ಪ್ರಶೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ಹುಕ್ಕೇರಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುತ್ತಿದೆ ಹಾಗೂ ಯೋಜನೆಯ ಅನುಷ್ಠಾನಕ್ಕಾಗಿ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಸೂಕ್ತ ನಿರ್ದೇಶನ ನೀಡಲಾಗುತ್ತಿದೆ ಎಂದರು.
ಯೋಜನೆಗೆ 2010-11ರಲ್ಲಿ ಅನುಮೋದನೆ ಸಿಕ್ಕಿದೆ. 2,517 ಎಕರೆ ಜಮೀನು ಅವಶ್ಯಕತೆಯಿದ್ದು, 2,481 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಶೇ.95ರಷ್ಟು ಭೂಸ್ವಾಧೀನ ಆಗಿದೆ. ಭೂಸ್ವಾಧೀನಕ್ಕೆ 525 ಕೋಟಿ ರೂ. ವೆಚ್ಚ ಮಾಡಲಾಗಿದೆ. ನಿರ್ಮಾಣ ಕಾಮಗಾರಿಗೆ 353 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆರಂಭದಲ್ಲಿ ಯೋಜನಾ ವೆಚ್ಚ 816 ಕೋಟಿ ರೂ. ಇತ್ತು. ಈ ಪರಿಷ್ಕೃತ ಯೋಜನಾ ವೆಚ್ಚ 1,530 ಕೋಟಿ ರೂ. ಆಗಿದೆ. ನೈರುತ್ಯ ರೈಲ್ವೆಯ ಬಾಗಲಕೋಟೆ-ಖಜ್ಜಿಡೋಣಿ ನಡುವಿನ 30 ಕಿ.ಮೀ ಕಾಮಗಾರಿ ಪೂರ್ಣಗೊಳಿಸಿ, ಖಜ್ಜಿಡೋಣಿ-ಲೋಕಾಪುರ 9 ಕಿ.ಮೀ. ಕಾಮಗಾರಿ 2023ರ ಅಂತ್ಯದ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಲೋಕಾಪುರ-ಯಾದವಾಡ 21 ಕಿ.ಮೀ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಯಾದವಾಡ-ಜಗದಾಲ್ ರಸ್ತೆ 45 ಕಿ.ಮೀ ಟೆಂಡರ್ ಈ ವರ್ಷ ಆಗಸ್ಟ್‌ನಲ್ಲಿ ಕರೆಯಲು ನಿರ್ಧರಿಸಲಾಗಿದೆ. ಜಗದಾಲ್ ರಸ್ತೆ-ಹರುಗೇರಿ-ಕುಡುಚಿ 37 ಕಿ.ಮೀ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಜಮೀನಿನ ಹಸ್ತಾಂತರವಾದ ನಂತರ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.