ಮುಧೋಳ: ನಾಲ್ಕು ವಿವಿಧ ಪ್ರಕರಣಗಳನ್ನು ಭೇದಿಸಿ, ಅದಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ಮೋಸಕ್ಕೊಳಗಾದ, ಕಳ್ಳತನವಾಗಿದ್ದ ಸಕ್ಕರೆ, ಬಂಗಾರ, ಟ್ರಾೃಕ್ಟರ್, ಮೊಬೈಲ್ ಸೇರಿದಂತೆ ಒಟ್ಟು 34,47,400 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಪಿಐ ಮಹದೇವ ಶಿರಹಟ್ಟಿ ತಿಳಿಸಿದರು.
ನಗರದ ಸಿಪಿಐ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಿರಾಣಿ ಕಾರ್ಖಾನೆ ಸಕ್ಕರೆ ಗೋದಾಮಿನಿಂದ ಒಟ್ಟು 10,83,600 ರೂ. ಮೌಲ್ಯದ ಸಕ್ಕರೆ ಹಾಗೂ ಹತ್ತು ಲಕ್ಷ ರೂ. ಮೌಲ್ಯದ ಲಾರಿಯೊಂದಿಗೆ ಪರಾರಿಯಾಗಿದ್ದ ಶಿಗ್ಗಾವಿ ತಾಲೂಕಿನ ಶಿಶುವಿನಹಾಳ ಗ್ರಾಮದ ವಿಜಯ ಸಿದ್ದಪ್ಪ ದಳವಾಯಿ ಎಂಬಾತನನ್ನು ಸಕ್ಕರೆ ಲೋಡ್ ಸಹಿತ ಲಾರಿಯನ್ನು ಮುಧೋಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಸೋರಗಾಂವ ಗ್ರಾಮದ ಭಾಗವ್ವ ಲಕ್ಷಪ್ಪ ಯರಗುದ್ರಿ ಅವರ ಮನೆಯಲ್ಲಿ 2,54,800 ಮೌಲ್ಯದ, ಒಟ್ಟು 67 ಗ್ರಾಂ ತೂಕದ ಬಂಗಾರದ ಸಾಮಾನುಗಳ ಕಳ್ಳತನವಾಗಿದ್ದ ಪ್ರಕರಣವನ್ನು ಭೇದಿಸಿ, ಆಪಾದಿತ ಮಹಿಳೆಯನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಅಲ್ಲದೆ,ಕಳೆದ ಎರಡು ತಿಂಗಳ ಅಂತರದಲ್ಲಿಯೇ 1.20 ಲಕ್ಷ ರೂ. ಮೌಲ್ಯದ ಒಟ್ಟು 14 ವಿವಿಧ ಕಂಪನಿ ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಅದರ ವಾರಸುದಾರರಿಗೆ ಒಪ್ಪಿಸಲಾಗಿದೆ ಎಂದರು.
ಮತ್ತೊಂದು ಪ್ರಕರಣದಲ್ಲಿ ಸಿದ್ದಾಪುರದ ಮಹಾದೇವ ಸತ್ಯಪ್ಪ ಗಸ್ತಿ ಅವರ ದೂರಿನ ಮೇರೆಗೆ ಘಟನೆ ನಡೆದ 24 ಗಂಟೆಯೊಳಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ ತನಿಖಾ ತಂಡ ಕಳುವಾದ ಟ್ರಾೃಕ್ಟರ್ ಜತೆ ಮತ್ತೊಂದು ಹಳೇ ಪ್ರಕರಣದಲ್ಲಿನ ಟ್ರಾೃಕ್ಟರ್ ಪತ್ತೆ ಹಚ್ಚಿದ್ದು, ಆರೋಪಿಗಳಿಂದ ಒಟ್ಟು 9.85 ಲಕ್ಷ ರೂ. ಎರಡು ಟ್ರಾೃಕ್ಟರ್ ಹಾಗೂ ಚಿನ್ನ, ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಟ್ರಾೃಕ್ಟರ್ ಕಳ್ಳತನ ಆರೋಪದ ಮೇಲೆ ಕುಂದಗೋಳದ ಸತೀಶ ಪಾಟೀಲ, ದೇವಗಿರಿಯ ದೇವರಾಜ ಕಟ್ಲಾವರ, ಪದ್ಮಾ ಸುಭಾಸ ಹುಲಗನ್ನವರ, ಅಣ್ಣೀಗೇರಿಯ ಮಹ್ಮದಲಿ ಎಂಬುವವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸಿಪಿಐ ಮಾಹಿತಿ ನೀಡಿದರು.
ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ. ಜಯಪ್ರಕಾಶ, ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ, ಡಿಎಸ್‌ಪಿ ಇ. ಶಾಂತವೀರ ಮಾರ್ಗದರ್ಶನದಲ್ಲಿ, ಮುಧೋಳದ ಪಿಎಸ್‌ಐ ಅಜೀತಕುಮಾರ ಹೊಸಮನಿ, ಕ್ರೈಂ ಪಿಎಸ್‌ಐ ಕೆ.ಬಿ. ಮಾಂಗ, ಸಿಬ್ಬಂದಿ ರಂಗನಾಥ ಬಿ. ಕಟಗೇರಿ, ಶ್ರೀಶೈಲ ಕೆಸರಗೊಪ್ಪ, ಭೀರಪ್ಪ ಕುರಿ, ಹಣಮಂತ ಮಾದರ, ಮಾರುತಿ ದಳವಾಯಿ, ಮನೋಹರ ಕುರಿ, ದಾದಾಪೀರ ಎಂ. ಅತ್ತಾವತ್, ಸುನೀಲ ಐದಮನಿ, ಚಾಲಕರಾದ ಶ್ರೀಕಾಂತ ಬೆನಕಟ್ಟ, ಸುರೇಶ ಭದ್ರಶೆಟ್ಟಿ ಪ್ರಕರಣ ಭೇದಿಸುವಲ್ಲಿ ಸಹಕರಿಸಿದ್ದಾರೆ. ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗೆ ಎಸ್‌ಪಿ ಸೂಕ್ತ ಬಹುಮಾನ ಘೋಷಿಸಿದ್ದಾರೆ ಎಂದು ಸಿಪಿಐ ಹೇಳಿದರು.