ನವದೆಹಲಿ: ಮಳೆಯ ಹೊಡೆತದಿಂದ ಇಳುವರಿ ಕುಸಿದು ದೇಶಾದ್ಯಂತ ಟೊಮೇಟೊ ಬೆಲೆ ಗಗನಕ್ಕೇರಿ ಜನರ ಸಂಕಷ್ಟ ಹೆಚ್ಚಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಬಹುತೇಕ ಕಡೆ ನೂರರಿಂದ 250 ರೂ.ಗಳವರೆಗೂ ಬೆಲೆ ಏರಿದ್ದರೆ, ಮಳೆ ಅಧಿಕವಾಗಿರುವ ಕೆಲವೆಡೆ 250 ರಿಂದ 300 ರೂ. ಗಳವರೆಗೆ ಟೊಮೇಟೊ ಮಾರಾಟವಾಗುತ್ತಿರುವುದು ಗಮನಾರ್ಹ.
ಆದರೆ ಕೇಂದ್ರ ಮಧ್ಯಪ್ರವೇಶಿಸಿ ದಕ್ಷಿಣದ ರಾಜ್ಯಗಳ ಮಂಡಿಗಳಿಂದ ಟೊಮೇಟೊ ಖರೀದಿಸಿ ಬೆಲೆ ವಿಪರೀತವಾಗಿರುವ ಉತ್ತರದ ರಾಜ್ಯಗಳಲ್ಲಿ ಜನರಿಗೆ ವಿತರಿಸುತ್ತಿದೆ. ದೆಹಲಿಯಲ್ಲಿ ಶುಕ್ರವಾರದಿಂದ ಕೆಜಿ ಟೊಮೇಟೊ 90 ರೂ.ಗಳಲ್ಲಿ ನೀಡಲಾಗುತ್ತಿದೆ. ಇನ್ನೊಂದು ವಾರದಲ್ಲಿ ಟೊಮೇಟೊ ದರ ನಿಯಂತ್ರಣಕ್ಕೆ ಬರಲಿದೆ ಎಂಬುದು ಕೇಂದ್ರದ ಅಭಯ
ಈ ಮಧ್ಯೆ, ಟೊಮೇಟೋ ಜೊತೆಗೆ ಮತ್ತೊಂದು ತರಕಾರಿ ಬೆಲೆಯೂ ದುಪ್ಪಟ್ಟಾಗುವ ಸೂಚನೆಯಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯ ಹೊಡೆತಕ್ಕೆ ಬಹುತೇಕರಾಜ್ಯಗಳಲ್ಲಿ ಮತ್ತೊಂದು ಅತ್ಯಗತ್ಯ ಬಳಕೆ ತರಕಾರಿ ಈರುಳ್ಳಿ ಉತ್ಪಾದನೆ ಕುಸಿಯಲಿದ್ದು, ಇನ್ನೆರಡು ತಿಂಗಳಲ್ಲಿ ಟೊಮೇಟೋದಂತೆ ಈರುಳ್ಳಿ ಬೆಲೆಯೂ ನೂರು, 150 ರೂ.ಗಳಿಗೆ ಏರುವ ಸಾಧ್ಯತೆಯಿದೆ ಎಂಬ ವರದಿ ಜನರನ್ನು ತಲ್ಲಣಗೊಳಿಸಿದೆ.
ರಾಷ್ಟ್ರೀಯ ಸರಕು ನಿರ್ವಹಣಾ ಸೇವೆಗಳ ಸಂಸ್ಥೆಯ ಮುಖ್ಯಸ್ಥ ಸಂಜಯ್ ಗುಪ್ತಾ ಪ್ರಕಾರ ಹಾಳಾಗಿದೆ. ಕೆಲವೆಡೆ ಮಳೆಯ ಕೊರತೆಯಿಂದಾಗಿ ಉತ್ಪಾದನೆ ತೀವ್ರವಾಗಿ ಕುಸಿದಿರುವುದರಿಂದ ಈ ವರ್ಷದ ಅಕ್ಟೋಬರ್-ನವೆಂಬರ್ ಹೊತ್ತಿಗೆ ಈರುಳ್ಳಿ ಬೆಲೆಯೂ ಭಾರಿ ಪ್ರಮಾಣದಲ್ಲಿ ಹೆಚ್ಚಳಗೊಂಡು ಗ್ರಾಹಕರ ಮೇಲೆ ಮತ್ತೊಂದು ಹೊರಬೀಳಲಿದೆ.
