದರು.
ಕಾರ್ಮಿಕರಿಗೆ ಸದ್ಯ ₹ 2.10 ಕೋಟಿ ಪಿಎಫ್ ಹಣ ಹಾಗೂ 3 ತಿಂಗಳ ವೇತನ ಪಾವತಿಸಲಾಗುವುದು. ಸರ್ಕಾರದಿಂದ ಅನುದಾನ ತಂದು ಕಾರ್ಖಾನೆ ಪ್ರಾರಂಭಿಸ ವಿಶೇಷ ಪ್ರಯತ್ನವನ್ನು ಮಾಡಲಾಗುತ್ತಿದೆ. ಕಾರ್ಮಿಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ಕಾರ್ಖಾನೆ ಎಂ.ಡಿ ಮಲ್ಲಿಕಾರ್ಜುನ ಪೂಜಾರ, ಜಮಖಂಡಿ ಉಪವಿಭಾಗಧಿಕಾರಿ ಅಶೋಕ ಕಾನಗೌಂಡ, ಮುಧೋಳ ತಹಶೀಲ್ದಾರ್ ವಿನೋದ ಹತ್ತಳ್ಳಿ, ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಈರನಗೌಡ ಪಾಟೀಲ ಪದಾಧಿಕಾರಿಗಳು ಇದ್ದರು.