ತನ್ನ ಗೋದಾಮುಗಳಿಂದ ಮೀಸಲು ದಾಸ್ತಾನಿನಿಂದ ಈರುಳ್ಳಿಯನ್ನು ದೇಶಾದ್ಯಂತ ಕೇಂದ್ರ ವಿತರಿಸುತ್ತಿರುವುದರಿಂದ ಸದ್ಯ ಬೆಲೆ ನಿಯಂತ್ರಣದಲ್ಲಿದೆ. ಆದರೆ ದಾಸ್ತಾನು ಮುಗಿದರೆ ಕೊರತೆ ಬಹಳವಾಗಿ ಬೆಲೆ ಏರಿಕೆ ಅನಿವಾರ್ಯವಾಗಲಿದೆ ಎಂಬುದು ಅವರ ಅಭಿಪ್ರಾಯ, ಈರುಳ್ಳಿ ಉತ್ಪಾದನೆ ಹೆಚ್ಚಿರುವ ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಇದರ ಪರಿಣಾಮ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಜನರಿಗೆ ಅನುಭವಕ್ಕೆ ಬರಲಿದೆ.
ಅಲ್ಲದೆ, ಮಳೆಯ ಹೊಡೆತಕ್ಕೆ ಚಳಿಗಾಲದ ಈರುಳ್ಳಿ ಉತ್ಪಾದನೆ ಮೇಲೆ ದುಷ್ಪರಿಣಾಮ ಬೀರಿದ್ದು, ಮುಂದಿನ ದಿನಗಳಲ್ಲಿ ಕೊರತೆ ಹೆಚ್ಚಾಗಲಿದೆ. ಈರುಳ್ಳಿ ಬೇರುಮೂಲದ ತರಕಾರಿಯಾಗಿರುವುದರಿಂದ ಮಳೆ-ಪ್ರವಾಹದಿಂದ ಹೊಲಗಳು ಜಲಮಯವಾದ ಕಾರಣ ಬೆಳೆಗೆ ಕೊಳೆತುಹೋಗುತ್ತಿದೆ. ಹೀಗಾಗಿ ಇಳುವರಿ ಕುಸಿದು ಬೇಡಿಕೆಗೆ ತಕ್ಕಂತೆ ಪೂರೈಕೆ ಕಷ್ಟವಾದಾಗ, ಬೆಲೆ ಸಹಜವಾಗಿಯೇ ಏರಲಿದೆ.
ಆದರೆ, ಟೊಮೇಟೋದಂತೆ ಈರುಳ್ಳಿ ವಿಚಾರ ದಲ್ಲೂ ಕೇಂದ್ರ ಸರ್ಕಾರ ಮುಂಜಾಗ್ರತೆ ವಹಿಸಿದೆ. ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನೇಫಡ್ ) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ವತಿಯಿಂದ ಈವರೆಗೆ 2.9 ಲಕ್ಷ ಮೆ.ಟನ್ ಈರುಳ್ಳಿ ಸಂಗ್ರಹಿಸಿ ಗೋದಾಮುಗಳಲ್ಲಿ ದಾಸ್ತಾನು ಮಾಡಿದೆ ಎನ್ನಲಾಗಿದೆ. ಈ ಎರಡೂ ಸಂಸ್ಥೆಗಳಿಂದ ಈರುಳ್ಳಿ ಖರೀದಿ ಪ್ರಕ್ರಿಯೆ ಇನ್ನೆರಡು ವಾರದಲ್ಲಿ ಮುಗಿಯಲಿದೆ. ಈ ವರ್ಷ 3 ಲಕ್ಷ ಮೆ. ಟನ್ ಈರುಳ್ಳಿ ಸಂಗ್ರಹಿಸುವಂತೆ ಈ ಸಂಸ್ಥೆಗಳಿಗೆ ಕೇಂದ್ರ ಸೂಚನೆ ನೀಡಿದೆ. ಈ ದಾಸ್ತಾನನ್ನು ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ಈರುಳ್ಳಿ ಬೆಲೆ ಏರಿದ ವೇಳೆ ದೇಶಾದ್ಯಂತ ವಿತರಿಸಿ ಬೆಲೆ ನಿಯಂತ್ರಣದಲ್ಲಿರಿಸಲು ಕೇಂದ್ರ ಯೋಜಿಸುತ್ತಿದೆ.